ಕ್ರಷರ್ ಲಾರಿಗಳನ್ನು ತಡೆದು ಹೆಗ್ಗಡಗೆರೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
- ಧೂಳು ಶಬ್ಧ ಮಾಲಿನ್ಯದಿಂದ ಕಂಗಾಲು
- ಉರಗಳ್ಳಿಯಿಂದ ಬೆಂಗಳೂರಿಗೆ ಹೋಗುವ ಭಾರೀ ವಾಹನಗಳು
- ಹೆಗ್ಗಡಗೆರೆ ಗ್ರಾಮಸ್ಥರ ಪ್ರತಿಭಟನೆ
ಬಿಡದಿ: ಕ್ರ್ರಷರ್ ಲಾರಿಗಳ ಓಡಾಟದಿಂದ ಗ್ರಾಮದಲ್ಲಿ ಶಬ್ಧ ಮಾಲಿನ್ಯ ಮತ್ತು ಮನೆಗಳಿಗೆ ಧೂಳು ಹೆಚ್ಚಾಗಿದೆ ಎಂದು ಆರೋಪಿಸಿ ಹೆಗ್ಗಡಗೆರೆ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಕೂಗಳತೆ ದೂರದಲ್ಲಿನ ಉರಗಹಳ್ಳಿ ಗ್ರಾಮದಲ್ಲಿನ ಬಂಡೆಗಳಿಂದ ಪ್ರತಿದಿನ ನೂರಾರು ಟಿಪ್ಪರ್ ಲಾರಿಗಳು ಹೆಗ್ಗಡಗೆರೆ ಮಾರ್ಗವಾಗಿ ಬೆಂಗಳೂರು- ಮೈಸೂರು ಹೆದ್ದಾರಿಗೆ ಓಡಾಟ ಮಾಡುತ್ತಿವೆ. ಇದರಿಂದ ಪ್ರತಿದಿನ ರಸ್ತೆಯ ಇಕ್ಕೆಲಗಳ ಮನೆಗಳಿಗೆ ಧೂಳು ಹೆಚ್ಚಾಗಿದೆ. ಇನ್ನು ರಾತ್ರಿಯ ವೇಳೆಯಲ್ಲಿ ಭಾರೀ ವಾಹನಗಳ ಒಡಾಟದಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿದರು.
ಮಾಲೀಕರ ಜೊತೆಗೆ ಸಭೆ: ಕ್ರಷರ್ಗಳಿಂದ ಬರುವ ಲಾರಿಗಳನ್ನ ತಡೆದು ಕಳೆದ ವಾರ, ಗ್ರಾಮದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಲಾರಿಗಳು ಬಾರದಂತೆ ಎಚ್ಚರಿಕೆ ನೀಡಿದ್ದರು. ಅಂದಿನಿಂದ ಲಾರಿಗಳು ಸಂಚಾರ ಇರಲಿಲ್ಲ ಹಾಗಾಗಿ ಶುಕ್ರವಾರ ಗ್ರಾಮಸ್ಥರು, ಕ್ರಷರ್ ಮಾಲೀಕರು ಹಾಗೂ ಲಾರಿ ಮಾಲೀಕರ ಜೊತೆಗೆ ಗ್ರಾಮದ ದೇವಾಲಯದ ಬಳಿ ಸಭೆ ನಡೆಸಲಾಯಿತು. ಆದರೆ ಸಭೆಯಲ್ಲಿ ನಡೆದ ವಿಚಾರಗಳಲ್ಲಿ ಒಮ್ಮತ ಮೂಡದೆ ಸಭೆ ಅಂತ್ಯವಾಗಿತ್ತು.
ಹಲವು ಷರತ್ತುಗಳಿಗೆ ಪಟ್ಟು
ಗ್ರಾಮದಲ್ಲಿ ಲಾರಿಗಳು ಸಂಚಾರ ಮಾಡಬೇಕಾದರೆ ಹಲವು ರೀತಿಯ ಸುರಕ್ಷತಾ ಕ್ರಮಗಳನ್ನ ಅನುಸರಿಸಿದರೆ ಲಾರಿಗಳು ಸಂಚಾರ ಮಾಡುವ ಬಗ್ಗೆ ಚರ್ಚೆಗಳು ನಡೆದವು. ಪ್ರತಿ ಲಾರಿಗಳು ಹೆಚ್ಚಿನ ಲೋಡ್ ಹಾಕಿಕೊಂಡು ಬಾರಬಾರದು, ಲೋಡ್ ಆದ ನಂತರ ನೀರು ಹಾಕಿಕೊಂಡು ಮೇಲೆ ಹೊದಿಕೆ ಕಟ್ಟಿಕೊಂಡು ಬರಬೇಕು, ಗ್ರಾಮದಲ್ಲಿ ಅತೀ ವೇಗದ ಚಾಲನೆ ಮಾಡದೆ ಹಾಗೂ ಅನಗತ್ಯವಾಗಿ ಶಬ್ದ ಮಾಡದಂತೆ ಸಂಚಾರ ಮಾಡಲಿ ಹಾಗೂ ಪ್ರಮುಖವಾಗಿ ಬೆಳಿಗ್ಗೆ ಯಿಂದ ರಾತ್ರಿ 9 ಗಂಟೆ ಒಳಗೆ ಮಾತ್ರ ಲಾರಿಗಳು ಸಂಚಾರ ಮಾಡಬೇಕೆಂದು ಗ್ರಾಮದ ಮಹಿಳೆಯರು ಸಭೆಯ ಮುಂದೆ ವಿಷಯಗಳನ್ನ ಇಟ್ಟಿದ್ದರು.
