crime 
ಬೆಂಗಳೂರು ದಕ್ಷಿಣ

ಪತ್ನಿಗೆ ಇರಿದು ಆತ್ಮಹತ್ಯೆ ಮಾಡಿಕೊಂಡ ಪತಿ

ಪ್ರಮುಖ ಮುಖ್ಯಾಂಶಗಳು

  • ಕೌಟುಂಬಿಕ ಕಲಹ
  • ಸೈಬರ್​ ಸೆಂಟರ್​ಗೆ ನುಗ್ಗಿ ಮನಬಂದಂತೆ ಹಲ್ಲೆ
  • ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
ಕನಕಪುರ
ಅಚ್ಚಲುಗೇಟ್​ ಬಳಿ ಇರುವ ಸೈಬರ್​ ಸೆಂಟರ್​ಗೆ ನುಗ್ಗಿ ಪತ್ನಿಯನ್ನು ಕೊಲ್ಲಲು ಯತ್ನಿಸಿದ ಪತಿ, ಬಳಿಕ ತಾನೂ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೋಡಿಹಳ್ಳಿ ಹೋಬಳಿ ತಿಪ್ಪೂರಿನ ಸಂಜಯ್​ (26) ಮೃತ. ಸಂಜಯ್​ 6 ವರ್ಷಗಳ ಹಿಂದೆ ನಗರದ ಹೌಸಿಂಗ್​ ಬೋರ್ಡ್​ ನಿವಾಸಿ ನಿಸರ್ಗಾ (24) ಅವರನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಮಕ್ಕಳಿರಲಿಲ್ಲ. ನಿಸರ್ಗಾ ಸೈಬರ್​ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕೌಟುಂಬಿಕ ಕಲಹದಿಂದ ಇಬ್ಬರೂ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದರು ಎನ್ನಲಾಗಿದ್ದು, ಬೇರೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು.
ಬುಧವಾರ ಬೆಳಗ್ಗೆ 10 ಗಂಟೆಗೆ ಸಾತನೂರು ಹೋಬಳಿ ಅಚ್ಚಲು ಗೇಟ್​ಬಳಿಯ ನಿಸರ್ಗಾ ಕೆಲಸ ಮಾಡುತ್ತಿದ್ದ ಸೈಬರ್​ ಸೆಂಟರ್​ಗೆ ಬಂದ ಸಂಜಯ್​ ಪತ್ನಿಯೊಂದಿಗೆ ಜಗಳ ತೆಗೆದಿದ್ದಾನೆ. ಇದು ವಿಕೋಪಕ್ಕೆ ತಿರುಗಿ ಚಾಕುವಿನಿಂದ ನಿಸರ್ಗಾಳ ಕತ್ತು, ಎದೆ, ಕೈ, ತಲೆ ಭಾಗದಲ್ಲಿ ಮನಬಂದಂತೆ ಇರಿದಿದ್ದಾನೆ. ಈ ವೇಳೆ ತಡೆಯಲು ಬಂದ ಅಂಗಡಿ ಮಾಲೀಕ ಶರತ್​ ಮೇಲೂ ಹಲ್ಲೆ ಮಾಡಿದ್ದಾನೆ. ಇದರಿಂದ ಶರತ್​ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ. ನಂತರ ನಿಸರ್ಗಾ ಪ್ರಜ್ಞೆತಪ್ಪಿ ಬಿದ್ದಿದ್ದನ್ನು ಕಂಡ ಸಂಜಯ್​ ಅದೇ ಚಾಕುವಿನಿಂದ ತಾನು ಇರಿದುಕೊಂಡು ಸ್ಥಳದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗ್ರಾಮಾಂತರ ಠಾಣಾ ಸರ್ಕಲ್​ ಇನ್​ಸ್ಪೆಕ್ಟರ್​ ವಿಕಾಸ್​ಗೌಡ, ನಗರ ಠಾಣಾ ಸರ್ಕಲ್​ ಇನ್​ಸ್ಪೆಕ್ಟರ್​ ಅನಂತ್​ರಾಮ್​ ಮತ್ತು ಸಿಬ್ಬಂದಿ ನಿಸರ್ಗಾಳನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಸಂಜಯ್​ ಮೃತ ದೇಹವನ್ನು ಕನಕಪುರ ಸರ್ಕಾರಿ ಶವಾಗಾರಕ್ಕೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.