ರಾಮನಗರ ತಾಲೂಕಿನ ಗ್ರಾಮವೊಂದರಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವುದು.
- ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಮಸ್ಯೆ
- ಟ್ಯಾಂಕರ್ ಮೊರೆ ಹೋದ ಜಿಲ್ಲಾಡಳಿತ
ಈಗಾಗಲೇ ಸುಡು ಬೇಸಿಗೆಗೆ ತತ್ತರಿಸುವ ರಾಮನಗರ ಜಿಲ್ಲೆಯಲ್ಲಿ ಈಗ ಕುಡಿಯುವ ನೀರಿನ ಅಭಾವವೂ ಹೆಚ್ಚಾಗಿದ್ದು, ಸಮಸ್ಯೆ ಇರುವ ಗ್ರಾಮಗಳಿಗೆ ನೀರು ಪೂರೈಕೆಗೆ ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ.
ಜಿಲ್ಲೆಯ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮಂಚನಬೆಲೆ ಜಲಾಶಯದಿಂದ ಮಾತ್ರ ಕುಡಿಯುವ ನೀರಿನ ಪೂರೈಕೆ ಆಗುತ್ತಿದ್ದು, ಬಹುತೇಕ ಜಿಲ್ಲೆಯ ನಗರ ಪ್ರದೇಶಗಳಿಗೆ ನೀರು ಪೂರೈಕೆ ಮಾಡುವ ತೊರೆ ಕಾಡನಹಳ್ಳಿ ಜಲಾಶಯದಲ್ಲಿ ನೀರಿನ ಹರಿವು ಇರುವ ಕಾರಣ ಸದ್ಯಕ್ಕೆ ನಗರ ಪ್ರದೇಶದಲ್ಲಿ ಹೆಚ್ಚಿನ ನೀರಿನ ಕೊರತೆ ಕಂಡು ಬಂದಿಲ್ಲ.
ತಕ್ಷಣಕ್ಕೆ ಟ್ಯಾಂಕರ್ ನೀರು
ಗ್ರಾಮೀಣ ನೀರು ಸರಬರಾಜು ಇಲಾಖೆ ಸಿದ್ಧಪಡಿಸಿರುವ ವರದಿಯಂತೆ ಪ್ರಸ್ತುತ 28 ಗ್ರಾಮ ಪಂಚಾಯಿತಿಗಳ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಏಪ್ರಿಲ್ ಮಧ್ಯ ಭಾಗದಲ್ಲಿಯೇ ಇಷ್ಟೊಂದು ಪ್ರಮಾಣದ ನೀರಿನ ಸಮಸ್ಯೆ ಎದುರಾಗಿದ್ದು, ಮೇ ತಿಂಗಳಲ್ಲಿ ಇದರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಜಿಲ್ಲೆಯ ಚನ್ನಪಟ್ಟಣ ತಾಲೂಕಿನ 5, ಕನಕಪುರ ತಾಲೂಕಿನ 13, ಹಾರೋಹಳ್ಳಿ ತಾಲೂಕಿನ 5, ಮಾಗಡಿ ತಾಲೂಕಿನ 18 ಮತ್ತು ರಾಮನಗರ ತಾಲೂಕಿನ 10 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಟ್ಯಾಂಕರ್‌ಗಳು ಮತ್ತು ಖಾಸಗಿ ಬೋರ್‌ವೆಲ್‌ಗಳ ಮೂಲಕ ಸಮಸ್ಯೆ ಪರಿಹಾರಕ್ಕೆ ಜಿಪಂ ಮುಂದಾಗಿದೆ.
ಎಲ್ಲೆಲ್ಲಿ ಸಮಸ್ಯೆ?
