ಬಿಡದಿ ಭಾಗದಲ್ಲಿ ಕಾಣಿಸಿಕೊಂಡ ಚಿರತೆ
- ಮರಿಗಳೊಂದಿಗೂ ಚಿರತೆ ಪ್ರತ್ಯಕ್ಷ್ಯ
- ಆತಂಕದಲ್ಲಿ ಬಿಡದಿ ಜನ
ಪಟ್ಟಣ ಸೇರಿ ಹೋಬಳಿಯಲ್ಲಿ ಚಿರತೆಗಳ ಹಾವಳಿ ದಿನೇದಿನೆ ಹೆಚ್ಚಾಗುತ್ತಿದ್ದು, ನಿತ್ಯ ಒಂದಲ್ಲ ಒಂದು ಗ್ರಾಮದಲ್ಲಿ ನಾಯಿ, ಮೇಕೆ, ಸೀಮೆ ಹಸುಗಳು ಬಲಿಯಾಗುತ್ತಿವೆ.
ಬಿಡದಿ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಚಿರತೆಗಳ ಉಪಟಳ ಹೆಚ್ಚಾಗಿದೆ. ಅದರಲ್ಲೂ ದಾಸಪ್ಪನದೊಡ್ಡಿ, ಶೆಟ್ಟಿಗೌಡನದೊಡ್ಡಿ, ತಮ್ಮಣ್ಣನದೊಡ್ಡಿ ಗ್ರಾಮಗಳಲ್ಲಿ ಚಿರತೆ ದಾಳಿ ಪದೇಪದೆ ವರದಿಯಾಗುತ್ತವೆ. ಗ್ರಾಮಗಳ ಕೂಗಳತೆ ದೂರದಲ್ಲಿ ಹುಲ್ತಾರ್ ಮೀಸಲು ಅರಣ್ಯ ಪ್ರದೇಶ ಇದ್ದು, ಇಲ್ಲಿ ಚಿರತೆಗಳು ಹೆಚ್ಚಿವೆ. ರಾತ್ರಿ ಜನವಸತಿಯತ್ತ ಬರುವ ಚಿರತೆಗಳು ಕುರಿ, ಸಾಕು ನಾಯಿಗಳನ್ನು ಹೊತ್ಯೊಯ್ಯುತ್ತಿವೆ. ಇತ್ತೀಚೆಗಷ್ಟೇ 3-4 ಮೇಕೆಗಳನ್ನು ಕೊಂದು ಹಾಕಿದ್ದು ಜನರಲ್ಲಿ ಭಯಮೂಡಿಸಿದೆ. ತಮ್ಮಣ್ಣನದೊಡ್ಡಿ ಗ್ರಾಮದ ರೈತ ಕೃಷ್ಣಪ್ಪ ಅವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿದ್ದ ಸೀಮೆ ಹಸು ಮೇಲೆ ಚಿರತೆ ದಾಳಿ ಮಾಡಿತ್ತು. ಪರಿಣಾಮ ಜನ ಆತಂಕದಲ್ಲಿ ದಿನದೂಡುವ ಪರಿಸ್ಥಿತಿ ಇದೆ. ಇತ್ತೀಚೆಗಂತೂ ನಡು ರಸ್ತೆಗಳಲ್ಲಿ ನಿರ್ಭಯವಾಗಿ ಚಿರತೆಗಳು ಓಡಾಡುತ್ತಿವೆ.
