- 2028ಕ್ಕೆ ಚನ್ನಪಟ್ಟಣದಿಂದಲೇ ಕುಮಾರಸ್ವಾಮಿ ಸ್ಪರ್ಧೆ
- ಬಿಸಿಲ ಜಳದ ಮಧ್ಯೆ ಕಾವೇರಿದ ಚರ್ಚೆ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರೇ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂಬ ವಿಚಾರ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ಮೂಡಿಸಿದೆ.
2028ರ ರಾಜ್ಯ ವಿಧಾನಸಭಾ ಚುನಾವಣೆಗೆ ಸಾಕಷ್ಟು ಸಮಯವಿದೆ. ಆದರೂ, ಈಗಲೇ ಮೈತ್ರಿ ಅಭ್ಯರ್ಥಿ ವಿಚಾರ ಮುನ್ನೆಲೆಗೆ ಬರುತ್ತಿದೆ. ಈಗಾಗಲೇ ಈ ಬಗ್ಗೆ ಸ್ಥಳೀಯ ಮುಖಂಡರು ಸಭೆ ಹಾಗೂ ಸಮಾರಂಭಗಳಲ್ಲಿ ಒತ್ತಿ ಒತ್ತಿ ಹೇಳುತ್ತಿದ್ದಾರೆ. ಇದರ ಹಿಂದೆ ಪಕ್ಷ ಸಂಘಟನೆಯ ವಿಚಾರವಿದೆಯೋ? ಅಥವಾ ಕುಮಾರಸ್ವಾಮಿ ಮತ್ತೆ ಈ ಕ್ಷೇತ್ರದಿಂದಲೇ ರಾಜ್ಯ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದ್ದಾರೆಯೋ? ಎಂಬುದೇ ಯಕ್ಷ ಪ್ರಶ್ನೆ.
2018 ಹಾಗೂ 2023ರ ಚುನಾವಣೆಯಲ್ಲಿ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಶಾಸಕರಾಗಿ ಸಿಎಂ ಸ್ಥಾನವನ್ನೂ ಅಲಂಕರಿಸಿದ್ದರು. ಈ ಮಧ್ಯೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗುವ ಜತೆಗೆ ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗ, ಅವರು ಮತ್ತೆ ರಾಜ್ಯ ರಾಜಕಾರಣಕ್ಕೆ ಮರುಳುತ್ತಾರೆ ಎಂಬ ಸುದ್ದಿ ಜೋರಾಗಿದೆ.
ಪದೇಪದೆ ಮುನ್ನೆಲೆಗೆ!
ಕಳೆದ ತಿಂಗಳು ಪಕ್ಷದ ನೂತನ ಜಿಲ್ಲಾಧ್ಯಕ್ಷ ಎಚ್.ಸಿ.ಜಯಮತ್ತು ಈ ವಿಚಾರವನ್ನು ಮುನ್ನೆಲೆಗೆ ತಂದಿದ್ದರು. ಇತ್ತೀಚೆಗೆ ಪಕ್ಷದ ನೂತನ ತಾಲೂಕು ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು ಸಹ ಮುಂಬರುವ ಚುನಾವಣೆಯಲ್ಲಿ ಕುಮಾರಣ್ಣನೇ ನಮ್ಮ ಅಭ್ಯರ್ಥಿ. ಅದಕ್ಕಾಗಿಯೇ ಪಕ್ಷ ವನ್ನು ಸಜ್ಜುಗೊಳಿಸುತ್ತಿದ್ದೇವೆ ಎಂದಿದ್ದರು. ಮುಂದುವರಿದು ಬುಧವಾರ ಜರುಗಿದ ಪಕ್ಷದ ಪದಾಧಿಕಾರಿಗಳ ಪದಗ್ರಹಣದಲ್ಲೂ ಈ ಬಗ್ಗೆಯೇ ಮಾತುಗಳು ಹೆಚ್ಚಾಗಿ ಕೇಳಿಬಂದವು. ಇದು ಪಕ್ಷದ ಕಾರ್ಯಕರ್ತರಿಗೆ ಹುರಿದುಂಬಿಸುವ ಕಾರ್ಯವೇ ಅಥವಾ ನಿಜವಾಗಿಯೂ ಇಂತಹದೊAದು ಆಲೋಚನೆ ಪಕ್ಷದ ವಲಯದಲ್ಲಿದೆಯೇ ಎಂಬ ಕುತೂಹಲ ಮೂಡಿಸಿದೆ.
