ಮಾಗಡಿ: ತಾಲೂಕಿನ ಮಲ್ಲಪ್ಪನ ಹಳ್ಳಿಯ ಮನೆ ಮುಂಭಾಗ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಸಾಯಿಸಿದೆ. ತಾಲೂಕಿನ ಮಲ್ಲಪ್ಪನಹಳ್ಳಿಯ ರೈತ ಎಂ.ಸಿ.ರಂಗಸ್ವಾಮಯ್ಯ ಬೆಳಗ್ಗೆ ಹಸುವಿನಿಂದ ಹಾಲು ಕರೆದು ಕೊಟ್ಟಿಗೆಯಿಂದ ಮನೆ ಮುಂಭಾಗ ಕಟ್ಟಿದರು. ಸೋಮವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಏಕಾಏಕಿ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಸಮೀಪದ ಅಡಕೆ ಮರದ ಬಳಿ ಹೊತೋಯ್ದು ರಕ್ತ ಹೀರಿದೆ. ರಂಗಸ್ವಾಮಯ್ಯ ಡೇರಿಗೆ ಹಾಲು ಹಾಕಿ ಬಂದು ನೋಡಿದ ವೇಳೆ ಟನೆ ಕಂಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲಿಸಿದರು.
ಕಳೆದ 5 ತಿಂಗಳಿಂದ ಹಗಲಿನಲ್ಲಿ ಗ್ರಾಮದ ಬಳಿ ಚಿರತೆ ಪ್ರತ್ಯಕ್ಷವಾಗುತ್ತಿರುವುದರಿಂದ ಶಾಲಾ ಮಕ್ಕಳು ಹಾಗೂ ರೈತರು ಜಮೀನುಗಳಿಗೆ ತೆರಳಲು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ಬೋನು ಇಟ್ಟು ಚಿರತೆ ಸೆರೆ ಹಿಡಿಯುವಂತೆ ಗ್ರಾಮದ ಮುಖಂಡರು ಮನವಿ ಮಾಡಿದ್ದಾರೆ.