ಕನಕಪುರ ತಾಲೂಕಿನ ಆಲನಾಥ ಗ್ರಾಮದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಮಾತೃಪಿತೃಗಳ ಸಮಾಧಿಗೆ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ದೇಗುಲ ಮಠದ ಶ್ರೀ ಚನ್ನಬಸವಸ್ವಾಮೀಜಿ, ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಪತ್ನಿ ಶೈಲಜಾ ಸೋಮಣ್ಣ ಇದ್ದರು.
ಕೇಂದ್ರ ಸಚಿವ ವಿ.ಸೋಮಣ್ಣ ಸ್ಪಷ್ಟನೆ > ಪಕ್ಷದ ವರಿಷ್ಠರ ಆದೇಶಕ್ಕೆ ಬದ್ಧ
ಕನಕಪುರ: ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ನಾನು ಆಕಾಂಯಾಗಿಲ್ಲ. ಈಗಾಗಲೇ ವಿಜಯೇಂದ್ರ ಅವರು ಆ ಹುದ್ದೆಯಲ್ಲಿದ್ದು ಪಕ್ಷ ಮುನ್ನಡೆಸುತ್ತಿದ್ದಾರೆ. ಈ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ಮಾಡಲಿದ್ದು ಅದಕ್ಕೆ ನಾವೆಲ್ಲರೂ ಬದ್ಧ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ತಾಲೂಕಿನ ಕೋಡಿಹಳ್ಳಿ ಹೋಬಳಿ ಸ್ವಗ್ರಾಮ ಆಲನಾಥದಲ್ಲಿ ತಂದೆ&ತಾಯಿಯ ಸಮಾಧಿಗೆ ವಿಶೇಷ ಪೂಜಾ ಕಾರ್ಯದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು. ಈ ಹಿಂದೆ ನಾನು ಗೋವಿಂದರಾಜನಗರ ೇತ್ರದಲ್ಲಿ ಸ್ಪರ್ಧಿಸಲು ಆಶಿಸಿದ್ದೆ. ಆದರೆ, ಪಕ್ಷದ ವರಿಷ್ಠರು ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ಆದೇಶ ನೀಡಿದ್ದರು. ಈಗಲೂ ಪಕ್ಷದ ಹೈಕಮಾಂಡ್ ವಿರುದ್ಧ ನಾನೆಂದು ಹೋಗುವುದಿಲ್ಲ. ಒಂದು ವೇಳೆ ವರಿಷ್ಠರೇ ಆದೇಶಿಸಿದರೆ ಅದನ್ನು ಪಾಲಿಸಲು ಸಿದ್ಧನಿದ್ದೇನೆ ಎಂದರು.
ರಾಜ್ಯ ಸರ್ಕಾರದ ಕುರ್ಚಿ ಕದನ, ರೈಲ್ವೆ ಯೋಜನೆಗಳ ಕಾಮಗಾರಿಗಳು, ಕನಕಪುರ ರೈಲ್ವೆ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಸತ್ಯಮಂಗಲಕ್ಕೆ ರೈಲ್ವೆ ಯೋಜನೆ ತರುವುದು ಬಹುದಿನದ ಕನಸಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಸಿದ್ಧವಿದೆ. ಆದರೆ, ರಾಜ್ಯ ಸರ್ಕಾರದಿಂದ ಈ ಯೋಜನೆಗೆ ಸಂಬಂಧಿಸಿದಂತೆ ಅಗತ್ಯ ಭೂಸ್ವಾಧಿನ ಮತ್ತಿತರ ಪ್ರಕ್ರಿಯೆಗಳು ಪ್ರಾರಂಭಗೊಂಡಿಲ್ಲ ಎಂದರು.
ರಾಯದುರ್ಗ, ತುಮಕೂರು, ಗದಗ, ಬಾಗಲಕೋಟೆ, ಕುರ್ಜಿ, ಹುಬ್ಬಳ್ಳಿ ಹಾಗೂ ಅಂಕೋಲಗಳಲ್ಲಿ ಎರಡು ಮೂರು ದಶಕಗಳ ಹಳೆ ಯೋಜನೆಗಳಿಗೆ 69 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಸಮರೋಪಾದಿಯಲ್ಲಿ ನಡೆಯುತ್ತಿದೆ. 640 ಸೇತುವೆ ಯೋಜನೆ ಹಾಗೂ 250 ಮೇಲು ಸೇತುವೆ ಕೆಲಸ ಪ್ರಾರಂಭವಾಗಿದೆ. ಈ ಭಾಗದಲ್ಲಿ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರ ಅಸಹಕಾರ ತೋರುತ್ತಿದೆ. ಹೀಗಾದರೆ ನಾವು ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಪತ್ನಿ ಶೈಲಜಾ ಸೊಮಣ್ಣ, ಮಕ್ಕಳು, ಕುಟುಂಬ ಸದಸ್ಯರು, ಚಿತ್ರ ನಿರ್ದೇಶಕ ವೀರಪ್ಪ ಮರಳವಾಡಿ, ಜಿಪಂ ಮಾಜಿ ಅಧ್ಯಕ್ಷ ಎಂ.ಎನ್.ನಾಗರಾಜು, ಗ್ರಾಪಂ ಮಾಜಿ ಅಧ್ಯಕ್ಷರಾದ ಶಿವಶಂಕರ್, ಶಿವಕುಮಾರ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಉಮಾಶಂಕರ್ ಹಲವರು ಇದ್ದರು.