ಕಲ್ಲುಗೋಪಹಳ್ಳಿ ಗ್ರಾಮದಲ್ಲಿ ಒಂದಲ್ಲ ನಾಲ್ಕು ಚಿರತೆಗಳು ಗ್ರಾಮದ ಬೀದಿಯಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಕೆಲವರು ಚಿರತೆ ಗುಂಪು ಕಂಡು ಮೊಬೈಲ್ ಗಳಲ್ಲಿ ಚಿತ್ರೀಕರಿಸಿದ್ದಾರೆ. ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ. ವಾರದ ಹಿಂದೆ ರಾತ್ರಿ ಮೂರು ಚಿರತೆಗಳು ಗ್ರಾಮದ ರಸ್ತೆಗಳಲ್ಲಿ ಸಂಚರಿಸಿದ್ದವು. ಇವುಗಳಲ್ಲಿ ಎರಡು ಮರಿಗಳ ಜತೆಗೆ ಒಂದು ಚಿರತೆ ಇತ್ತು. 4 ದಿನಗಳ ಹಿಂದೆ ಮತ್ತೊಂದು ಚಿರತೆ ಗ್ರಾಮದ ಬೀದಿ ಅಲ್ಲದೇ ಕೆಲ ಮನೆಗಳ ಮೇಲೂ ಓಡಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಿರತೆ ಹಾವಳಿ ತಡೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಅವುಗಳನ್ನು ಸೆರೆ ಹಿಡಿಯಲು ಗ್ರಾಮದ ಕೂಗಳತೆ ದೂರದಲ್ಲಿ ಬೋನು ಅಳವಡಿಸಿದ್ದಾರೆ. ಆದರೆ ಚಾಲಾಕಿ ಚಿರತೆಗಳು ಬೋನಿನತ್ತ ಸುಳಿಯದೆ ಗ್ರಾಮದಲ್ಲಿ ನಿರ್ಭಯವಾಗಿ ಓಡುತ್ತಿವೆ.
ಜನವಸತಿ ಬಳಿ ಕಾಣಿಸಿಕೊಳ್ಳುವ ಚಿರತೆಗಳನ್ನು ಕೂಡಲೇ ಸೆರೆ ಹಿಡಿಯಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈಗ ನಾಯಿ, ಮೇಕೆ, ಹಸು ಮೇಲೆ ದಾಳಿ ಮಾಡುತ್ತಿರುವ ಚಿರತೆಗಳು ಮುಂದೆ ಜನರ ಮೇಲು ಸಹ ದಾಳಿ ಮಾಡುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಚಿರತೆಗಳ ಉಪಟಳ ಹೆಚ್ಚಾಗಿದೆ. ಯಾರ ಭಯವಿಲ್ಲದೆ ರಾಜಾರೋಷವಾಗಿ ಗ್ರಾಮದ ಒಳಗೆ ಬಂದು, ಸಾಕು ಪ್ರಾಣಿಗಳನ್ನು ಹೊತ್ತೊಯುತ್ತಿವೆ. ಚಿರತೆ ಜತೆಗೆ ಮರಿಗಳು ಸಹ ಕಾಣಿಸಿಕೊಳ್ಳುತ್ತಿದ್ದು, ಅವುಗಳನ್ನು ಸೆರೆ ಹಿಡಿಯುವಂತೆ ವಲಯ ಅರಣ್ಯ ಅಧಿಕಾರಿಗಳು, ಡಿಎïಒಗೂ ಮನವಿ ಮಾಡಲಾಗಿದೆ. ಕೇವಲ ಬೋನು ಇಟ್ಟುಹೋದರೆ ಸಾಲದು, ರಾತ್ರಿ ಗಸ್ತು ಕೈಗೊಳ್ಳಬೇಕು.
ಪುರಸಭಾ ಸದಸ್ಯ, ಕಲ್ಲುಗೋಪಹಳ್ಳಿ
ಬಿಡದಿ ಭಾಗದ ಹಲವು ಗ್ರಾಮಗಳಲ್ಲಿ ಚಿರತೆಗಳು ಕಾಣಸಿಕೊಳ್ಳುತ್ತಿವೆ. ಕಳೆದ ಕೆಲ ದಿನಗಳ ಹಿಂದೆ ಕಲ್ಲುಗೋಪಹಳ್ಳಿ ಗ್ರಾಮದಲ್ಲಿ ಮರಿಗಳ ಜತೆಗೆ ಚಿರತೆ ಓಡಾಡಿದ್ದು, ಇಲಾಖೆಯಿಂದ ಆಯ್ದ ಸ್ಥಳದಲ್ಲಿ ಬೋನು ಇರಿಸಿ, ನಾಯಿ ಕಟ್ಟಿಹಾಕಲಾಗಿದೆ. ಆದರೂ ಚಿರತೆ ಬೋನಿನತ್ತ ಬಾರದೆ ಸ್ಥಳ ಬದಲಾಯಿಸುತ್ತಿದೆ. ರಾತ್ರಿ ವೇಳೆ ಪಟಾಕಿಗಳನ್ನೂ ಸಿಡಿಸಲಾಗುತ್ತಿದ್ದು, ಶೀಘ್ರದಲ್ಲೇ ಸೆರೆ ಹಿಡಿಯಲಾಗುವುದು.