ರಾಮನಗರದ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಲೀಡ್​ ಬ್ಯಾಂಕ್​ನ ವಾರ್ಷಿಕ ಸಭೆಯಲ್ಲಿ 2026&27ನೇ ಸಾಲಿನ ಯೋಜನಾ ಪುಸ್ತಕವನ್ನು ಸಂಸದ ಡಾ.ಸಿ.ಎನ್​.ಮಂಜುನಾಥ್​ ಬಿಡುಗಡೆ ಮಾಡಿದರು. ಲೀಡ್​ ಬ್ಯಾಂಕ್​ನ ವ್ಯವಸ್ಥಾಪಕ ಮೋಹನ್​ ಕುಮಾರ್​, ಜಿಪಂ ಸಿಇಓ ಅನ್ಮೋಲ್​ ಜೈನ್​ ಮುಂತಾದವರು ಇದ್ದರು.  
ಬೆಂಗಳೂರು ದಕ್ಷಿಣ

ಬ್ಯಾಂಕ್​ಗಳಲ್ಲಿ ಕನ್ನಡ ಕಡ್ಡಾಯವಾಗಿರಲಿ

ಪ್ರಮುಖ ಮುಖ್ಯಾಂಶಗಳು

  • ಸಂಸದ ಮಂಜುನಾಥ್​ ಸೂಚನೆ
  • ನಿಯಮದ ನೆಪದಲ್ಲಿ ರೈತರಿಗೆ ತೊಂದರೆ ಕೊಡಬೇಡಿ
ರಾಮನಗರ
ಕೃಷಿ ಕ್ಷೇತ್ರದ ಬಲವರ್ಧನೆಗೆ ಬ್ಯಾಂಕ್​ಗಳ ಸಹಕಾರ ಅಗತ್ಯವಾಗಿದ್ದು, ರೈತರಿಗೆ ಸಾಲ ಸೌಲಭ್ಯ ನೀಡುವ ವೇಳೆ ನಿಯಮ ಪಾಲನೆ ನೆಪದಲ್ಲಿ ತೊಂದರೆ ಕೊಡಬೇಡಿ ಎಂದು ಸಂಸದ ಡಾ.ಸಿ.ಎನ್​. ಮಂಜುನಾಥ್​ ಬ್ಯಾಂಕ್​ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ಯಾಂಕರ್​ಗಳ ಜಿಲ್ಲಾ ಸಮಾಲೋಚನಾ ಸಮಿತಿ (ಡಿಎಲ್​ಸಿಸಿ) ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (ಡಿಎಲ್​ಆರ್​ಸಿ) ಸಭೆಯಲ್ಲಿ ಮಾತನಾಡಿ, ಕೃಷಿ ಕ್ಷೇತ್ರವೇ ಅತಿ ಮುಖ್ಯವಾದ ಕ್ಷೇತ್ರವಾಗಿದ್ದು, ರೈತರು ಈಗಲೂ ತಮ್ಮ ಬಳಿ ಬ್ಯಾಂಕ್​ಗಳಿಗೆ ಸಾಲ ನೀಡುವಂತೆ ಸೂಚನೆ ನೀಡಲು ಮನವಿ ಹೊತ್ತು ಬರುತ್ತಾರೆ. ಇದು ನಿಲ್ಲಬೇಕು. ರೈತರಿಗೆ ಸಾಲ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಒಲವನ್ನು ಬ್ಯಾಂಕ್​ಗಳು ತೋರಬೇಕಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಒದಗಿಸಲಾಗುವ ಸಾಲ, ಸಹಾಯಧನಗಳನ್ನು ನಿಗಧಿತ ಅವಧಿಯಲ್ಲಿ ರೈತರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಸಣ್ಣ ಕೈಗಾರಿಕೋದ್ಯಮಿಗಳ ಅಗತ್ಯಗಳಿಗೆ ಶೀಘ್ರವಾಗಿ ಸ್ಪಂದಿಸಿ ಸಾಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿರುವ ಎಲ್ಲ ಬ್ಯಾಂಕ್​ಗಳ ಶಾಖೆಗಳಲ್ಲಿ ಕಡ್ಡಾಯವಾಗಿ ಒಬ್ಬರಾದರೂ ಕಡ್ಡಾಯವಾಗಿ ಕನ್ನಡ ಬಲ್ಲವರಾಗಬೇಕು. ಇದರಿಂದ ಬ್ಯಾಂಕ್​ ಗ್ರಾಹಕರ ಅದರಲ್ಲೂ ಗ್ರಾಮೀಣ ಗ್ರಾಹಕರ ಕುಂದುಕೊರತೆಗಳನ್ನು ಬಗೆಹರಿಸಲು ಸಹಾಯವಾಗುತ್ತದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಜೀವನ್​ ಜ್ಯೋತಿ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಹಾಗೂ ಅಟಲ್​ ಪೆನ್ಷನ್​ ಯೋಜನೆಯಡಿ ಹೆಚ್ಚು ಗುರಿ ಸಾಧಿಸಿದ ಬ್ಯಾಂಕ್​ಗಳ ಶಾಖಾ ವ್ಯವಸ್ಥಾಪಕರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
ಕಿಸಾನ್​ ಕ್ರೆಡಿಟ್​ ಕಾರ್ಡ್​ ಯೋಜನೆಯಡಿ ಸಾಧಿಸಿರುವ ಪ್ರಗತಿ, ಖೇತಿ ಬಚಾವೋ ಅಭಿಯಾನ ಹಾಗೂ ಕೃಷಿಕ ಅಪ್ಲಿಕೇಶನ್​, ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್​ ನಿಧಿ ವಿಶ್ವಕರ್ಮ ಯೋಜನೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಪಿಎಂ ಸೂರ್ಯ ಘರ್​ ಯೋಜನೆ, ಪ್ರಧಾನ ಮಂತ್ರಿ ಸೂಕ್ಷ$್ಮ ಆಹಾರ ಸಂಸ್ಕರಣಾ ಉದ್ಯಮಗಳ ಔಪಚಾರಿಕೀಕರಣ ಯೋಜನೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತೂ ಪ್ರಗತಿ ಪರಿಶೀಲನೆ ನಡೆಸಲಾಯಿತು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್​ ಜೈನ್​, ಜಿಲ್ಲಾ ಲೀಡ್​ ಬ್ಯಾಂಕ್​ ವ್ಯವಸ್ಥಾಪಕ ಮೋಹನ್​ ಕುಮಾರ್​, ವಿವಿಧ ಬ್ಯಾಂಕ್​ಗಳ ಅಧಿಕಾರಿಗಳಾದ ರಾಜ್​ ಕುಮಾರ್​, ವಿಜಯಶ್ರೀ ಮುಂತಾದವರು ಇದ್ದರು.


