ರಾಮನಗರದಲ್ಲಿ ರೈತ ಸಂಘದ ಮುಖಂಡರಾದ ಆಣಿಗೆರೆ ಮಲ್ಲಯ್ಯ, ಕುಮಾರಸ್ವಾಮಿ, ಕೃಷ್ಣಯ್ಯ, ತಿಮ್ಮೇಗೌಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
- ಬಿಡದಿಯ ರೈತರ ಮೇಲಿನ ಪ್ರಕರಣ ಖಂಡನೀಯ
- ಬೇಷರತ್ ವಾಪಾಸ್ ಪಡೆದುಕೊಳ್ಳಬೇಕು
- ಯೋಜನೆ ಕೈ ಬಿಡಬೇಕು
- ರೈತ ಸಂಘದ ಮುಖಂಡರಿಂದ ಆಗ್ರಹ
ರಾಮನಗರ: ಬಿಡದಿಯ ಭೈರಮಂಗಲದ ಮಂಡಲಹಳ್ಳಿ ಬಳಿ ನಡೆದ ಘಟನೆ ಹಿನ್ನೆಲೆಯಲ್ಲಿ ರೈತರ ಮೇಲೆ ಹಾಕಲಾಗಿರುವ ಪ್ರಕರಣಗಳನ್ನು ಬೇಷರತ್ ಆಗಿ ಹಿಂದಕ್ಕೆ ಪಡೆದುಕೊಳ್ಳುವಂತೆ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆಣಿಗೆರೆ ಮಲ್ಲಯ್ಯ ಆಗ್ರಹಿಸಿದರು.
ನಗರದ ರೈತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಕಳೆದ 500 ದಿನಗಳಿಂದಲೂ ರೈತರು ತಮ್ಮ ಭೂಮಿಗಾಗಿ ಹೋರಾಟ ಮಾಡುತ್ತಿದ್ದಾರೆ. ರೈತರ ಮನವಿ ಹೊರತಾಗಿಯೂ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಹೋಗಿದ್ದು ತಪ್ಪು. ಇಂತಹ ಸನ್ನಿವೇಶದಲ್ಲಿ ತಮ್ಮ ಜಮೀನು ಉಳಿಸಿಕೊಳ್ಳಬೇಕು ಎಂದು ಹೋರಾಟ ನಡೆಸಿದ್ದಾರೆ.
ಅಲ್ಲಿ ರೈತರು ಕಲ್ಲು ತೂರಾಟ ಮಾಡಲಿಲ್ಲ, ಬದಲಿಗೆ ರೈತರಿಗೆ ಕಳಂಕ ತರಬೇಕು ಎನ್ನುವ ಕಾರಣಕ್ಕೆ ಕೆಲವು ಪಟ್ಟಭದ್ರರೇ ಕಲ್ಲು ತೂರಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಕೆ ರೈತರ ಮೇಲೆ ದಾಖಲು ಮಾಡಿರುವ ಎರಡೂ ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಮಲ್ಲಯ್ಯ ಒತ್ತಾಯಿಸಿದರು.
ರೈತ ಮುಖಂಡ ಕುಮಾರಸ್ವಾಮಿ ಮಾತನಾಡಿ ರೈತರು ಪೊರಕೆಯಿಂದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ. ಆದರೆ ಅವರ ಮೇಲೆ ಕೊಲೆ ಯತ್ನದ 307 ಸೆಕ್ಷನ್ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಪೊರಕೆಯಿಂದ ಕೊಲೆ ಮಾಡಲು ಸಾಧ್ಯವೇ ಎನ್ನುವುದನ್ನು ಪೊಲೀಸರೇ ಹೇಳಬೇಕು. ದೂರು ನೀಡಿದ ನಂತರ ಪ್ರಾಥಮಿಕ ತನಿಖೆಯನ್ನು ಮಾಡದೇ ಪೊಲೀಸರು ಒತ್ತಡದಿಂದ ರೈತರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ. ಈ ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು. ಒಂದು ವೇಳೆ ರೈತರ ವಿರುದ್ಧದ ಪ್ರಕರಣ ಹಿಂಪಡೆಯದಿದ್ದರೆ ರಾಜ್ಯಾಧ್ಯಂತ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಿಎಂ ಖಾತ್ರಿ ನೀಡಲಿ
ಬಿಡದಿ ಯೋಜನೆ ಜಾರಿ ಸಂಬಂಧ ರೈತರಿಂದ ಬಲವಂತದ ಭೂ ಸ್ವಾಧೀನ ಇಲ್ಲ ಎಂದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇದಕ್ಕೆ ಖಾತ್ರಿಯನ್ನು ನೀಡಬೇಕು. ಜತೆಗೆ ಅಧ್ಯಯನಕ್ಕೆ ಸಮಿತಿ ನೇಮಕ ಮಾಡುವುದಾಗಿ ಹೇಳಿದ್ದಾರೆ. ಆದರೆ ಆ ಸಮಿತಿ ಯಾರ ನೇತೃತ್ವದಲ್ಲಿ ರಚನೆ ಆಗಲಿದೆ ಎನ್ನುವುದನ್ನು ತಿಳಿಸಬೇಕು ಎಂದು ಮಲ್ಲಯ್ಯ ಮತ್ತು ಕುಮಾರಸ್ವಾಮಿ ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಯೋಜನೆನ್ನೇ ಕೈ ಬಿಡಲಿದ್ದಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಯೋಜನೆ ಜಾಗವನ್ನು ಬರಡು ಭೂಮಿ ಎಂದು ಹೇಳಿದ್ದಾರೆ. ಹಾಗಾದರೆ ಇಲ್ಲಿ ಬೆಳೆದಿರುವ ಬಾಳೆ, ತೆಂಗು, ಮಾವು ಎಲ್ಲಿಂದ ಬಂದಿವೆ ಎಂದು ಪ್ರಶ್ನಿಸಿದರು.
ರಾಜ್ಯದ ಜಿಡಿಪಿ ಕೇವಲ ಶೇ.7ರಷ್ಟಿದೆ, ಪಕ್ಕದ ತಮಿಳು ನಾಡಿನಲ್ಲಿ ಜಿಡಿಪಿ ಶೇ.11ರಷ್ಟಿದೆ. ಇದಕ್ಕೆ ಕಾರಣ ಅವರು ಅಭಿವೃದ್ಧಿಯನ್ನು ರಾಜಧಾನಿ ಕೇಂದ್ರಿತವಾಗಿ ಮಾಡಿಲ್ಲ, ಹಲವಾರು ಜಿಲ್ಲೆಗಳನ್ನು ಅವರು ಅಭಿವೃದ್ಧಿ ಪಡಿಸಿದ್ದಾರೆ.ಇದರಿಂದಾಗಿ ಅಲ್ಲಿ ಜಿಡಿಪಿ ಹೆಚ್ಚಿದೆ.
ಬೈ ಪ್ಯಾಷನ್ ರಾಜಕಾರಣ ಮಾಡುವ ಉದ್ಯಮಿಯೂ ಆಗಿರುವ ಮುಖ್ಯಮಂತ್ರಿ ಬೆಂಗಳೂರಿನ ಸುತ್ತ ಅಭಿವೃದ್ಧಿಯ ಗಿರಕಿ ಹೊಡೆಯುವುದನ್ನು ಬಿಟ್ಟು, ಉತ್ತರ ಕರ್ನಾಟಕ ಸೇರಿದಂತೆ ಇತರೆ ಜಿಲ್ಲೆಗಳ ಬಂಜರು ಭೂಮಿಯನ್ನು ಆಯ್ಕೆ ಮಾಡಿಕೊಂಡು ರಾಜ್ಯದ ಸಮಗ್ರ ಅಭಿವೃದ್ಧಿ ಮಾಡಲಿ ಎಂದು ಒತ್ತಾಯಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಕೃಷ್ಣಯ್ಯ, ಪ್ರಧಾನ ಕಾರ್ಯದಶಿ ನಾಗರಾಜು, ಮುಖಂಡರಾದ ಎನ್.ವೆಂಕಟೇಶ್, ತಿಮ್ಮೇಗೌಡ, ಎಲ್.ಶಿವಪ್ಪ, ಹುಚ್ಚಯ್ಯ, ಶಿವಲಿಂಗಯ್ಯ ಬಾಲರಾಜ್ ಮುಂತಾದವರು ಇದ್ದರು.