ಇಲಾಖೆ ಸಿದ್ಧಪಡಿಸಿರುವ ಮಾಹಿತಿಯಂತೆ ಮಾಗಡಿ ತಾಲೂಕಿನ ಬೆಳಗುಂಬ ಪಂಚಾಯಿತಿಯ ಪಣಕನಕಲ್ಲು, ಚಿಕ್ಕಹಳ್ಳಿ ಪಂಚಾಯಿತಿಯ ಪೊಲೊಹಳ್ಳಿ, ಚಿಕ್ಕಮುದಿಗೆರೆ ಪಂಚಾಯಿತಿಯ ದೊಡ್ಡಮುದಿಗೆರೆ, ಹಂಚಿಕುಪ್ಪೆ ಪಂಚಾಯಿತಿಯ ಅವ್ವೇರಹಳ್ಳಿ, ನಾಯಕನಪಾಳ್ಯ, ಹೊನ್ನಾಪುರ, ರಂಗನಾಥಪುರ, ಮಾಡಬಾಳ್ ಪಂಚಾಯಿತಿಯ ಯಲಚೀಕಟ್ಟೆಪಾಳ್ಯ, ಬಳೆಕಟ್ಟೆ, ನೇತೇನಹಳ್ಳಿ ಪಂಚಾಯಿತಿಯ ಜುಟ್ಟನಹಳ್ಳಿ, ತಟವಾಳ್ ಕಾಲನಿ, ಸೀಗೆಕುಪ್ಪೆ ಪಂಚಾಯಿತಿಯ ಕೋರಮಂಗಲ, ಬೆಳಗವಾಡಿ, ಎಸ್.ಬ್ಯಾಡರಹಳ್ಳಿ, ಸಡಮಾರನಹಳ್ಳಿ ಮತ್ತು ತಿಪ್ಪಸಂದ್ರ ಹೋಬಳಿಯ ತಿಪ್ಪಸಂದ್ರ ಹಾಗೂ ಚಿಗಳೂರು ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಿದೆ.
ಚನ್ನಪಟ್ಟಣ ತಾಲೂಕಿನ ಭೂಹಳ್ಳಿ ಪಂಚಾಯಿತಿಯ ಲಂಬಾಣಿ ತಾಂಡಾ, ನೀಲಸಂದ್ರ ಪಂಚಾಯಿತಿಯ ಮಲ್ಲಂಗೆರೆ, ದೊಡ್ಡನಹಳ್ಳಿ, ಬೊಮ್ಮನಾಯಕನಹಳ್ಳಿ ಪಂಚಾಯಿತಿಯ ಕದರಮಂಗಲ ಮತ್ತು ಮಳೂರು ಗ್ರಾಪಂನ ವಾಲೆತೋಪು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಇಲ್ಲಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ. ಹಾರೋಹಳ್ಳಿ ತಾಲೂಕಿನ ಕಗ್ಗಲಹಳ್ಳಿ ಗ್ರಾಪಂನ ಜಟ್ಟಿ ಪಾಳ್ಯ, ದೊಡ್ಡಮರಳವಾಡಿ ಗ್ರಾಪಂನ ದುರ್ಗೇಗೌಡನದೊಡ್ಡಿ, ಟಿ ಹೊಸಹಳ್ಳಿ ಗ್ರಾಪಂನ ಚಿಕ್ಕಸಾದೇನಹಳ್ಳಿ, ಟಿ.ಹೊಸಹಳ್ಳಿ, ಬಳೆ ಚನ್ನವಲಸೆ ಗ್ರಾಮಗಳಲ್ಲಿ ನೀರಿನ ಕೊರತೆ ಇದೆ.
ಕನಕಪುರ ತಾಲೂಕಿನ ಚಿಕ್ಕಮುದವಾಡಿ ಗ್ರಾಪಂನ ತಿಮ್ಮೇಗೌಡನದೊಡ್ಡಿ, ಬ್ಯಾಲಾಳು, ಅಳ್ಳಿಮಾರನಹಳ್ಳಿ ಗ್ರಾಪಂನ ಬೇವಿನದೊಡ್ಡಿ, ಅಳ್ಳಿಮಾರನಹಳ್ಳಿ, ಹಳೆಹೊನ್ನಲಗನದೊಡ್ಡಿ, ಅಚ್ಚಲು ಗ್ರಾಪಂನ ತೋಟಹಳ್ಳಿ, ವೀರೇಗೌಡನದೊಡ್ಡಿ, ಹುಣಸನಹಳ್ಳಿ ಗ್ರಾಪಂನ ಹುಣಸನಹಳ್ಳಿ, ತಟ್ಟೆಕೆರೆ, ಹೊಸದುರ್ಗ ಗ್ರಾಪಂನ ಸಾಲಬನ್ನಿ, ವಸಲಿ, ಉಯ್ಯಂಬಳ್ಳಿ ಗ್ರಾಪಂನ ಚೀಲಂದವಾಡಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ.
ರಾಮನಗರ ತಾಲೂಕಿನ ದೊಡ್ಡಗಂಗವಾಡಿ ಗ್ರಾಪಂನ ಬಸವಯ್ಯನದೊಡ್ಡಿ, ಕಂಚುಗಾರನಹಳ್ಳಿ ಪಂಚಾಯತಿಯ ಕರಿಕಲ್ ದೊಡ್ಡಿ, ಯೋಗವನ ಆಶ್ರಯ ಬಡಾವಣೆ, ಬನ್ನಿಕುಪ್ಪೆ (ಕೆ) ಪಂಚಾಯಿತಿಯ ಲಕ್ಕೋಜನಹಳ್ಳಿ, ನಂಜಾಪುರ, ಅಕ್ಕೂರು ಗ್ರಾಪಂನ ಅಕ್ಕೂರು, ಹೊಂಬೇಗೌಡನದೊಡ್ಡಿ, ಹುಣಸನಹಳ್ಳಿ ಗ್ರಾಪಂನ ಲಂಬಾಣಿದೊಡ್ಡಿ, ಮೊಟ್ಟೆದೊಡ್ಡಿ, ಹನುಮಂತೇಗೌಡನದೊಡ್ಡಿ, ಗೋಪಳ್ಳಿ ಪಂಚಾಯಿತಿಯ ಉರಗಹಳ್ಳಿ, ವಿಭೂತಿಕೆರೆ ಪಂಚಾಯಿತಿಯ ತಿಮ್ಮಯ್ಯನದೊಡ್ಡಿ, ಕೀರನಕಲ್ಲುದೊಡ್ಡಿ ಗ್ರಾಮಗಳಲ್ಲಿ ಸಮಸ್ಯೆ ಇದೆ.
ಖಾಸಗಿ ಬೋರ್‌ವೆಲ್ ಆಶ್ರಯ
ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ನೀರು ಪೂರೈಸಲು ಟ್ಯಾಂಕರ್ ಮೊರೆ ಹೋಗಲಾಗಿದೆ. ಒಟ್ಟಾರೆ 18 ಟ್ಯಾಂಕರ್‌ಗಳ ಮೂಲಕ ಪ್ರತಿ ದಿನ 41 ಟ್ರಿಪ್‌ನಲ್ಲಿ ನೀರು ಪೂರೈಸಲಾಗುತ್ತಿದೆ. ಜತೆಗೆ 35 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು, ನೀರು ಪೂರೈಕೆ ಮಾಡಲಾಗುತ್ತಿದೆ. ಸದ್ಯಕ್ಕೆ ಮಾಗಡಿ ತಾಲೂಕಿನಲ್ಲಿಯೇ ಅತಿ ಹೆಚ್ಚು ನೀರಿನ ಸಮಸ್ಯೆ ಎದುರಾಗಿದ್ದು, ಇಲ್ಲಿ ಮತ್ತಷ್ಟು ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಟ್ಯಾಂಕರ್ ಮತ್ತು ಖಾಸಗಿ ಬೋರ್‌ವೆಲ್‌ಗಳನ್ನು ಮತ್ತಷ್ಟು ಬಾಡಿಗೆ ಪಡೆಯುವ ಸಂಭವ ಹೆಚ್ಚಿದೆ ಎನ್ನುವುದು ಅಧಿಕಾರಿಗಳ ಮಾತು.
ನೀರಿಗಾಗಿ ಕಾಯಬೇಕು
ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಗ್ರಾಮಗಳಲ್ಲಿ ಜನ ನೀರಿಗಾಗಿ ಕಾಯಬೇಕಾದ ಮತ್ತು ಸಾಲುಗಟ್ಟಿ ನಿಂತು ನೀರು ಪಡೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಸಂಖ್ಯೆಗೆ ಅನುಗುಣವಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆಯಾದರೂ, ಬಿರು ಬೇಸಿಗೆಗೆ ಬಸವಳಿದಿರುವ ಜನರಿಗೆ ಎಷ್ಟು ನೀರು ಪೂರೈಕೆ ಮಾಡಿದರೂ ಸಾಲದು ಎನ್ನುವಂತೆ ಆಗಿದೆ.
ಕುಸಿಯುತ್ತಿದೆ ಅಂತರ್ಜಲ
ಬೇಸಿಗೆ ಜತೆಗೆ ಆತಂಕ ಸೃಷ್ಟಿಸಿರುವ ಮತ್ತೊಂದು ವಿಷಯವೆಂದರೆ ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆ ಆಗುತ್ತಿರುವುದು. ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಕಳೆದ ಮುಂಗಾರು ಪೂರ್ಣ ಪ್ರಮಾಣದಲ್ಲಿ ಬೀಳದ ಕಾರಣ, ಹಾಗೂ ಈ ಬಾರಿಯ ಬೇಸಿಗೆ ಹೆಚ್ಚಿರುವ ಕಾರಣದಿಂದಾಗಿ ಕೊಳವೆ ಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆ ಆಗಿದ್ದು, ಅನಿವಾರ್ಯವಾಗಿ ಖಾಸಗಿ ಬೋರ್‌ವೆಲ್‌ಗಳ ಮೊರೆ ಹೋಗುವಂತೆ ಮಾಡಿದೆ.
ಜಿಲ್ಲಾಡಳಿತದ ಕ್ರಮ
ಜಿಲ್ಲೆಯಲ್ಲಿ ಬಿಸಿಲ ತಾಪ 40 ಡಿಗ್ರಿ ಆಸುಪಾಸಿಗೆ ಬಂದು ನಿಂತಿದೆ. ಶುಕ್ರವಾರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಇತ್ತು. ಬೆಳಗ್ಗೆ 11 ಗಂಟೆ ನಂತರ ಜನ ರಸ್ತೆಗೆ ಇಳಿಯುವುದನ್ನೇ ಮರೆತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ನೀರಿನ ಬವಣೆ ಸಾಕಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಜಿಲ್ಲಾಡಳಿತ ಅಗತ್ಯ ಇರುವ ಕಡೆಗಳಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗಳನ್ನು ಕೊರೆಸುವ ನಿಟ್ಟಿನಲ್ಲಿ ನೆರವು ನೀಡುವುದಾಗಿ ತಾಪಂಗಳಿಗೆ ಭರವಸೆ ನೀಡಿದೆ. ಅಲ್ಲದೆ ವಿವಿಧ ಅನುಧಾನಗಳ ಅಡಿಯಲ್ಲಿ ಕೊಳವೆ ಬಾವಿಗಳನ್ನು ಈಗಾಗಲೇ ಕೆಲವು ಕಡೆಗಳಲ್ಲಿ ಕೊರೆಸಲಾಗಿದೆ.
ನಮ್ಮ ಗ್ರಾಪಂ ವ್ಯಾಪ್ತಿಯ ಸಾಕಷ್ಟು ಹಳ್ಳಿಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಅಧಿಕಾರಿಗಳು ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಒಂದು ತಿಂಗಳ ಹಿಂದೆ ಕೊಳವೆ ಬಾವಿ ಕೊರೆಸಿಕೊಡುವುದಾಗಿ ಹೇಳಿ ಹೋದವರು ಇನ್ನೂ ಬಂದಿಲ್ಲ.
| ಪುಟ್ಟಸ್ವಾಮಿ
ಹುಣಸನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ
ನೀರು ಪೂರೈಕೆಯಲ್ಲಿ ಸಮಸ್ಯೆ ಆಗದಂತೆ ಮುಖ್ಯಮಂತ್ರಿಗಳು ಸಹ ನಿರ್ದೇಶನ ನೀಡಿದ್ದಾರೆ. ಜಿಲ್ಲೆಯಲ್ಲಿ ಸಮಸ್ಯೆ ಇರುವ ಕಡೆಗಳಲ್ಲಿ ಈಗಾಗಲೇ ಸಮರೋಪಾದಿಯಲ್ಲಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಮುಂದೆಯೂ ಸಹ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
| ಅನ್ಮೋಲ್ ಜೈನ್
ಜಿಲ್ಲಾಧಿಕಾರಿ (ಪ್ರಭಾರ), ಬೆಂಗಳೂರು ದಕ್ಷಿಣ ಜಿಲ್ಲೆ