ಕುದೂರು ಪಟ್ಟಣದ ಇತಿಹಾಸ ಪ್ರಸಿದ್ಧ ಭೈರವದುರ್ಗ ಬೆಟ್ಟ.
ನಾಡಪ್ರಭುಗಳ ಸೇನಾನೆಲೆ ಕುದೂರು ಬೆಟ್ಟಕ್ಕೆ ಬೇಕಿದೆ ಅಭಿವೃದ್ಧಿ ಕಾಯಕಲ್ಪ
ಕುದೂರು: ಕೆಂಪೇಗೌಡರ ನವದುರ್ಗಗಳಲ್ಲಿ ಒಂದಾದ ಕುದೂರಿನ ಭೈರವದುರ್ಗ ಸಂರಕ್ಷಣೆ ಇಲ್ಲದೆ ಪಾಳುಬಿದ್ದಿದ್ದು, ನಾಡಪ್ರಭುಗಳ ಕುರುಹುಗಳು ದಿನೇದಿನೆ ಮಣ್ಣಲ್ಲಿ ಹುದುಗಿಹೋಗುತ್ತಿವೆ.
ಕುದೂರಿನ ಭೈರವದುರ್ಗ ಮಾಗಡಿ ಕೆಂಪೇಗೌಡರ ಪ್ರಮುಖ ಸೇನಾ ನೆಲೆಯಾಗಿತ್ತು. ಬೆಟ್ಟದ ಮೇಲಿನ ಗುಹಾಂತರ ದೇವಾಲಯ, ಕೋಟೆ, ಕೋಟೆಯೊಳಗಿನ ಪಾತಾಳಗಂಗೆ, ಅಲ್ಲಲ್ಲಿ ಕಾಣುವ ಶಾಸನಗಳು, ಮೂರ್ತಿ, ಉಬ್ಬು ಶಿಲ್ಪಗಳು, ನೈಸರ್ಗಿಕವಾಗಿ ಬೆಟ್ಟಕ್ಕೆ ಜೋಡಿಸಿರುವ ಮೆಟ್ಟಿಲುಗಳು ನಾಡಪ್ರಭುಗಳ ಇತಿಹಾಸ ಸಾರುತ್ತವೆ. ಪ್ರಕೃತಿ ಸೌಂದರ್ಯದಿಂದಲೂ ಭೈರವದುರ್ಗವು ಚಾರಣಿಗರ ಸ್ವರ್ಗ ಎಂದು ಖ್ಯಾತಿ ಪಡೆದಿದೆ. ಆದರೆ, ಬೆಟ್ಟವು ಇಲಾಖೆಗಳ ರ್ನಿಲಕ್ಷ$್ಯಕ್ಕೆ ಒಳಗಾಗಿ ನಾಡಪ್ರಭುಗಳ ಸ್ಮಾರಕಗಳು ಅವರ ನಾಡಿನಲ್ಲೇ ಅಳಿದುಹೋಗುತ್ತಿರುವುದು ಒಂದೆಡೆಯಾದರೆ ಕನಿಷ್ಠ ಸೌಕರ್ಯಗಳೂ ಇಲ್ಲದೆ ಚಾರಣಿಗರೂ ಪರದಾಡುತ್ತಿದ್ದಾರೆ. ಐತಿಹಾಸಿಕ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಕಾಣಬೇಕಿದ್ದ ಬೆಟ್ಟ ಬಿಕೋ ಎನ್ನುತ್ತಿದೆ.
ಪಾಳೇಗಾರರು ಕುದುರೆ ಕಟ್ಟುತ್ತಿದ್ದರಂತೆ!
