ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್, ರೈತ ಹೋರಾಟ ಸಮಿತಿಯ ಅಧ್ಯಕ್ಷ ರಾಮಯ್ಯ ಮುಖಂಡರಾದ ರವಿಕುಮಾರ್, ಅಶ್ವಥ್, ಹೊಸೂರು ಗುಂಡಣ್ಣ, ಮೂರ್ತಿ ಇದ್ದರು.  
ಬೆಂಗಳೂರು ದಕ್ಷಿಣ

ಬಹಿರಂಗ ಚರ್ಚೆಗೆ ಎಚ್‌ಡಿಕೆ ಸಿದ್ಧ

ಪ್ರಮುಖ ಮುಖ್ಯಾಂಶಗಳು

  • ಬಹಿರಂಗ ಚರ್ಚೆಗೆ ಎಚ್‌ಡಿಕೆ ಸಿದ್ಧ
ಬಹಿರಂಗ ಚರ್ಚೆಗೆ ಎಚ್‌ಡಿಕೆ ಸಿದ್ಧ
ಬಿಡದಿ: ನಿಗದಿತ ದಿನವೇ ಕುಮಾರಸ್ವಾಮಿ ಅವರು ಬೈರಮಂಗಲ ಗ್ರಾಮದಲ್ಲಿ ಬಹಿರಂಗ ಚರ್ಚೆಗೆ ಬರಲು ಸಿದ್ಧರಿದ್ದು, ಆಡಳಿತ ನಡೆಸುತ್ತಿರುವ ಸರ್ಕಾರ ವೇದಿಕೆ ಸಿದ್ಧಪಡಿಸಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುತ್ತೇನೆ ಎಂದು ಮಾಜಿ ಶಾಸಕ ಎ. ಮಂಜುನಾಥ್ ಸವಾಲು ಹಾಕಿದರು.
ಬಿಡದಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈರಮಂಗಲದಲ್ಲಿ ಚರ್ಚೆ ನಡೆದರೆ ಗಲಭೆ ಆಗುತ್ತದೆ ಎಂದು ಶಾಸಕ ಬಾಲಕೃಷ್ಣ ಹೇಳಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಹಾಗೂ ಡಿಕೆಶಿ ನಡುವೆ ಸವಾಲು ನಡೆದು ಕನಕಪುರಕ್ಕೆ ಕುಮಾರಸ್ವಾಮಿ ಅವರು ಹೋಗಿ ಭಾಷಣ ಮಾಡಿದ್ದರು. ಅಂದು ಅವರ ಜತೆ ನೀವೂ ಹೋಗಿದ್ದೀರಲ್ಲ ಅಲ್ಲಿ ಗಲಾಟೆ.. ಗಲಭೆ ಆಯಿತಾ? ಎಂದು ಪ್ರಶ್ನಿಸಿದರು.
ಯೋಜನೆಗೆ ಒಳಪಡುವ ಗ್ರಾಮಗಳ ರೈತರ ನಡುವೆ ಮುಕ್ತವಾಗಿ ಚರ್ಚೆಯಾಗಲಿ ಎಂಬ ಪ್ರಜ್ಞೆ ಇಟ್ಟುಕೊಂಡು ಕುಮಾರಸ್ವಾಮಿ ಮಾತನಾಡಿದ್ದಾರೆ. ನೀವು ಈ ಕ್ಷೇತ್ರದ ಶಾಸಕ. ಸೌಜನ್ಯಕ್ಕಾದರೂ ಯೋಜನೆ ಬಗ್ಗೆ ರೈತರ ಸಭೆ ಕರೆದು ಚರ್ಚೆ ಮಾಡಿಲ್ಲ ಎಂದು ಬಾಲಕೃಷ್ಣಗೆ ಟಾಂಗ್ ನೀಡಿದರು.
ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಕುಳಿತು ಮಾತನಾಡುವುದಲ್ಲ ಬಾಲಕೃಷ್ಣ ಅವರೇ...., ನಿಮ್ಮದೇ ಸರ್ಕಾರ ತನಿಖೆ ನಡೆಸಿ ಬೇನಾಮಿ ಆಸ್ತಿ ಇರುವುದನ್ನು ಪತ್ತೆ ಮಾಡಿ, ಅದನ್ನು ಬಿಟ್ಟು ಬರಿ ಮಾಧ್ಯಮಗಳ ಮುಂದೆ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಪೋಸ್ಟರ್ ವಿರುದ್ಧ ಕಾನೂನು ಹೋರಾಟ: ಇತ್ತೀಚೆಗೆ ಕಾಂಗ್ರೆಸ್ ನಾಯಕರು ಪೋಸ್ಟರ್ ಅಂಟಿಸುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಈ ಹಿಂದೆ ನಮ್ಮ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರ ಬಗ್ಗೆ ಪೋಸ್ಟರ್ ಅಂಟಿಸಿದ್ದರು. ಇದೀಗ ಮತ್ತೆ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಿದ್ದಾರೆ. ಕೈ ನಾಯಕರು ರಾತ್ರಿ ವೇಳೆ ಅಂಟಿಸಿಸುತ್ತಿದ್ದಾರೆ. ಇದು ಇಲ್ಲಿಗೆ ನಿಲ್ಲದಿದ್ದರೆ ನಾವು ಅವರ ಅಕ್ರಮಗಳ ಬಗ್ಗೆ ಹಗಲಿನಲ್ಲೆ ಪೋಸ್ಟರ್ ಅಭಿಯಾನ ಪ್ರಾರಂಭಿಸಬೇಕಾಗುತ್ತದೆ ಎಂದು ಮಾಜಿ ಶಾಸಕರು ಎಚ್ಚರಿಸಿದರು.
ಕಾನೂನು ಹೋರಾಟಕ್ಕೆ ದಾಖಲೆ ಕೊಡುತ್ತಿಲ್ಲ: ಯೋಜನೆ ವಿರುದ್ಧ ಕಾನೂನಿನಲ್ಲಿ ಹೋರಾಟ ಮಾಡುವ ಬಗ್ಗೆ ದಾಖಲೆ ಸಂಗ್ರಹಿಸಲಾಗುತ್ತಿದೆ. ಮುಖ್ಯವಾಗಿ 12 ದಾಖಲೆಗಳು ಬೇಕಿವೆ. ಜಿಲ್ಲಾಧಿಕಾರಿ ಕಚೇರಿ, ಜಿಬಿಡಿಎ ಕಚೇರಿ, ಯೋಜನಾ ಪ್ರಾಧಿಕಾರದ ಕಚೇರಿಗಳಲ್ಲೂ ನಾವು ಕೇಳುತ್ತಿರುವ ದಾಖಲೆಗಳು ಇಲ್ಲ. ಎಲ್ಲ ದಾಖಲೆಗಳನ್ನು ಬೆಂಗಳೂರಿಗೆ ಸಾಗಾಟ ಮಾಡಿದ್ದಾರೆ. ನಾವು ಸುಮ್ಮನೆ ಕೂರಲ್ಲ. ದಾಖಲೆ ತೆಗೆದು ಕಾನೂನು ಹೋರಾಟ ಮಾಡುತ್ತೇವೆ ಎಂದು ಮಂಜುನಾಥ್ ಎಚ್ಚರಿಸಿದರು.
ಬಹಿರಂಗ ಸಭೆಗೆ ಕುಮಾರಸ್ವಾಮಿ ಅವರು ಬರುತ್ತಾರೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬರುತ್ತಾರೆ, ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಬಂದು ಮೂರೂ ಜನ ವೇದಿಕೆ ಮೇಲೆ ಕುಳಿತುಕೊಳ್ಳಲಿ. ಈ ಯೋಜನೆಗೆ ಒಳಪಡುವ ರೈತರ ಆಧಾರ್ ಕಾರ್ಡ್ ಪರಿಶೀಲಿಸಿ ಸಭೆಗೆ ಬಿಡಲಿ. ಪರ ಇರುವವರು ಒಂದು ಕಡೆ, ವಿರೋಧ ಇರುವ ರೈತರು ಮತ್ತೊಂದು ಕಡೆ ಕುಳಿತುಕೊಳ್ಳಲಿ. ಯಾವ ಪರ ಹೆಚ್ಚು ರೈತರಿದ್ದಾರೆ ಎಂದು ನೋಡಲಿ.
- ಎ.ಮಂಜುನಾಥ್, ಮಾಜಿ ಶಾಸಕ