ಬ್ಯಾಂಕಿಂಗ್​ ಸೇವೆ ಜನಸ್ನೇಹಿಯಾಗಲಿ:

ಕೃಷಿ, ಸ್ವಯಂ ಉದ್ಯೋಗ, ಶಿಕ್ಷಣ ಸಾಲ, ಮಹಿಳಾ ಸಬಲೀಕರಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ವಿತರಣೆ ಸೇರಿದಂತೆ ವಿವಿಧ ಬ್ಯಾಂಕಿಂಗ್​ ಯೋಜನೆಗಳ ಪ್ರಗತಿ ಪರಿಶೀಲಿಸಿದ ಸಂಸದರು, ಸರ್ಕಾರದ ವಿವಿಧ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು ಹಾಗೂ ಬ್ಯಾಂಕಿಂಗ್​ ಸೇವೆಗಳನ್ನು ಮತ್ತಷ್ಟು ಜನಸ್ನೇಹಿಯಾಗಿ ರೂಪಿಸುವುದು, ಫಲಾನುಭವಿಗಳಿಗೆ ಸುಲಭವಾಗಿ ಸಾಲ ಸೌಲಭ್ಯ ಒದಗಿಸುವುದು ಹಾಗೂ ಆರ್ಥಿಕ ಬೆಳವಣಿಗೆಗೆ ಸಹಕಾರ ನೀಡುವಂತೆ ಸಂಸದರು ಬ್ಯಾಂಕರ್​ಗಳಿಗೆ ಸೂಚಿಸಿದರು.
ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಬ್ಯಾಂಕ್​ಗಳು ಹಾಗೂ ಸಂಬಂಧಿತ ಇಲಾಖೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ದೇಶದಲ್ಲಿ ಕೆಲವರು ಸಾವಿರಾರು ಕೋಟಿ ರೂ. ಸಾಲ ಪಡೆದು ಮರುಪಾವತಿ ಮಾಡದೆ ವಿದೇಶಗಳಿಗೆ ತೆರಳುವ ಘಟನೆಗಳು ನಡೆಯುತ್ತವೆ. ಆದರೆ ಜನಸಾಮಾನ್ಯರು ಹಾಗೂ ರೈತರು ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿಸುತ್ತಾರೆ, ಆದಕಾರಣ ಬ್ಯಾಂಕ್​ಗಳು ರೈತರು ಮತ್ತು ಸಾಮಾನ್ಯ ಜನರ ಬಗ್ಗೆ ಹೆಚ್ಚಿನ ವಿಶ್ವಾಸ ಇಟ್ಟು, ಅವರಿಗೆ ಅಗತ್ಯವಿರುವ ಸಾಲ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಬೇಕು.
> ಡಾ.ಸಿ.ಎನ್​ ಮಂಜುನಾಥ್​, ಸಂಸದ