ಹಾರೋಹಳ್ಳಿ ತಾಲೂಕು ಸೌಧ 
ಬೆಂಗಳೂರು ದಕ್ಷಿಣ

ಹಾರೋಹಳ್ಳಿ ತಾಲೂಕಾಯ್ತು, ಆದ್ರೆ ಸೌಕರ್ಯ?

ಪ್ರಮುಖ ಮುಖ್ಯಾಂಶಗಳು

  • ವಿವಿಧ ಇಲಾಖೆಗಳಿಲ್ಲದೆ ನಾಗರಿಕರ ಪರದಾಟ
  • ಕುಲಾವಿ ಸಿದ್ಧಪಡಿಸದೆ ಕೂಸಿಗೆ ಜನ್ಮ ನೀಡಿದ ಸರ್ಕಾರ
  • ಎಲ್ಲದಕ್ಕೂ ಕನಕಪುರದ ಮೇಲೆ ಅವಲಂಬನೆ
ರಾಮನಗರ
ಹಾರೋಹಳ್ಳಿಯನ್ನು ಸರ್ಕಾರ ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿ ಏನೋ ಆಗಿದೆ. ಆದರೆ, ಅಗತ್ಯವಾಗಿ ಕೊಡಬೇಕಾದ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿದೆ. ಇದರ ಪರಿಣಾಮವನ್ನು ತಾಲೂಕಿನ ಜನ ಅನುಭವಿಸುತ್ತಿದ್ದಾರೆ.
2023ರ ಫೆ.21ರಂದು ಅಧಿಕೃತವಾಗಿ ಹಾರೋಹಳ್ಳಿ ತಾಲೂಕು ಕೇಂದ್ರವಾಗಿ ಆರಂಭಗೊಂಡಾಗ ತಹಸೀಲ್ದಾರ್ ಕಚೇರಿ ಕಾರ್ಯಾರಂಭ ಮಾಡಿದ್ದು ಬಿಟ್ಟರೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಪ್ರಮುಖ ಇಲಾಖೆಗಳು ಮತ್ತು ಸಿಬ್ಬಂದಿ ಇಲ್ಲದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

ಯಾವುದೂ ಬಂದಿಲ್ಲ

ಹಾರೋಹಳ್ಳಿ ತಾಲೂಕು ಕೇಂದ್ರವಾದ ನಂತರ ತಹಸೀಲ್ದಾರ್ ಕಚೇರಿ ಕಾರ್ಯಾರಂಭ ಮಾಡಿತು. ನಂತರ ಪಟ್ಟಣ ಪಂಚಾಯಿತಿ ಕಚೇರಿಯನ್ನು ಇದೇ ಕಟ್ಟಡದಲ್ಲಿ ತೆರೆಯಲಾಯಿತು. ನಂತರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತಾಲೂಕು ಪಂಚಾಯಿತಿ ಇಒ ಕಚೇರಿಯನ್ನು ಆರಂಭಿಸಲಾಗಿದೆ. ಇದರ ಹೊರತಾಗಿ ಇಲ್ಲಿ ಯಾವುದೇ ಇಲಾಖೆಗಳು ಕಾರ್ಯನಿರ್ವಹಿಸುತ್ತಿಲ್ಲ. ಈಗಲೂ ಕನಕಪುರ ತಾಲೂಕು ಅಧಿಕಾರಿಗಳೇ ಹಾರೋಹಳ್ಳಿ ತಾಲೂಕಿನ ಸಂಪೂರ್ಣ ಕಾರ್ಯವನ್ನು ನಿಭಾಯಿಸುತ್ತಿದ್ದಾರೆ. ಪ್ರಮುಖವಾಗಿ ಕೃಷಿ, ತೋಟಗಾರಿಕೆ, ಸರ್ವೇ, ಪಶು ಸಂಗೋಪನೆ, ಉಪ ನೋಂದಣಾಧಿಕಾರಿಯಂತಹ ಪ್ರಮುಖ ಇಲಾಖೆಗಳ ತಾಲೂಕು ಕಚೇರಿಗಳು ಮೂರು ವರ್ಷಗಳಾದರೂ ಆರಂಭವಾಗಿಲ್ಲ. ಇದು ಹಾರೋಹಳ್ಳಿಯನ್ನು ಏಕೆ ತಾಲೂಕು ಕೇಂದ್ರವಾಗಿಸಬೇಕಿತ್ತು? ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವಂತೆ ಮಾಡಿದೆ.

ಅತಂತ್ರ! ಅಲ್ಲೇ ಚೆನ್ನಾಗಿದ್ದೋ?

