ಸೂಫಿಯಾ - ಸಲ್ಮಾನ್  
ಬೆಂಗಳೂರು ದಕ್ಷಿಣ

ಪ್ರೀತಿಸಿ ಮದುವೆ ಆದವಳನ್ನೇ ಕೊಂದ...

ಪ್ರಮುಖ ಮುಖ್ಯಾಂಶಗಳು

  • ಇವರ ಪ್ರೀತಿಗೆ ಮನೆಯವರೂ ಒಪ್ಪಿದ್ದರು
  • ನಾಲ್ಕು ತಿಂಗಳ ಹಿಂದಷ್ಟೇ ಮದುವೆ ಆಗಿದ್ದ
  • ಅನುಮಾನದಿಂದ ಪತ್ನಿಯನ್ನೇ ಕೊಂದ
ರಾಮನಗರ: ಪ್ರೀತಿಸಿ ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ತನ್ನ ಪತ್ನಿಯನ್ನೇ ಗಂಡ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ರಾಮನಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಯಾರಬ್ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಸೂಫಿಯಾ ಭಾನು, ಕೊಲೆಯಾದ ನವ ವಿವಾಹಿತೆಯಾಗಿದ್ದು, ಸಲ್ಮಾನ್ (22) ತನ್ನ ಪತ್ನಿಯನ್ನೇ ಕೊಂದ ಗಂಡ. ರಾಮನಗರದ ಫಿಲೇಚರ್ ಒಂದರಲ್ಲಿ ಸೂಫಿಯಾ ಮತ್ತು ಸನ್ಮಾನ್ ಇಬ್ಬರೂ ಕೆಲಸ ಮಾಡುತ್ತಿದ್ದರು. ಇಬ್ಬರು ಪರಸ್ಪರ ಪ್ರೀತಿಸಿದ ಕಾರಣ ಸೂಫಿಯಾ ಕುಟುಂಬಸ್ಥರು ಕಳೆದ ನಾಲ್ಕು ತಿಂಗಳ ಹಿಂದೆ ಚನ್ನಪಟ್ಟಣದಲ್ಲಿ ದರ್ಗಾ ಸಮಿತಿಯವರು ಹಮ್ಮಿಕೊಂಡಿದ್ದ ಮದುವೆ ಸಮಾರಂಭದಲ್ಲಿ ಇಬ್ಬರ ಮದುವೆಯನ್ನು ಮಾಡಿಸಲಾಗಿತ್ತು.
ನಂತರ ರಾಮನಗರ ಯಾರಬ್‌ನಗರದಲ್ಲಿ ತನ್ನ ಮಾವನ ಮನೆಯಲ್ಲಿಯೇ ಸನ್ಮಾನ್ ವಾಸವಿದ್ದ. ಆದರೆ ಇತ್ತೀಚಿಗೆ ತನ್ನ ಪತ್ನಿಯ ಬಗ್ಗೆ ಅನುಮಾನ ವ್ಯಕ್ತಪಡಿಸಲು ಆರಂಭಿಸಿದ್ದ ಸಲ್ಮಾನ್, ಪತ್ನಿಯೊಂದಿಗೆ ಪ್ರತಿ ದಿನ ಜಗಳ ಮಾಡುತ್ತಿದ್ದ. ಮಂಗಳವಾರ ಸಂಜೆ ಸಹ ಮನೆಗೆ ಬಂದು ತನ್ನ ಪತ್ನಿಯೊಂದಿಗೆ ಜಗಳ ಆಡುತ್ತಿದ್ದ. ಈ ವೇಳೆ ಮನೆಯಲ್ಲಿಯೇ ಇದ್ದ ದೂರುದಾರರಾದ ಸೂಫಿಯಾ ಬಾನು ತಾಯಿ ತಬಸುಮ್ ಬಾನು ಇವರದ್ದು ಮಾಮೂಲಿ ಎಂದು ಸುಮ್ಮನಾಗಿದ್ದಾರೆ. ಮಗಳು ಚಾಕುನಿಂದ ಹೊಡೆದು ಹಾಕುತ್ತಿದ್ದಾನೆ ಎಂದು ಕೂಗಿದ್ದರಿಂದ ಆತಂಕಗೊAಡು ಜಗಳ ಬಿಡಿಸಲು ತೆರಳಿದ್ದಾರೆ.
ಆದರೆ, ಅಷ್ಟರಲ್ಲಾಗಲೇ ತನ್ನ ಪತ್ನಿಗೆ ಚಾಕುವಿನಿಂದ 2-3 ಬಾರಿ ಇರಿದಿದ್ದು, ಮಹಡಿಯಿಂದ ಹರಿಯುತ್ತಿದ್ದ ರಕ್ತದೊಂದಿಗೆ ಕೆಳಗೆ ಬರುವಷ್ಟರಲ್ಲೇ ಸೂಫಿಯಾ ಕುಸಿದು ಬಿದ್ದಿದ್ದಾಳೆ. ತಕ್ಷಣ ಈಕೆಯನ್ನು ರಾಮನಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈಧ್ಯರು ತಿಳಿಸಿದ್ದಾರೆ.
ಈ ಸಂಬಂಧ ಮೃತಳ ತಾಯಿ ತಬಸುಮ್ ಬಾನು ರಾಮನಗರ ಟೌನ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಸಲ್ಮಾನ್‌ನನ್ನು ಬಂಧಿಸಿದ್ದಾರೆ.