ಬಿಡದಿ: ರಾಮಕೃಷ್ಣದೊಡ್ಡಿಯ ಖಾಸಗಿ ಲೇಔಟ್ನಲ್ಲಿ ಪರವಾನಗಿ ಇಲ್ಲದೆ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆ ಮೇಲೆ ಬಿಡದಿ ಪೊಲೀಸರು ದಾಳಿ ಮಾಡಿ, ಬಿಸಿ ಮುಟ್ಟಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪಿಎಸ್ಐ ದೇವರಾಜು ಹಾಗೂ ಸಿಬ್ಬಂದಿ ದಾಳಿ ಮಾಡಿದ್ದು, ದಂಧೆಯಲ್ಲಿದ್ದ ನಾಲ್ವರ ಪೈಕಿ ಮೂವರು ತಪ್ಪಿಸಿಕೊಂಡಿದ್ದು, ಬೆಂಗಳೂರಿನ ನಾಗಸಂದ್ರದ ಮಹದೇವ ಎಂಬಾತನನ್ನು ಬಂಧಿಸಲಾಗಿದೆ.
ಬೆಂಗಳೂರಿನ ಪೀಣ್ಯದಿಂದ ಗೃಹ ಬಳಕೆ ಗ್ಯಾಸ್ ಸಿಲಿಂಡರ್ಗಳನ್ನು ತಂದು 4 ಕೆಜಿಯ ಚಿಕ್ಕ ಸಿಲಿಂಡರ್ಗಳಿಗೆ ತುಂಬಲಾಗುತಿತ್ತು. ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಹಾಗೂ ಕಾರ್ಖಾನೆಗಳ ಕಟ್ಟಡ ನಿರ್ಮಾಣಕ್ಕೆ ಹೊರ ರಾಜ್ಯಗಳಿಂದ ಬಂದಿರುವ ಕೂಲಿ ಕಾರ್ಮಿಕರು ಈ ಸಿಲಿಂಡರ್ಗಳನ್ನು ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ.
ಬಂಧಿತನನನ್ನು ವಿಚಾರಣೆ ಮಾಡಿದಾಗ ಬೆಂಗಳೂರು ಮೂಲದ ಚೇತನ್ ಎಂಬಾತ ದಂಧೆ ಮಾಡಿಸುತ್ತಿದ್ದ ಎಂದು ತಿಳಿದುಬಂದಿದೆ.
ಪೊಲೀಸರ ದಾಳಿ ವೇಳೆ ಹಲವು ಸಿಲಿಂಡರ್ಗಳು ಪತ್ತೆಯಾಗಿದ್ದವು. 4 ಕೆಜಿ ತೂಕದ 76 ಭರ್ತಿ ಸಿಲಿಂಡರ್, 4 ಕೆಜಿಯ 132 ಖಾಲಿ ಸಿಲಿಂಡರ್, 14 ಕೆಜಿಯ ವಿವಿಧ ಕಂಪನಿಗಳ 33 ತುಂಬಿದ ಸಿಲಿಂಡರ್ಗಳು , 22 ಖಾಲಿ ಸಿಲಿಂಡರ್ಗಳು, 19 ಕೆಜಿಯ 20 ಸಿಲಿಂಡರ್ಗಳು ಹಾಗೂ ರೀಫಿಲ್ಲಿಂಗ್ ಮಾಡಲು ಬಳಸುವ ಪೈಪ್, ಪಿನ್ಗಳು, 2 ತೂಕದ ಯಂತ್ರಗಳು ಹಾಗೂ ಇವುಗಳನ್ನು ಸಾಗಣೆ ಮಾಡಲು ಬಳಕೆ ಮಾಡುತ್ತಿದ್ದ ಎರಡು ಗೂಡ್ಸ್ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಬಿಡದಿ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.