ರೆಸಾರ್ಟ್ ಗಳಲ್ಲಿ ಸೌಧೆ ಒಲೆಯಲ್ಲಿ ಅಡುಗೆ ಮಾಡುತ್ತಿರುವುದು.  
ಬೆಂಗಳೂರು ದಕ್ಷಿಣ

ರೆಸಾರ್ಟ್ ಗಳಿಗೆ ಕೊಲ್ಲಿ ಕದನದ ಬಿಸಿ

ಪ್ರಮುಖ ಮುಖ್ಯಾಂಶಗಳು

  • ಸಿಲಿಂಡರ್ ಪೂರೈಕೆ ಇಲ್ಲದೆ ಹೋಟೆಲ್, ಹೋಂ ಸ್ಟೇ ಆದಾಯಕ್ಕೆ ಕೊಕ್ಕೆ
  • ಕಾಳ ಸಂತೆಯಲ್ಲಿ ಮಾರಾಟದ ಆರೋಪ
*
ರಾಮನಗರ
ಕೊಲ್ಲಿ ಸಂಘರ್ಷ ವಿಶ್ವದಾದ್ಯಂತ ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ. ಅದರಲ್ಲೂ ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಯ ಹೋಟೆಲ್ ಉದ್ಯಮದ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಅಗತ್ಯಕ್ಕೆ ತಕ್ಕಂತೆ ವಾಣಿಜ್ಯ ಸಿಲಿಂಡರ್ ಸರಬರಾಜು ಆಗದಿರುವುದು ಜಿಲ್ಲೆಯ ಹೋಂ ಸ್ಟೇ ಮತ್ತು ರೆಸಾರ್ಟ್ಗಳ ದೈನಂದಿನ ಚಟುವಟಿಕೆಗೆ ಪೆಟ್ಟು ನೀಡಿದೆ.
ಈಗ ರಜಾ ಅವಧಿ ಮತ್ತು ಬೇಸಿಗೆ ಕಾರಣ ಸಾಮಾನ್ಯವಾಗಿ ಹೋಂ ಸ್ಟೇ ಮತ್ತು ರೆಸಾರ್ಟ್ಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತಿತ್ತು. ಆದರೆ, ಕೊಲ್ಲಿ ಯುದ್ಧದ ಕಾರಣದಿಂದಾಗಿ ರೆಸಾರ್ಟ್ಗಳಿಗೆ ಬರುವ ಪ್ರವಾಸಿಗರು ಸಾಕಷ್ಟು ಗೊಂದಲ ಮತ್ತು ