ಎಚ್​ಡಿಕೆ, ಆರ್​. ಅಶೋಕ್​ ವಿರುದ್ಧ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ವಾಗ್ದಾಳಿ 
ಬೆಂಗಳೂರು ದಕ್ಷಿಣ

ಎಚ್ಡಿಕೆಗೆ ನನ್ನ ಆಸ್ತಿ ಬರೆದುಕೊಡುತ್ತೇನೆ

* ಸಚಿವ ಬಾಲಕೃಷ್ಣ ಟಾಂಗ್ *ಆರ್. ಅಶೋಕ್ ವಿರುದ್ಧವೂ ವಾಗ್ದಾಳಿ *ನಮ್ಮನ್ನು ಬಯೋದಿಕ್ಕಾದರೂ ಅವರು ಬದುಕಬೇಕು

ರಾಮನಗರ: ನೈಸ್ ವ್ಯಾಪ್ತಿಯಲ್ಲಿ ನಂದೇನಾದರೂ ಜಮೀನು ಇದ್ದರೆ ಅವರಿಗೆ ಬರೆದುಕೊಡುತ್ತೇನೆ. ಎಲ್ಲವನ್ನೂ ಅವರಿಗೆ ನೋಂದಣಿ ಮಾಡಿಕೊಡುತ್ತೇನೆ. ಒಂದು ವೇಳೆ ದಾಖಲೆ ಕೊಟ್ಟರೆ ಕುಮಾರಸ್ವಾಮಿಗೆ ಮಾತ್ರವಲ್ಲ, ಅವರ ಧರ್ಮಪತ್ನಿಗೆ ಹಾಗೂ ಮಕ್ಕಳ ಹೆಸರಿಗೆ ಬರೆದು ಕೊಡುತ್ತೇನೆ ಎಂದು ಪೌರಾಢಳಿತ ಸಚಿವ ಎಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಬಳಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಸ್‌ಗೆ ಭೂಮಿ ಕೊಟ್ಟಿರುವ ರೈತರ ಜತೆಗೆ ಸಂವಾದವನ್ನು, ಎಚ್.ಡಿ.ಕೆ ಸಿಎಂ ಆಗಿದ್ದಾಗ ಮಾಡಿದ್ದರೆ ಅಭಿನಂದಿಸಬಹುದಿತ್ತು. ಆದರೆ ಅಂದು ತಾಜ್ ವೆಸ್ಟ್ ಎಂಡ್‌ನಲ್ಲಿ ಕುಟುಂಬ ಸಮೇತ ಮಲಗಿದ್ದರು. ಇವರು ಮಲಗಿದ್ದರಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ನಾವು ಎಚ್ಚರ ಮಾಡುವ ಪ್ರಯತ್ನ ಮಾಡಿದೊ, ಆದರೆ ಮಲಗುವ ನಾಟಕವಾಡುತ್ತಿದ್ದ ಅವರು ಎದ್ದಿರಲಿಲ್ಲ ಎಂದು ಟೀಕಿಸಿದರು.

ಈಗ ನೈಸ್ ವ್ಯಾಪ್ತಿಯಲ್ಲಿ ಡಿಕೆಶಿ ಜೊತೆಗೆ ಬಾಲಕೃಷ್ಣ ಹಾಗೂ ರಂಗನಾಥ್ ಅವರ ಜಮೀನು ಇದೆ ಆರೋಪಿಸುತ್ತಿದ್ದಾರೆ. ಈ ಹಿಂದೆ ತಾವರೆಕೆರೆ ಜಮೀನಿನ ಬಗ್ಗೆ ಆರೋಪ ಮಾಡಿದ್ದರು, ಅದಕ್ಕೆ ಸದನದಲ್ಲೇ ಉತ್ತರ ಕೊಟ್ಟಿದ್ದೇನೆ ಸುಮ್ಮನೆ ಖಾಲಿ ಮಾತನಾಡೋದು ಬಿಟ್ಟು ದಾಖಲೆ ಬಿಡುಗಡೆ ಮಾಡಲು ಹೇಳಿ ಎಂದು ಸವಾಲು ಹಾಕಿದರು.