ನಾಡಪ್ರಭು ಕೆಂಪೇಗೌಡರ ಆಡಳಿತಾವಧಿಯಲ್ಲಿ ಕುದೂರಿನ ಭೈರವದುರ್ಗ ತಾಲೂಕು ಕೇಂದ್ರವಾಗಿತ್ತು. ಪಾಳೇಗಾರರು ಇಲ್ಲಿ ಕುದುರೆ ಕಟ್ಟುತ್ತಿದ್ದರು. ದುರ್ಗದಲ್ಲಿ ನೆಲೆಸಿರುವ ಶ್ರೀ ಭೈರವೇಶ್ವರ ಸ್ವಾಮಿ ಈ ಪಾಳೇಗಾರರ ಆರಾಧ್ಯ ದೈವ. ಬೆಟ್ಟವು ಸಮುದ್ರಮಟ್ಟದಿಂದ ಸುಮಾರು 1,066 ಮೀಟರ್ ಹಾಗೂ ಬಯಲಿನಿಂದ 160 ಮೀಟರ್ ಎತ್ತರದಲ್ಲಿದೆ. ಖ್ಯಾತ ಇತಿಹಾಸಕಾರ ಬಿ.ಎಲ್.ರೈಸ್ ದಾಖಲಿಸಿದಂತೆ ಕೋಟೆಯನ್ನು 1609ರ ಕಾಲಾವಧಿಯಲ್ಲಿ ಮರಾಠರು ನಿರ್ಮಿಸಿದ್ದು, ಅಬ್ದುಲ ಭಂಡಾರ ಎಂದು ಕರೆಯುತ್ತಿದ್ದರು. ನಂತರ ಮೈಸೂರು ಅರಸರು ನೇಮಿಸಿದ ತಿಮ್ಮನಾಯಕನೆಂಬ ಪ್ರಾಂತ್ಯಾಧಿಕಾರಿ ಇದಕ್ಕೆ ಭೈರವನದುರ್ಗ ಎಂದು ಮರುನಾಮಕರಣ ಮಾಡಿ, ಕೋಟೆಯನ್ನು ವಿಸ್ತರಿಸಿದನು. ನಂತರ ಬಂದ ಟಿಪ್ಪು ಸುಲ್ತಾನ್ ಬೆಟ್ಟದಲ್ಲಿ ನೀರಿನ ಅಭಾವ ಕಂಡು 1792ರಲ್ಲಿ ಇಲ್ಲಿಯ ಜನರನ್ನು ಕುದೂರಿಗೆ ಸ್ಥಳಾಂತರಿಸಿ ಕುದೂರನ್ನು ಆಡಳಿತ ಕೇಂದ್ರವನ್ನಾಗಿಸಿದನು ಎನ್ನುತ್ತದೆ ಇತಿಹಾಸ.
ದಣ ಮತ್ತು ಪಶ್ಚಿಮ ದಿಕ್ಕುಗಳಿಂದ ನೋಡಿದರೆ ಭೈರವದುರ್ಗ ಏಕಶಿಲಾ ಬೆಟ್ಟದಂತೆ ಕಾಣುತ್ತದಾದರೂ ಇದು ವಾಸ್ತವವಾಗಿ ಎರಡು ಬೆಟ್ಟಗಳಿಂದ ಕೂಡಿದೆ. ಈ ಎರಡೂ ಬೆಟ್ಟಗಳನ್ನು ಸೇರಿಸಿಕೊಂಡು ಕೋಟೆಯನ್ನು ಕೆಳಗಿನಿಂದ ಮೇಲಿನವರೆಗೂ ನಿರ್ಮಿಸಲಾಗಿದೆ. ಬೆಟ್ಟ ಹತ್ತುವ ದಾರಿಯಲ್ಲಿ ವೀರಾಂಜನೇಯ ಶಿಲ್ಪದ ಮುಂಭಾಗ ಕಂಬಗಳು ಮತ್ತು ಬೋದಿಗೆಗಳು(ಕಂಬದ ಅಂಚಿನ ಭಾಗ) ಅಲ್ಲಲ್ಲಿ ಬಿದ್ದಿವೆ. ಇವು ಆಂಜನೇಯ ಶಿಲ್ಪದ ಬಳಿಯ ಒಂದು ಹಳೆಯ ದ್ವಾರದ ಅವಶೇಷಗಳಾಗಿವೆ. ಕೋಟೆಯ ಎರಡನೇ ಸುತ್ತಿನ ಗೋಡೆ ನಿರ್ಮಾಣ ಇನ್ನೂ ಬಾಕಿ ಉಳಿದಿರುವುದು ಕಂಡು ಬರುತ್ತದೆ. ಗೋಡೆಯು ಎರಡರಿಂದ ಮೂರು ಮೀಟರ್ ಎತ್ತರವಾಗಿದ್ದು, ಕೆಲವೆಡೆ ಅರ್ಧ ವರ್ತುಲ ಆಕಾರದ ಕೊತ್ತಲುಗಳಿಂದ ಕೂಡಿದೆ. ಎರಡನೇ ಸುತ್ತಿನ ಗೋಡೆಯನ್ನು ಬೆಟ್ಟದ ಮಧ್ಯ ಭಾಗದಲ್ಲಿ ನಿರ್ಮಿಸಲಾಗಿದ್ದು, ಇದು ಕೋಳಿಬೆಟ್ಟ ಹಾಗೂ ಭೈರವನ ಬೆಟ್ಟಗಳೆರಡನ್ನೂ ಆವರಿಸಿದೆ. ದುರ್ಗದ ಮೇಲ್ಭಾಗ ಹಾಗೂ ಕೊನೆಯ ಸುತ್ತಿನ ಗೋಡೆಯು ಕೋಟೆಯನ್ನು ಬಹುಮುಖ್ಯ ಪ್ರದೇಶವನ್ನು ರಸಲು ನಿರ್ಮಿಸಲಾಗಿದ್ದು, ವಿಸ್ತಾರದಲ್ಲಿ ಅಂಡಾಕಾರದಲ್ಲಿದೆ. ಬೆಟ್ಟದ ತುದಿಯಲ್ಲಿ ಮದ್ದಿನ ಮನೆ, ಕಣಜ, ನೀರಿನ ಕೊಳ ಹಾಗೂ ವಾಸದ ಮನೆಗಳನ್ನು ನಿರ್ಮಿಸಲಾಗಿದೆ. ಬೆಟ್ಟದ ತುದಿಯಲ್ಲಿ ವರ್ತುಲಾಕಾರದಲ್ಲಿ ದೊಡ್ಡ ಗಾತ್ರದ ಬುರುಜಿನ ಬಲಕ್ಕೆ ಮದ್ದಿನ ಮನೆ, ಆಯತಾಕಾರದ ಕಣಜ ಹಾಗೂ ದೊಣೆ(ಕೊಳ)ಗಳು ಇನ್ನೂ ಇವೆ.
ಭೈರವದುರ್ಗದಲ್ಲಿ ಪ್ರಕೃತಿ ನಿರ್ಮಿತ ಗುಹೆಗಳಿವೆ. ಕೆಂಪಕ್ಕನ ಗವಿ, ಮೂಲೆ ಗವಿ, ದಾಸನ ಗವಿ, ಸಿಡಲೂರ ಪಡೆ, ಕೊಟ್ಟಿಗೆ ಬೆಟ್ಟದ ಗವಿ ಪ್ರಮುಖವಾಗಿದ್ದು, ಕರಡಿ ಗುಂಡು, ಗೂಬೆ ಗುಂಡು, ಹಣತೆಕಲ್ಲು, ಸಾಲ ಕಲ್ಲು, ಕತ್ತಿಕಲ್ಲು, ಹುಲಿ ಹಳ್ಳ, ಕತ್ತಿಕಲ್ಲು ಹಳ್ಳಕ್ಕೆ ಕೊಟ್ಟಿಗೆ ಬೆಟ್ಟದ ದೊಡ್ಡ ಬಂಡೆ ಛಾವಣಿಯಾಗಿವೆ. ಬೆಟ್ಟದ ಮೇಲೆ 42 ಮೆಟ್ಟಿಲುಗಳಿಂದ ಕೂಡಿದ ಗಂಗಾ ದೊಣೆ(ಕೊಳ) ಇದ್ದು, ವರ್ಷದ ಎಲ್ಲ ಕಾಲದಲ್ಲಿಯೂ ನೀರು ಒಂದೇ ಮಟ್ಟದಲ್ಲಿರುವುದು ಇದರ ವಿಶೇಷ. ಇಲ್ಲಿ ಭಕ್ತರು ಗಂಗಾಪೂಜೆ ಸಲ್ಲಿಸುತ್ತಾರೆ.
ಕುದೂರಿನ ಹಳೇಪೇಟೆ ಮಾರ್ಗವಾಗಿ ಭೈರವದುರ್ಗಕ್ಕೆ ಹೊರಟರೆ ಮುಖ್ಯದ್ವಾರದ ಬಳಿ ಬಾಗಿಲಿನ ಕಂಬಗಳು ಅನಾಥವಾಗಿ ಬಿದ್ದಿವೆ. ಸಂಗಾತಿ ಬಾವಿ ಹಾಗೂ ಕುದುರೆಗಳು ನೀರು ಕುಡಿಯಲು ನಿರ್ಮಿಸಿರುವ ಕಲ್ಯಾಣಿಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಇಲ್ಲಿ ಆಗಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಸಾಮಗ್ರಿಗಳು, ಮಡಕೆ ಚೂರುಗಳು, ಬೂದಿಯಂತಹ ಅವಶೇಷಗಳು ದೊರೆತಿದ್ದು, ಇಲ್ಲಿಂದ ಮುಂದೆ ಹೊರಟರೆ ಭಗ್ನವಾಗಿರುವ ಗುಂಡು ಆಂಜನೇಯ ವಿಗ್ರಹ ನೋಡಬಹುದು. ಅಲ್ಲಿಂದ ಕಣ್ಣು ಹಾಯಿಸಿದರೆ ಕೋಟೆ ಅರಮನೆಯ ಮುಖ್ಯದ್ವಾರ ಬಾಗಿಲು ಸಿಗುತ್ತದೆ. ಗಾರೆ ಗಚ್ಚಿನ ಬಾಗಿಲು, ಮಾವಿನ ಮರದ ಕೋಟೆ, ಮೆರವಣಿಗೆ ದೇವರ ಕೋಟೆ, ಮೇಲಿನ ಕೋಟೆ, ಕೆಳಗಿನ ಕೋಟೆ, ಕರಡಿ ಗುಂಡಿನ ಕೋಟೆ, ಚಿಕ್ಕ ಕೋಟೆ, ದೊಡ್ಡಕೋಟೆ, ಕಾಕನ ಕೋಟೆ ಹೀಗೆ ಕೋಟೆಗಳ ಸಾಲೇ ಸಿಗುತ್ತವೆ. ಇವೆಲ್ಲವೂ ಕೆಂಪೇಗೌಡರ ಕಾಲದ ಗತವೈಭವಕ್ಕೆ ಸಾಯಾಗಿದ್ದು, ಸದ್ಯ ರ್ನಿಲಕ್ಷ$್ಯಕ್ಕೆ ಒಳಗಾಗಿವೆ.
ಗಗನದಾರ್ಯರು ಶಿವೈಕ್ಯರಾಗಿದ್ದು ಇಲ್ಲೇ
ಕರ್ನಾಟಕದ ಅತಿ ಎತ್ತರದ ಏಕಶಿಲಾ ಬೆಟ್ಟಗಳಲ್ಲಿ ಈ ಭೈರವದುರ್ಗದ ಬೆಟ್ಟವೂ ಒಂದಾಗಿದೆ. ಚಾರಣಿಗರಿಗೆ ಈ ಬೆಟ್ಟ ಕೈಬೀಸಿ ಕರೆಯುತ್ತಿದೆ. ಇಲ್ಲಿ ಕಾಡು ಮಲ್ಲಿಗೆ, ಜಾಲಾರ, ಸಂಪಿಗೆ, ಕಕ್ಕೆ ಹಳದಿ ಹೂವು ಅರಳಿ ಬೆಟ್ಟದ ಸೊಬಗನ್ನು ಇನ್ನಷ್ಟು ಅಂದಗೊಳಿಸಿವೆ. ಇದೇ ಬೆಟ್ಟದಲ್ಲಿ ಶೈವಗುರು ಗಗನದಾರ್ಯರು ಇಲ್ಲಿ ಶಿವೈಕ್ಯರಾಗಿದ್ದಾರೆ ಎನ್ನಲಾಗುತ್ತದೆ.
