ಕುದೂರು ಪಟ್ಟಣದ ಬಸ್​ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳಲು ಆಸನಕ್ಕಾಗಿ ಪ್ರಯಾಣಿಕರು ಮುಗಿಬಿದ್ದಿರುವುದು. 
ಬೆಂಗಳೂರು ದಕ್ಷಿಣ

ಕುದೂರಿಗೂ ಬಿಎಂಟಿಸಿ ಬರಲಿ

ಕುದೂರು:"ಸಮುದ್ರದ ನೆಂಟಸ್ತನವಿದ್ದರೂ ಉಪ್ಪಿಗೆ ಬಡತನ' ಎಂಬ ಗಾದೆ ಮಾತಿನಂತೆ ಕುದೂರು ಸಮೀಪವೇ ರಾಷ್ಟ್ರೀಯ ಹೆದ್ದಾರಿ&75 ಹಾದು ಹೋದರೂ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಜನ ರಾಜಧಾನಿ ಬೆಂಗಳೂರಿಗೆ ಹೋಗಲು ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್​ ಇಲ್ಲದೆ ಪರಿತಪಿಸುತ್ತಿದ್ದಾರೆ.
ಶಿಣ, ಉದ್ಯೋಗ ಸೇರಿದಂತೆ ವಿವಿಧ ಕೆಲಸಕಾರ್ಯ ನಿಮಿತ್ತ ಈಭಾಗದಿಂದ ಬೆಂಗಳೂರಿಗೆ ಪ್ರಯಾಣಿಸುವುದು ಅನಿವಾರ್ಯ. ಆದರೆ, ಬೆಳಗ್ಗೆ 6ರಿಂದ 11.30ರವರೆಗೆ 5 ಕೆಎಸ್​ಆರ್​ಟಿಸಿ ಬಸ್​ಗಳು ಸೇರಿ 5 ಟ್ರಿಪ್​ ಸಂಚರಿಸಿದರೆ ಸಂಜೆ 5 ಗಂಟೆವರೆಗೆ ಯಾವುದೇ ಬಸ್​ ಇಲ್ಲ. 5 ಗಂಟೆಗೆ ಕುದೂರಿನಿಂದ ಹೊರಡುವ ಬಸ್​ 10.30ಕ್ಕೆ ಮರಳುತ್ತದೆ. ಶಕ್ತಿ ಯೋಜನೆ ಜಾರಿಯಾದ ಮೇಲೆ ಈಗಿರುವ ಬಸ್​ಗಳೂ ಸಾಕಾಗುತ್ತಿಲ್ಲ. ಒಂದು ಈ ಬಸ್​ಗಳು ತಪ್ಪಿದರೆ ಸೋಲೂರು, ಮರೂರು ಹ್ಯಾಂಡ್​ಪೋಸ್ಟ್​ ಬಳಿಯ ಹೆದ್ದಾರಿ ಬದಿ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಬಿಸಿಲು, ಮಳೆ ಲೆಕ್ಕಿಸದೆ ಬೆಂಗಳೂರು ಬಸ್​ಗೆ ಕಾಯಬೇಕು. ಆದ್ದರಿಂದ ಹೆಚ್ಚುವರಿ ಬಸ್​ಗಳ ಸಂಚಾರ, ಬಿಎಂಟಿಸಿ ಸೇವೆ ಒತ್ತಾಯಿಸಿದ್ದಾರೆ.
ಈಡೇರುವುದೇ ಶಾಸಕರ ಭರವಸೆ?
ನಿತ್ಯ ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ಬಸ್​ಗಳ ಅಗತ್ಯ ಮನಗಂಡು ಶಾಸಕ ಬಾಲಕೃಷ್ಣ, ವಿಧಾನಸಭಾ ಚುನಾವಣೆ ವೇಳೆ ಕುದೂರು ಪಟ್ಟಣದಲ್ಲಿಯೇ ಸುಸಜ್ಜಿತ ಕೆಎಸ್​ಆರ್​ಟಿಸಿ ಬಸ್​ ಡಿಪೋ ಮತ್ತು ನಿಲ್ದಾಣ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಮುಂದಿನ ತಿಂಗಳಲ್ಲಿ ಡಿಪೋ, ಬಸ್​ ನಿಲ್ದಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವುದಾಗಿ ಇತ್ತೀಚೆಗೆ ತಿಳಿಸಿದ್ದಾರೆ.