ಇಬ್ಬರೂ ದಾಸಯ್ಯಗಳು

ಶೀಘ್ರದಲ್ಲೇ ಶೇ.50 ಗ್ಯಾರಂಟಿ ಕಡಿತ ಆಗುತ್ತದೆ ಎಂಬ ವಿ ಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಬಾಲಕೃಷ್ಣ,

ಆರ್.ಅಶೋಕ್ ಹಾಗೂ ಕುಮಾರಸ್ವಾಮಿ ಇಬ್ಬರನ್ನೂ ಹೀಗೆ ಹೇಳೋಕೆ ಬಿಟ್ಟಿದ್ದೀವಿ. ಇಬ್ಬರೂ ದಾಸಯ್ಯನ ತರ ಡಂಗೂರ ಹೊಕಿಕೊಂಡು ಓಡಾಡೋಕೆ ಬಿಟ್ಟಿದ್ದೀವಿ ಎಂದ ಅವರು, ಗ್ಯಾರಂಟಿಯಿಂದ ಸಂಕಷ್ಟ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ನಾನು ಹೇಳಿದ್ದು ಹೊಸ ಯೋಜನೆಗೆ ಇತಿಮಿತಿ ಇದೆ ಅಂತ, ಗ್ಯಾರಂಟಿಗೆ ನಮ್ಮ ಬಳಿ ಹಣ ಇದೆ, ಹೊಸ ಯೋಜನೆ ಬಂದಾಗ ಆಲೋಚನೆ ಮಾಡಬೇಕು ಅಂತ ಹೇಳಿದ್ದೇನೆ, ಬೇರೆಯವರ ರೀತಿ ಉಡಾಫೆಯಾಗಿ ನಾವು ಮಾತನಾಡಲು ಆಗಲ್ಲ ಎಂದರು.

ಅವರು ಸಾಯೋದು ಬೇಡ

ನೈಸ್ ನಲ್ಲಿ ತಮ್ಮ ಅಕ್ರಮ ಇರುವುದನ್ನು ಸಾಬೀತು ಮಾಡಿದರೆ ಸಾರ್ವಜನಿಕವಾಗಿ ನೇಣುಹಾಕಿಕೊಳ್ಳುತ್ತೇನೆ ಎಂಬ ಎಚ್ಡಿಕೆ ಹೇಳಿಕೆಗೆ,

ಪಾಪ ಅವರು ನೇಣುಹಾಕಿಕೊಳ್ಳೊದು ಬೇಡ, ನಮ್ಮನ್ನ ಬೈಯೋದಕ್ಕಾದಾದರೂ ಅವರು ಇರಬೇಕು, ಈಗಲೇ ನೇಣು ಹಾಕೋಳೋದು ಬೇಡ. ಇನ್ನೂ ಸ್ವಲ್ಪ ದಿವಸ ಇರಲಿ ಎಂದು ಪ್ರತಿಕ್ರಿಯಿಸಿದರು.

ಹಂದಿಯಂತೆ - ಇದು ಎಚ್‌ಡಿಕೆಗಲ್ಲ

ಟೀಕಿಸುವ ಬರದಲ್ಲಿ ಕನಕದಾಸರ ಪದವನ್ನು ಬಳಕೆ ಮಾಡಿ ಎಚ್‌ಡಿಕೆ ಅವರನ್ನು ಬಾಲಕೃಷ್ಣ ಹಂದಿಗೆ ಓಲಿಕೆ ಮಾಡಿದರು.

ಕನಕದಾಸರೇ ಹೇಳಿರುವುದಿಲ್ಲವೇ, ನಿಂದಕರಿರಬೇಕು ಹಂದಿಯ ಹಾಗೆ ಎಂದು, ನಿಂದಕರು ಇದ್ದಾಗ ಮಾತ್ರ ನಾವು ಎಚ್ಚೆತ್ತುಕೊಳ್ಳಬಹುದು. ಹಂದಿ ಊರಿನಲ್ಲೆಲ್ಲಾ ಓಡಾಡ್ಕೊಂಡು ಸ್ವಚ್ಛ ಮಾಡುತ್ತದೆ. ಹಾಗೆ ನಿಂದಕರು ಇದ್ದರೆ ಎಲ್ಲಾ ಸ್ವಚ್ಛ ಆಗುತ್ತೆ ಎನ್ನುತ್ತಲೇ, ಇದನ್ನು ಕುಮಾರಸ್ವಾಮಿ ಅವರಿಗೆ ಹೇಳಿಲ್ಲ. ಇದನ್ನ ಕುಮಾರಸ್ವಾಮಿಗೆ ಹೇಳಿಲ್ಲ, ದಾಸರ ಪದ ಅಷ್ಟೇ ಎಂದು ವ್ಯಂಗ್ಯವಾಡಿದರು.