ಈ ವಿಚಾರವಾಗಿ ಸಭೆಯಲ್ಲಿ ಲಾರಿಗಳ ಮಾಲೀಕರು ಕ್ರಷರ್ ಮಾಲೀಕರಿಂದ ಸಕಾರಾತ್ಮಕವಾಗಿ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಲಾರಿಗಳ ಓಡಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿ ಸಭೆಯಿಂದ ಹೊರ ನಡೆದಿದ್ದರು.
ಶಾಲಾ ಮಕ್ಕಳಿಗೆ ತೊಂದರೆ:
ಪ್ರತಿದಿನ ಹಲವು ಖಾಸಗಿ ಶಾಲೆಗಳ ವಾಹನಗಳು ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತವೆ. ಬೆಳಿಗ್ಗೆ 6 ಗಂಟೆಗೆ ಲಾರಿಗಳ ಸಂಚಾರ ಕೂಡ ಆರಂಭವಾಗುತ್ತವೆ ಇದರಿಂದ ಗ್ರಾಮದ ಮಧ್ಯ ಭಾಗದಲ್ಲಿ ಶಾಲಾ ವಾಹನಗಳ ನಿಲುಗಡೆಗೆ ತೊಂದರೆಯಾಗುತ್ತಿದೆ ಹಾಗೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ತಾಯಂದಿರು ತಮ್ಮ ಮಕ್ಕಳನ್ನ ದಾಟಿಸಲು ಕೂಡ ಸಮಯ ಕೊಡುವುದಿಲ್ಲ ಇದೊಂದು ದೊಡ್ಡ ಸಮಸ್ಯೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನ ತೋಡಿಕೊಂಡರು.
ಈ ವೇಳೆ ಗ್ರಾಮದ ಮುಖಂಡರಾದ ಹರೀಶ್ ಪಾಟೀಲ್, ಹೇಮಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಮ್ಮ ಗ್ರಾಮದ ಸ್ವಲ್ಪ ದೂರದಲ್ಲಿ ಉರಗಹಳ್ಳಿ ಗ್ರಾಮ ಇದ್ದು ಅಲ್ಲಿ ಬಂಡೆಗಳು ಹೆಚ್ಚಾಗಿವೆ. ಹತ್ತಾರು ಕ್ರಷರ್ಗಳು ಕಾರ್ಯ ನಿರ್ವಹಿಸುತ್ತಿವೆ ಇಲ್ಲಿಂದ ಜೆಲ್ಲಿ ಕಲ್ಲು, ಎಂ ಸ್ಯಾಂಡ್ ತುಂಬಿ ಕೊಂಡು ಬರುವ ಲಾರಿಗಳು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನ ಅನುಸರಿಸದೆ ಬರುತ್ತಿರುವ ಕಾರಣ ಗ್ರಾಮದ ಮನೆಗಳಿಗೆಲ್ಲ ಧೂಳು ಬರುತ್ತಿದೆ. ಈ ಲಾರಿಗಳ ಬೇಕಾ ಬಿಟ್ಟಿ ಸಂಚಾರದಿಂದ ಬರುವ ಧೂಳಿನ ಸಮಸ್ಯೆಯಿಂದ ನಾನು ರಸ್ತೆ ಪಕ್ಕದಲ್ಲಿ ನಡೆಸುತ್ತಿದ್ದ ಹೋಟೆಲ್ ಮುಚ್ಚಿದ್ದೇನೆ. ಹಾಗಾಗಿ ಈ ಲಾರಿಗಳ ಯದ್ವಾತದ್ವ ಓಡಾಟಕ್ಕೆ ಅಧಿಕಾರಿಗಳು ಬ್ರೇಕ್ ಹಾಕಬೇಕಾಗಿದೆ.
ಚಿಕ್ಕತಾಯಮ್ಮ, ಹೋಟೆಲ್ ನಿಲ್ಲಸಿದ ಮಹಿಳೆ
ನಮ್ಮ ಗ್ರಾಮದಲ್ಲಿ ಕ್ರಷರ್ ಲಾರಿಗಳ ಓಡಾಟದಿಂದ ಆಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಮಸ್ಥರು ಮತ್ತು ಕ್ರಷರ್ ಮಾಲೀಕರು ಹಾಗೂ ಲಾರಿಗಳ ಮಾಲೀಕರ ಜೊತೆಗೆ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಗ್ರಾಮಸ್ಥರು ಹಲವು ಷರತ್ತುಗಳನ್ನ ಹಾಕಿದ್ದರು. ಸಭೆಯಲ್ಲಿ ಒಪ್ಪಿಕೊಂಡು ಹೋಗಿ ಲಾರೀ ಮಾಲೀಕರು ಈಗ ಉಲ್ಟಾ ಹೊಡೆದಿದ್ದಾರೆ. ಇದೀಗ ಪೊಲೀಸರ ಸಹಾಯದ ಮೂಲಕ ಲಾರಿಗಳನ್ನ ಬಿಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಇದರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ.
ನಾಗರಾಜು, ಹೆಗ್ಗಡಗೆರೆ ವಾರ್ಡ್ ಪುರಸಭೆ ಸದಸ್ಯ