ಅಲ್ಲದೆ ಬಿಎಂಟಿಸಿ ಹಿರಿಯ ಅಧಿಕಾರಿಗಳೊಂದಿಗೆ ಬುಧವಾರ ಶಾಸಕರು ಸಭೆ ನಡೆಸಿ, ಮಾಗಡಿ ಹಾಗೂ ಕುದೂರು ಭಾಗಗಳಲ್ಲಿ ಬಿಎಂಟಿಸಿ ಬಸ್​ ಸೌಕರ್ಯದ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಕುದೂರಿಗೆ ಬಿಎಂಟಿಸಿ ಬಸ್​ ಸಂಚಾರದ ವ್ಯವಸ್ಥೆ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ, 2022ರಿಂದಲೂ ಪಟ್ಟಣದ ಯುವಕರ ಬಳಗವೊಂದು ಕುದೂರಿಗೆ ಬಿಎಂಟಿಸಿ ಬಸ್​ ವ್ಯವಸ್ಥೆಯ ಬಗ್ಗೆ ಆಗಿನ ಬಿಎಂಟಿಸಿ ನಿರ್ದೇಶಕ ಕೆ.ಪಿ.ಭೃಂಗೇಶ್​ ಅವರನ್ನು ಭೇಟಿ ಮಾಡಿ 150ಕ್ಕೂ ಹೆಚ್ಚು ಸಹಿವುಳ್ಳ ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಶಾಸಕ ಸೂಚನೆ ಬಳಿಕವಾದರೂ ಪಟ್ಟಣಕ್ಕೆ ಬಿಎಂಟಿಸಿ ಬಸ್​ಗಳು ಸಂಚರಿಸುತ್ತವೆಯೇ ಎಂಬುದನ್ನು ಕಾಯ್ದು ನೋಡಬೇಕಿದೆ.
ತಾತ್ಸಾರ ಏಕೆ?
ರಾಮನಗರವು ಬೆಂಗಳೂರು ದಣ ಜಿಲ್ಲೆ ಎಂದು ಮರುನಾಮಕರಣಗೊಂಡ ಬಳಿಕ ಕುದೂರು ಭಾಗಕ್ಕೆ ಬಿಎಂಟಿಸಿ ಬಸ್​ಗಳ ಭಾಗ್ಯ ಒದಗಿ ಬರುತ್ತದೆ ಎಂದು ಪ್ರಯಾಣಿಕರು ಆಸೆಗಣ್ಣಿನಿಂದ ಕಾಯುತ್ತಿದ್ದರು. ಈ ಮಧ್ಯೆ ಬಿಎಂಟಿಸಿ ಬಸ್​ಗಳ ಓಡಾಟಕ್ಕೆ ಇದ್ದ ಕೆಲ ನಿಯಮಗಳನ್ನು ತಿದ್ದುಪಡಿ ಮಾಡಲಾಗಿ, ಜಿಲ್ಲಾಕೇಂದ್ರ ಸೇರಿದಂತೆ ರಾಮನಗರ, ಚನ್ನಪಟ್ಟಣ, ಮಾಗಡಿ, ಬಿಡದಿ, ಹಾರೋಹಳ್ಳಿ, ಕನಕಪುರ ಭಾಗಗಳಲ್ಲಿ ಬಿಎಂಟಿಸಿ ಬಸ್​ ಓಡಾಟಕ್ಕೆ ಚಾಲನೆ ನೀಡಲಾಗಿದೆ. ಆದರೂ ಕುದೂರು ಪಟ್ಟಣಕ್ಕೆ ಈ ಭಾಗ್ಯ ಒದಗಿ ಬಂದಿಲ್ಲ. ಈ ಬಗ್ಗೆ ಅಂದರೆ ಕುದೂರು ಭಾಗಕ್ಕೂ ಬಿಎಂಟಿಸಿ ಸೇವೆಗೆ ಹಲವು ಸಭೆ ಸಮಾರಂಭಗಳಲ್ಲಿ ನಾಗರಿಕರು ಸಾರಿಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದರೂ ಅಧಿಕಾರಿಗಳು ತಾತ್ಸಾರ ತೋರುತ್ತಿದ್ದಾರೆ.
ವ್ಯಾಪಾರಕ್ಕೆ ಸಮಸ್ಯೆ
ರೇಷ್ಮೇಸಿರೆಗೆ ಖ್ಯಾತಿ ಪಡೆದಿರುವ ಕುದೂರು ಪಟ್ಟಣದಲ್ಲಿ ಸಾವಿರಾರು ನೇಕಾರರಿದ್ದಾರೆ. ಅವರು ವೃತ್ತಿ ಸಂಬಂಧಿತ ಕಚ್ಚಾ ವಸ್ತುಗಳಿಗಾಗಿ, ಸೀರೆ ಮಾರಾಟಕ್ಕಾಗಿ ಬೆಂಗಳೂರಿಗೆ ತೆರಳಲು 2&3 ಬಸ್​ಗಳನ್ನು ಹತ್ತಿ, ಇಳಿಯಬೇಕು. ಬೆಂಗಳೂರಿಗೆ ಗ್ರಾಮೀಣ ಭಾಗದ ತಾಜಾ ಹಾಲು, ತರಕಾರಿ, ಹಣ್ಣು ಹಂಪಲು ಬೇಕು. ಆದರೆ ನಗರ ಹೊರವಲಯದ ಗ್ರಾಮೀಣ ಭಾಗಕ್ಕೆ ಬೆಂಗಳೂರು ನಗರ ಸಾರಿಗೆ ವ್ಯವಸ್ಥೆ ಬೇಡವೇ ಎಂದು ಹಲವರು ಸರ್ಕಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.
ಯಾವ ಮಾರ್ಗಗಳಲ್ಲಿ ಬಿಎಂಟಿಸಿ ಬಸ್​ ಬೇಕು
* ಕುದೂರು, ಅರಸನಕುಂಟೆ, ಸೋಲೂರು, ನೆಲಮಂಗಲ ಮೂಲಕ ಮೆಜೆಸ್ಟಿಕ್​.
* ಕುದೂರು, ಮರೂರು, ಸೋಲೂರು, ನೆಲಮಂಗಲ ಮೂಲಕ ಮೆಜೆಸ್ಟಿಕ್​.
* ಕುದೂರು, ಮರೂರು, ಮಾಗಡಿ, ತಾವರೆಕೆರೆ, ಕೆ.ಆರ್​.ಮಾರ್ಕೆಟ್​.
* ಕುದೂರು, ಶಿವಗಂಗೆ, ದಾಬಸ್​ಪೇಟೆ, ನೆಲಮಂಗಲ ಮೂಲಕ ಮೆಜೆಸ್ಟಿಕ್​.
"