ಹೊಸ ತಾಲೂಕು ಘೋಷಣೆ ಆಯ್ತಲ್ಲ ಎನ್ನುವ ಸಂಭ್ರಮದಲ್ಲಿದ್ದ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಯ ಜನರಲ್ಲಿ ಈಗ ಆ ಸಂಭ್ರಮ ಉಳಿದಿಲ್ಲ. ಕನಕಪುರದಲ್ಲಿ ಇದ್ದಾಗಲೇ ಎಷ್ಟೋ ಚೆನ್ನಾಗಿದ್ದೋ ಎನ್ನುವ ಮಾತು ಆಡುತ್ತಿದ್ದಾರೆ. ತಹಸೀಲ್ದಾರ್ ಕಚೇರಿ ಹೊರತುಪಡಿಸಿ ಕಂದಾಯ ಇಲಾಖೆ ಸೇರಿದಂತೆ ಉಳಿದೆಲ್ಲ ಕೆಲಸಗಳಿಗೆ ಕನಕಪುರವನ್ನೇ ಆಶ್ರಯಿಸಬೇಕಾದ ಪರಿಸ್ಥಿತಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಇದರಿಂದಾಗಿ ಅತಂತ್ರ ಸ್ಥಿತಿಗೆ ಇಲ್ಲಿನ ಜನ ಹೈರಾಣಾಗಿದ್ದಾರೆ. ಅಲ್ಲದೆ, ಇರುವ ತಹಸೀಲ್ದಾರ್ ಕಚೇರಿ ಸಿಬ್ಬಂದಿಗೆ ಕಾರ್ಯವೈಖರಿ ಬಗ್ಗೆ ಅಷ್ಟು ಒಲವಿಲ್ಲ. ತಾಪಂ ಇಒ ಕಚೇರಿ ಕಗ್ಗಲಹಳ್ಳಿ ಪಂಚಾಯಿತಿಯಲ್ಲಿ ಇರುವುದರಿಂದ ಅಲ್ಲಿಗೆ ಹೋಗುವುದು ದೂರದೂರಿನವರಿಗೆ ಕನಕಪುರವೇ ವಾಸಿ ಎನ್ನುವಂತಾಗಿದೆ.

ಕಟ್ಟಡಕ್ಕೆ ವಿರೋಧ ?

ಕುಲಾವಿ ಸಿದ್ಧಪಡಿಸಿಕೊಂಡೇ ಕೂಸಿಗೆ ಜನ್ಮ ನೀಡಬೇಕಿದ್ದ ಸರ್ಕಾರ, ಹಾರೋಹಳ್ಳಿ ಎನ್ನುವ ಹೊಸ ತಾಲೂಕು ಘೋಷಣೆ ಮಾಡಿದ್ದರೂ ಇಲ್ಲಿ ಅಗತ್ಯ ಸೌಲಭ್ಯ ಕೊಡುವಲ್ಲಿ ವಿಫಲವಾಗಿದೆ. ಬೇಕಾದ ಕಚೇರಿಗಳ ನಿರ್ಮಾಣ ಮಾಡಿಲ್ಲ ಎನ್ನುವ ಕಾರಣಕ್ಕೆ ಸ್ಥಳೀಯವಾಗಿ ಹೋರಾಟಗಳು ನಡೆದ ಪರಿಣಾಮ ಹಾರೋಹಳ್ಳಿಯಿಂದ ಸುಮಾರು 4 ಕಿಮೀ ದೂರದಲ್ಲಿರುವ ಕರಿಕಲ್ಲಿದೊಡ್ಡಿ ಗ್ರಾಮದ ಬಳಿ 4.25 ಎಕರೆ ಜಾಗವನ್ನು ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಿ, ಕಟ್ಟಡ ನಿರ್ಮಾಣಕ್ಕೆ ಹಸ್ತಾಂತರ ಮಾಡಿದೆ. ಈಗಾಗಲೇ ಕಟ್ಟಡ ನಿರ್ಮಾಣಕ್ಕೆ 8.60 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿದ್ದು, ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ. ಆದರೆ, ಇದು ಯಾವ ಪುರುಷಾರ್ಥಕ್ಕೆ ಎನ್ನುವ ಪ್ರಶ್ನೆ ಸಾರ್ವಜನಿಕರದು. ತಾಲೂಕು ಕೇಂದ್ರ ಹಾರೋಹಳ್ಳಿಗೆ ಹೊಂದಿಕೊಂಡAತೇ ಸಾಕಷ್ಟು ಸರ್ಕಾರಿ ಜಾಗವಿದ್ದರೂ ಪಟ್ಟಣ ಕೇಂದ್ರದಿಂದ 4 ಕಿಮೀ ದೂರದಲ್ಲಿ ಏಕೆ ತಾಲೂಕು ಆಡಳಿತ ಕಚೇರಿ ನಿರ್ಮಾಣ ಮಾಡಬೇಕಿತ್ತು ? ಎನ್ನುವ ಪ್ರಶ್ನೆಯನ್ನು ಎತ್ತಿದ್ದಾರೆ. ಇದರಿಂದ ರಾಮನಗರ ಗಡಿಗೆ ಹೊಂದಿಕೊಂಡಿರುವ ತಾಲೂಕಿನ ಜನತೆಗೆ ಅನನುಕೂಲವಾಗಲಿದೆ ಎನ್ನುವುದು ಇವರ ವಾದವಾಗಿದೆ.