ನಿಖಿಲ್ ಸುಳಿವು!
ಈ ವಿಚಾರವಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹ ಸುಳಿವು ನೀಡಿರುವುದು ಚರ್ಚೆಗೆ ಇಂಬು ನೀಡಿದೆ. ಪಕ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್, ಕ್ಷೇತ್ರಕ್ಕೆ ಕುಮಾರಣ್ಣ ಬರಬೇಕು ಎಂದು ಆಸೆ ವ್ಯಕ್ತಪಡಿಸಿದ್ದೀರಿ. ಅವರು ಇಲ್ಲಿಂದ ಶಾಸಕರಾಗಿ, ಸಿಎಂ ಆಗಿದ್ದರು. ಈಗ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಮುಂದೆಯೂ ಎಲ್ಲರ ಬೆಂಬಲ ಇರಲಿ ಎಂದು ಕಾರ್ಯಕರ್ತರಿಗೆ ಕರೆ ನೀಡುವ ಮೂಲಕ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಸುಳಿವು ನೀಡಿದರು.
ಸಿಪಿವೈ ಮತ್ತೆ ಬಿಜೆಪಿಗೆ?
ವಿಧಾನಸಭಾ ಚುನಾವಣೆಗೆ ಸಾಕಷ್ಟು ಸಮಯ ಇರುವಾಗಲೇ ಕ್ಷೇತ್ರದ ಅಭ್ಯರ್ಥಿ ವಿಚಾರ ಚರ್ಚೆಗೆ ಬರುತ್ತಿರುವುದು ಇದೇ ಮೊದಲು. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲï ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್‌ನ ಸಿ.ಪಿ.ಯೋಗೇಶ್ವರ್ ಗೆಲುವು ಸಾಧಿಸಿದರು. ಆದರೆ, ಸಿಪಿವೈ ಮತ್ತೊಮ್ಮೆ ಬಿಜೆಪಿ ಕಡೆ ವಾಲುತ್ತಾರೆ ಎಂಬ ಚರ್ಚೆಗಳು ಜೋರಿವೆ. ಇದರೊಂದಿಗೆ ಕುಮಾರಸ್ವಾಮಿ ಅಭ್ಯರ್ಥಿ ಎಂಬ ವಿಚಾರ ಬಿಸಿಲ ಝಳದ ನಡುವೆ ರಾಜಕೀಯ ಚರ್ಚೆಯೂ ಕಾವೇರುವಂತೆ ಮಾಡಿದೆ.
ಚನ್ನಪಟ್ಟಣಕ್ಕೆ ಒಂದೊಂದು ವರ್ಷಕ್ಕೂ ಚುನಾವಣೆ ಜ್ವರ ಕ್ರಿಯೆಟ್ ಮಾಡುವುದು ಬೇಡ. ಕುಮಾರಸ್ವಾಮಿ ಎರಡು ಬಾರಿ ಇಲ್ಲಿಂದ ಸ್ಪರ್ಧೆ ಮಾಡಿ, ಶಾಸಕರಾಗಿದ್ದಾರೆ. ಅವಕಾಶ ಬಂದರೆ, ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು. ನೋಡೋಣ, ಇನ್ನೂ ಸಮಯ ಇದೆ.
ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವೇಳೆಯೇ ನಮಗೆ ಕುಮಾರಣ್ಣ ಅವರು ಮಾತು ಕೊಟ್ಟಿದ್ದರು. ಅವರು ರಾಜ್ಯ ರಾಜಕಾರಣಕ್ಕೆ ಮರಳುವುದು ಹಾಗೂ ನಮ್ಮ ಕ್ಷೇತ್ರದಿಂದಲೇ ಸ್ಪರ್ಧಿಸುವುದು ಸೂರ್ಯಚಂದ್ರನಷ್ಟೇ ಸತ್ಯ. ಈ ನಿಟ್ಟಿನಲ್ಲಿ ಇಂದಿನಿAದಲೇ ಪಕ್ಷದ ಸಂಘಟನೆಗೆ ಒತ್ತು ನೀಡಿದ್ದೇವೆ. ಅವರು ಕ್ಷೇತ್ರದ ಶಾಸಕರಾಗಿ ಮತ್ತೊಮ್ಮೆ ಸಿಎಂ ಆಗುವುದು ಖಚಿತ.