ಕುದೂರಿಗೆ ಬಿಎಂಟಿಸಿ ಬಸ್​ ಬೇಕೆನ್ನುವುದು ಈ ಭಾಗದ ಜನರ ಬಹುದಿನಗಳ ಬೇಡಿಕೆ. ಕೆಲವೇ ದಿನಗಳಲ್ಲಿ ಇಲ್ಲಿನ ಪ್ರಯಾಣಿಕರ ಬೇಡಿಕೆಯಂತೆ ಕುದೂರು ಪಟ್ಟಣದಿಂದ ಬೆಂಗಳೂರಿಗೆ ಬಿಎಂಟಿಸಿ ಬಸ್​ ಸೇವೆಯನ್ನು ಆರಂಭಿಸಲಾಗುವುದು. ಇದರಿಂದ ಸಾವಿರಾರು ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಉದ್ಯೋಗಿಗಳು, ಗಾರ್ಮೆಂಟ್ಸ್​ ಮಹಿಳೆಯರಿಗೆ ಅನುಕೂಲವಾಗಲಿದೆ.

— > ಎಚ್​.ಸಿ.ಬಾಲಕೃಷ್ಣ ಮಾಗಡಿ ಶಾಸಕ
"

ಕುದೂರು ಭಾಗದಿಂದ ಬೆಂಗಳೂರಿಗೆ ಬೆಳಗ್ಗೆ ಹಾಗೂ ಸಂಜೆ ವೇಳೆ ಹೆಚ್ಚು ಬಸ್​ಗಳ ಅವಶ್ಯಕತೆ ಇದೆ. ಶಾಸಕರು ಆದಷ್ಟು ಬೇಗ ನಗರ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು.

— > ಮಂಜುನಾಥ್​ ದೈಹಿಕ ಶಿಣ ಶಿಕ, ಕುದೂರು