ಬೆಟ್ಟದ ಪರಿಸರದಲ್ಲಿರುವ ನೀಲಗಿರಿ ಸೇರಿ ಹಲವು ಜಾತಿಯ ಮರಗಳು ಕಳ್ಳರ ಪಾಲಾಗುತ್ತಿವೆ. ನಿಧಿಗಳ್ಳರ ಹಾವಳಿಯಿಂದಾಗಿಯೂ ಹಲವು ಕಡೆ ಪುರಾತನ ಅವಶೇಷಗಳು, ಸಮಾಧಿಗಳು ಭಗ್ನವಾಗಿವೆ. ಇನ್ನೊಂದೆಡೆ ಕುದೂರು ಗ್ರಾಮ ಪಂಚಾಯಿತಿಯವರು ಪಟ್ಟಣದ ತ್ಯಾಜ್ಯವನ್ನೆಲ್ಲ ತಂದು ಬೆಟ್ಟದ ಬುಡದಲ್ಲಿ ಸುರಿಯುತ್ತಾರೆ. ಇದರಿಂದ ಬೆಟ್ಟದ ಪರಿಸರ ಹಾಳಾಗುತ್ತಿದೆ. ಕೆಲವೊಮ್ಮೆ ಕಿಡಿಗೇಡಿಗಳು ಕಸಕ್ಕೆ ಬೆಂಕಿ ಹಚ್ಚುತ್ತಿದ್ದು, ಇಲ್ಲಿನ ವನ್ಯಸಂಕುಲದ ಅಸ್ತಿತ್ವಕ್ಕೂ ಕುತ್ತು ಎದುರಾಗಿದೆ. ಬೆಟ್ಟದ ಮೇಲಿನ ದೇವಸ್ಥಾನಕ್ಕೆ ಬರುವ ಭಕ್ತರಿಗೂ ದಟ್ಟಹೊಗೆಯಿಂದಾಗಿ ತೊಂದರೆಯಾಗುತ್ತಿದೆ. ಕಸಕ್ಕೆ ಬೆಂಕಿ ಹಾಕುವುದರಿಂದಲೇ ಬೆಟ್ಟದ ಕೆಲಕಡೆ ಹೆಜ್ಜೇನು ದಾಳಿ ಮಾಡುತ್ತವೆ.
ನಾಡಪ್ರಭು ಕೆಂಪೇಗೌಡರು ಬೆಂಗಳೂರಿನ ಸುತ್ತಮುತ್ತಲಿನಲ್ಲಿ ನಿರ್ಮಿಸಿರುವ ನವದುರ್ಗಗಳು ನಂದಿದುರ್ಗ (ನಂದಿ ಬೆಟ್ಟ), ಭೈರವದುರ್ಗ, ಮಾಕಳಿದುರ್ಗ, ಸಾವನದುರ್ಗ, ಹುತ್ರಿದುರ್ಗ, ಚನ್ನರಾಯನದುರ್ಗ, ಕಬ್ಬಾಳದುರ್ಗ, ಹುಲಿಯೂರುದುರ್ಗ, ದೇವರಾಯನದುರ್ಗ.
