ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣಗೆ ಬಿಎಂಆರ್ಡಿಎ ನೂತನ ಅಧ್ಯಕ್ಷ ತಟವಾಳ್ ಪ್ರಕಾಶ್, ನಿರ್ದೇಶಕರಾದ ದೀಪಕ್, ಕೃಷ್ಣಪ್ಪ, ಚಂದ್ರಶೇಖರ್ ಅವರು ಅಭಿವಂದನೆ ಸಲ್ಲಿಸಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಕುಂಕುಮ ಉಮೇಶ್, ರಾಜಣ್ಣ, ರಾಮಣ್ಣ, ಪುಟ್ಟರಾಜು ಇತರರು ಇದ್ದರು.
20ರಂದು ಯೋಜನೆಗೆ ಡಿಸಿಎಂ ಡಿಕೆಶಿ ಚಾಲನೆ
ಮಾಗಡಿ: ಕಾವೇರಿ ನದಿ ನೀರನ್ನು ಕಣ್ವ, ವೈಜಿಗುಡ್ಡ ಜಲಾಶಯಕ್ಕೆ, ಅಲ್ಲಿಂದ ಮಾಡಬಾಳ್ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಕ್ರಭಾವಿ ಗ್ರಾಮದಲ್ಲಿ ಫೆ.20ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.
ಬಿಎಂಆರ್ಡಿಎ ನೂತನ ಅಧ್ಯಕ್ಷ ತಟವಾಳ್ ಪ್ರಕಾಶ್, ನಿರ್ದೇಶಕರಾದ ದೀಪಕ್, ಕೃಷ್ಣಪ್ಪ, ಚಂದ್ರಶೇಖರ್ ಅವರಿಂದ ಅಭಿವಂದನೆ ಸ್ವೀಕರಿಸಿ ಮಾತನಾಡಿದ ಅವರು, ಎತ್ತಿನಹೊಳೆಯಿಂದ ತಿಪ್ಪಸಂದ್ರ&ಕುದೂರು ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಟೆಂಡರ್ ಹಂತದಲ್ಲಿದೆ. ಕುದೂರಿನಲ್ಲಿ ಕೆಪಿಎಸ್ಸಿ ಶಾಲೆ ಉದ್ಘಾಟನೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಬಸ್ ಡಿಪೋ ನಿರ್ಮಾಣ, ಸ್ಟೇಡಿಯಂ ಅಭಿವೃದ್ಧಿಗೆ ಮಾರ್ಚ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದರು.
ಮಂಚನಬೆಲೆ ಜಲಾಶಯದಿಂದ ಮಾಗಡಿ ಪಟ್ಟಣಕ್ಕೆ ಸರಬರಾಜು ಮಾಡುತ್ತಿರುವ ಕುಡಿಯುವ ನೀರಿಗೆ ತೊಂದರೆಯಾಗದ ನಿಟ್ಟಿನಲ್ಲಿ ಮಂಚನಬೆಲೆ, ವೀರೇಗೌಡನದೊಡ್ಡಿ, ಹೊಸಪೇಟೆಗಳ ಬಳಿ 3 ಕಡೆ ಪಂಪ್ ಮೋಟಾರ್ ಆಳವಡಿಸಲಾಗುತ್ತಿದೆ. ಅವಶ್ಯಕತೆ ಇರುವೆಡೆ ಕೊಳವೆ ಬಾವಿ ಕೊರೆಸಲು ಕ್ರಮಕೈಗೊಳ್ಳಲಾಗಿದೆ. ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಲು ಪಟ್ಟಣವಾಸಿಗಳು ಬಾಕಿ ಉಳಿಸಿಕೊಂಡಿರುವ 3 ಕೋಟಿ ರೂ. ನೀರಿನ ತೆರಿಗೆಯನ್ನು ಈ ಕೂಡಲೇ ಪಾವತಿಸಬೇಕು ಎಂದು ಮನವಿ ಮಾಡಿದರು.
ಮಂಚನಬೆಲೆ ಜಲಾಶಯದ ಪಂಪ್ಹೌಸ್ನ ಬೆಡ್ ಹಾಳಾಗಿದ್ದು, ಈ ಕಾಮಗಾರಿ ಪ್ರಗತಿಯಲ್ಲಿದೆ 20 ದಿನಗಳ ಒಳಗೆ ಪೂರ್ಣಗೊಳ್ಳಲಿದೆ. ಮಂಚನಬೆಲೆ ಜಲಾಶಯದ ಪಂಪ್ಹೌಸ್ಗೆ ಸರಬರಾಜಾಗುತ್ತಿದ್ದ ವಿದ್ಯುತ್ನಲ್ಲಿ ವ್ಯತ್ಯಯವಾಗುತ್ತಿತ್ತು. ಅದನ್ನು ಸರಿಪಡಿಸಲೂ ಸಹ ಕ್ರಮಕೈಗೊಳ್ಳಲಾಗಿದೆ. ಜನರೇಟರ್ ರಿಪೇರಿ ಇದ್ದರೆ ಮಾಡಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಮಾಗಡಿ&ರಾಮನಗರ&ಕನಕಪುರ ರಸ್ತೆಗೆ 400 ಕೋಟಿ ರೂ.
ಮಾಗಡಿಯ ಹೊಸಪೇಟೆ ವೃತ್ತದಿಂದ ರಾಮನಗರ ಮೂಲಕ ಕನಕಪುರದವರೆಗೆ 4 ನಾಲ್ಕನೇ ಹಂತದ ಕೆಶಿಫ್ ರಸ್ತೆಯ ಅಭಿವೃದ್ಧಿಗೆ 400 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಡಿಪಿಆರ್ ಸಹ ಪೂರ್ಣಗೊಂಡಿದ್ದು, ಶೀರ್ರದಲ್ಲೇ ಟೆಂಡರ್ ಆಹ್ವಾನಿಸಲಾಗುವುದು. ವೀರೇಗೌಡನ ದೊಡ್ಡಿ, ಲ್ಮಪುರ ಗ್ರಾಮದ ಹೊರ ಭಾಗದಲ್ಲಿ ರಸ್ತೆ ಹಾದುಹೋಗುತ್ತಿತ್ತು. ಇದನ್ನು ತಪ್ಪಿಸಿ ಗ್ರಾಮದಲ್ಲೇ ಹಾದುಹೋಗುವಂತೆ ಮಾಡಲಾಗಿದೆ. ಇದರಿಂದ ರಾಮನಗರಕ್ಕೆ 20 ನಿಮಿಷದಲ್ಲಿ ತೆರಳಬಹುದು. ಮಂಚನಬೆಲೆ ಗ್ರಾಮದಿಂದ ವೀರೇಗೌಡನ ದೊಡ್ಡಿ ಗ್ರಾಮದವರೆಗಿನ ರಸ್ತೆಯನ್ನು 8 ಕೋಟಿ ರೂ. ವೆಚ್ಚದಲ್ಲಿ ವಿಸ್ತರಣೆ ಮಾಡಲಾಗುವುದು. ನಾಯ್ಕನಪಾಳ್ಯದ ದಳವಾಯಿ ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸಲಾಗುವುದು ಎಂದು ಬಾಲಕೃಷ್ಣ ಹೇಳಿದರು.