ಸಂಸದ ಡಾ.ಸಿ.ಎನ್​.ಮಂಜುನಾಥ್​ 
ಬೆಂಗಳೂರು ದಕ್ಷಿಣ

ವಿಕಸಿತ ಭಾರತ ನಿರ್ಮಾಣಕ್ಕೆ ಕೈಜೋಡಿಸಿ

ಕನಕಪುರ: ಪ್ರಧಾನಿ ನರೇಂದ್ರ ಮೋದಿ ಅವರು 2047ರ ವೇಳೆಗೆ ವಿಕಸಿತ ಭಾರತ ಗುರಿ ಹೊಂದಿದ್ದಾರೆ. ಅವರ ಹೊಸ ಭಾರತದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸಂಸದ ಡಾ.ಸಿ.ಎನ್​.ಮಂಜುನಾಥ್​ ಹೇಳಿದರು.
ತಾಲೂಕಿನ ಕೊತ್ತನೂರು ಗ್ರಾಮದಲ್ಲಿ ಶುಕ್ರವಾರ ಬಿಜೆಪಿ ಸಂಸ್ಥಾಪನಾ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ನಮ್ಮ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮವು ಗ್ರಾಮೀಣ ಭಾರತದ ಸಮಸ್ಯೆಗಳು ಮತ್ತು ಕನಸುಗಳಿಗೆ ಸ್ಪಂದಿಸುವ ಮಹತ್ವದ ಪ್ರಯತ್ನವಾಗಿದ್ದು, ಇದಕ್ಕೆ ಪಕ್ಷದ ಕಾರ್ಯಕರ್ತರ ಪರಿಶ್ರಮ, ನಿಷ್ಠೆ ಅಗತ್ಯ ಎಂದರು.
ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗ್ರಾಮಸ್ಥರು ಒಗ್ಗೂಡಿ ಸಮನ್ವಯದಿಂದ ಕೆಲಸ ಮಾಡಬೇಕು. ಸ್ಥಳಿಯ ಸಂಪನ್ಮೂಲಗಳನ್ನು ಸದ್ಬಳಸಿಕೊಂಡು ಗ್ರಾಮಗಳನ್ನು ಮಾದರಿ ಹಳ್ಳಿಗಳನ್ನಾಗಿಸಲು ಶ್ರಮಿಸೋಣ. ಭಾರತೀಯ ಜನತಾ ಪಕ್ಷವು ರಾಜಕೀಯ ಮಾತ್ರವಲ್ಲದೇ, ದೇಶಭಕ್ತಿ ಹಾಗೂ ಸೇವಾ ಭಾವನೆಯಿಂದ ಸಶಕ್ತ ಭಾರತ ನಿರ್ಮಾಣದ ಮಹತ್ತರ ದೃಷ್ಟಿಕೋನ ಹೊಂದಿದೆ ಎಂದರು.
ಪಕ್ಷದ ಮುಖಂಡರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕು. ಆಗ ಮಾತ್ರ ಸಮಾಜದಲ್ಲಿ ಶಾಶ್ವತ ಬದಲಾವಣೆ ತರಲು ಸಾಧ್ಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಠರಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳೋಣ ಎಂದು ಕರೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಆನಂದ ಸ್ವಾಮಿ, ಮುಖಂಡರಾದ ಗೌತಮ್​ ಮರಿಲಿಂಗೇಗೌಡ, ಪ್ರಸಾದ್​ ಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಪಿ.ಕುಮಾರ್​, ನಗರಾಧ್ಯಕ್ಷ ಕೋಟೆ ಮಂಜುನಾಥ್​, ಮಹಿಳಾ ಮೋರ್ಚಾ ಅಧ್ಯೆ ಮಮತಾ, ದಿಶಾ ಕಮಿಟಿ ಸದಸ್ಯೆ ಶೋಭಾ ಹಾಗೂ ಇತರರಿದ್ದರು.