ಪ್ರತಿ ನವೆಂಬರ್ ತಿಂಗಳಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳ ಸಂದ ಸದಸ್ಯರು ಬೆಟ್ಟದ ತುತ್ತತುದಿಯಲ್ಲಿ ತಪ್ಪದೇ ನಾಡಧ್ವಜ ಹಾರಿಸಿ, ಬೆಟ್ಟದ ಅಭಿವೃದ್ಧಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಈ ಬಾರಿಯೂ ಬೆಟ್ಟದ ತುದಿಯಲ್ಲಿ 69 ಅಡಿ ಉದ್ದದ ನಾಡಧ್ವಜಾರೋಹಣ ನೆರವೇರಿಸಲಾಗಿದೆ. ಈ ಧ್ವಜವು ಸುತ್ತಮುತ್ತಲಿನ 10 ಕಿಲೋಮೀಟರ್ ದೂರದವರೆಗೂ ಕಾಣುತ್ತದೆ.
ಬೆಟ್ಟದ ಅಭಿವೃದ್ಧಿಗೆ ಏನೇನು ಬೇಕು
*ಭೈರವದುರ್ಗ ಬೆಟ್ಟ ತಲುಪಲು ಸೂಕ್ತ ರಸ್ತೆ ಹಾಗೂ ಬೆಟ್ಟ ಹತ್ತಲು ಮೆಟ್ಟಿಲುಗಳ ನಿರ್ಮಾಣ, ಮೆಟ್ಟಿಲುಗಳ ಜತೆಗೆ ಸ್ಟೀಲ್ ರೈಲಿಂಗ್ಸ್ ಅಳವಡಿಸಿದರೆ ಇನ್ನೂ ಅನುಕೂಲ. * ಬೆಟ್ಟದ ಹತ್ತಿರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಸಿಸಿ ಕ್ಯಾಮರಾ ಅಳವಡಿಕೆ * ಚಾರಣಿಗರಿಗೆ, ಭಕ್ತರಿಗೆ ಅನುಕೂಲವಾಗುವಂತೆ ಬೆಟ್ಟದ ಬಳಿ ವಿಶ್ರಾಂತಿ ಗೃಹ, ನೀರಿನ ಸೌಲಭ್ಯ ಹಾಗೂ ಶೌಚಗೃಹ ವ್ಯವಸ್ಥೆ * ಕುದೂರಿನ ತ್ಯಾಜ್ಯವವನ್ನು ಬೆಟ್ಟದ ಬುಡದಲ್ಲಿ ಸುರಿಯದಂತೆ ಕ್ರಮ * ಭೈರವದುರ್ಗವನ್ನು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ, ಇಲ್ಲಿನ ಕೋಟೆ, ಕಂದಕ, ಬುರುಜು, ನೀರಿನ ದೊನೆ(ಕೊಳ), ಮದ್ದಿನ ಮನೆ ಸೇರಿದಂತೆ ಎಲ್ಲ ಪಳೆಯುಳಿಕೆಗಳನ್ನು ಜೀಣೋರ್ದ್ಧಾರಗೊಳಿಸುವುದು.
ಇತಿಹಾಸ ಪ್ರಸಿದ್ಧ ಭೈರವದುರ್ಗ ಬೆಟ್ಟವನ್ನು ಪ್ರವಾಸೋದ್ಯಮ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು. ಬೆಟ್ಟ ಹತ್ತಲು ಮೆಟ್ಟಿಲುಗಳ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಸೇರಿ ಅಗತ್ಯ ಸೌಕರ್ಯ ಕಲ್ಪಿಸಬೇಕು.
ನಾಡಪ್ರಭು ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿದ್ದ ಭೈರವದುರ್ಗ ಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ಇಲ್ಲಿರುವ ಕೋಟೆ, ಬಾಗಿಲು, ಬುರುಜುಗಳನ್ನು ಸಂರಸಬೇಕು. ಇದನ್ನು ಸರ್ಕಾರ ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಬೇಕು.
ಕುದೂರಿನ ಇತಿಹಾಸ ಪ್ರಸಿದ್ಧ ಭೈರವದುರ್ಗವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯ ಜತೆ ಚರ್ಚಿಸಲಾಗುವುದು.