ಇನ್ನೆಷ್ಟು ದಿನ ಬೇಕು?

ರಾಜ್ಯದಲ್ಲಿ ಮತ್ತಷ್ಟು ಹೊಸ ತಾಲೂಕುಗಳ ರಚನೆಗೆ ಸಾಕಷ್ಟು ಬೇಡಿಕೆಗಳಿವೆ. ಆದರೆ ಈಗಾಗಲೇ ಘೋಷಣೆ ಮಾಡಿರುವ ತಾಲೂಕುಗಳ ಸಮಗ್ರ ಅಭಿವೃದ್ಧಿ ಹೊರತಾಗಿ, ಹೊಸ ತಾಲೂಕುಗಳ ರಚನೆ ಮಾಡುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಿಧಾನಮಂಡಲದ ಕಲಾಪದಲ್ಲಿಯೇ ಹೇಳಿದ್ದಾರೆ.
ಆದರೆ, ಈಗಾಗಲೇ ರಚನೆ ಆಗಿರುವ ತಾಲೂಕುಗಳ ಅಭಿವೃದ್ಧಿಗೆ ಇನ್ನೆಷ್ಟು ದಿನ ಕಾಯಬೇಕು ಎನ್ನುವ ಪ್ರಶ್ನೆಗೆ ಮಾತ್ರ ಸರ್ಕಾರದ ಬಳಿ ಸ್ಪಷ್ಟ ಉತ್ತರವಿಲ್ಲ. ಯಾವುದೇ ಮೂಲಸೌಕರ್ಯವಿಲ್ಲದೆ, ಹೊಸ ತಾಲೂಕು ಸಾರ್ವಜನಿಕರ ಸೇವೆಗೆ ಸಂಪೂರ್ಣ ತೆರೆದುಕೊಳ್ಳುವುದು ಯಾವಾಗ ಎನ್ನುವ ಪ್ರಶ್ನೆಯೂ ಉದ್ಭವಿಸಿದೆ.
=====
ಹಾರೋಹಳ್ಳಿಯನ್ನು ತಾಲೂಕು ಕೇಂದ್ರ ಮಾಡುವುದಕ್ಕಿಂತ ಸುಮ್ಮನೆ ಇದ್ದಿದ್ದರೆ ಚೆನ್ನಾಗಿತ್ತು. ತಾಲೂಕು ಕೇಂದ್ರವಾಗುವ ಎಲ್ಲ ಅರ್ಹತೆಗಳು ಹಾರೋಹಳ್ಳಿಗೆ ಇದ್ದರೂ ಸರ್ಕಾರದ ನಿರ್ಲಕ್ಷ್ಯ ಮನೋಭಾವದಿಂದಾಗಿ ಹೊಸ ತಾಲೂಕಿನ ಜನ ಸಂಕಷ್ಟಕ್ಕೆ ಸಿಲುಕಿದ್ದು, ಈಗಲೂ ಕನಕಪುರವನ್ನೇ ಆಶ್ರಯಿಸಬೇಕಾದ ಅನಿವಾರ್ಯವಿದೆ. ಇರುವ ತಾಲೂಕಿನ ತಹಸೀಲ್ದಾರ್ ಕಚೇರಿ ಬಡವ ಮತ್ತು ರೈತರ ಪರವಾಗಿಯಂತೂ ಕೆಲಸ ಮಾಡುತ್ತಿಲ್ಲ. ಉಳಿದಂತೆ ಯಾವ ಕಚೇರಿಗಳೂ ಹಾರೋಹಳ್ಳಿಗೆ ಇಂದಿಗೂ ಬಂದಿಲ್ಲ.
| ಚೀಲೂರು ಮುನಿರಾಜು,
ರೈತ ಸಂಘದ ಮುಖಂಡರು