ಸಕಾರಾತ್ಮಕವಾಗಿ ಸ್ಪಂದಿಸಿದರೆ ಅಭಿವೃದ್ಧಿ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ನಾಣ್ಯದ 2 ಮುಖಗಳು ಎಂಬುದನ್ನು ಅರ್ಥ ಮಾಡಿಕೊಂಡು ರಾಜ್ಯ ಸರ್ಕಾರ ಕೆಲಸ ಮಾಡಬೇಕು, ಹಾಗಾದಾಗ ಮಾತ್ರ ಪ್ರಗತಿ ಸಾಧ್ಯ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಸಕಾರಾತ್ಮವಾಗಿ ಸ್ಪಂದಿಸಿ ಕೇಂದ್ರದ ಜತೆ ಸಹಕರಿಸಿದರೆ ಅಭೂತಪೂರ್ವ ಸಹಕಾರ ಮೋದಿ ಸರ್ಕಾರದಿಂದ ದೊರೆಯಲಿದೆ ಎಂದು ಸೋಮಣ್ಣ ತಿಳಿಸಿದರು.
ಪ್ರಸ್ತುತ ಸಮಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಕುರ್ಚಿ ಕದನ ಜನರಲ್ಲಿ ಅಸಹ್ಯ ಹುಟ್ಟಿಸಿದೆ. ರಾಜ್ಯದಲ್ಲಿ ಸರ್ಕಾರ ಇದೆಯೇ ಎಂದು ಪ್ರಶ್ನಿಸುವಂತಾಗಿದೆ. ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ರಾಜ್ಯದ ಪ್ರಗತಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ನಾಯಕರು ಸ್ವಾರ್ಥಕ್ಕಾಗಿ ರಾಜ್ಯ 6.50 ಕೋಟಿ ಜನರ ಭಾವನೆ ಧಿಕ್ಕರಿಸಿ ಮೂಲಭೂತ ಸೌಲಭ್ಯ ಕೊಡಲು ವಿಫಲರಾಗಿದ್ದಾರೆ. ಸಿ.ಎಂ.ಸಿದ್ದರಾಮಯ್ಯ ಗಾಂಭೀರ್ಯ, ಸೌಜನ್ಯವಿಲ್ಲದ ವ್ಯಕ್ತಿಯಾಗಿದ್ದಾರೆ. ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುತ್ತಿರುವ ಪ್ರಧಾನಮಂತ್ರಿ ಮೋದಿ ಬಗ್ಗೆ ದುರಹಂಕಾರದ ಮಾತು ಆಡುತ್ತಾರೆ. ಇಂತಹವರನ್ನು ಕಾಂಗ್ರೆಸ್ 2ನೇ ಬಾರಿಗೆ ಮುಖ್ಯಮಂತ್ರಿ ಮಾಡಿರುವುದು ದುರಂತ. ಸರ್ಕಾರದ ಪಾಪದ ಕೊಡ ತುಂಬಿದೆ, ಯಾವಾಗ ಏನಾಗುತ್ತೋ ಗೊತ್ತಿಲ್ಲ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ರೇಸ್ನಲ್ಲಿದ್ದಾರೆ, ಅವರು ಮುಖ್ಯಮಂತ್ರಿಯಾದರೆ ನನಗೂ ಸಂತೋಷ. ನಾನು ಅವರು ಒಂದೇ ತಾಲೂಕಿನವರು. ಅವರು ಸಿಎಂ ಆದರೆ ನಾನೂ ಸಂತೋಷ ಪಡುತ್ತೇನೆ. ಮತ್ತೊಂದೆಡೆ ನಾನು ಸಂಸದನಾಗಿರುವ ತುಮಕೂರಿನಲ್ಲಿ ಪರಮೇಶ್ವರ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ಸುದ್ದಿ ಇದೆ. ಅವರು ಮುಖ್ಯಮಂತ್ರಿಯಾದರೆ ಶುಭ ಹಾರೈಸುವೆ ಎಂದರು.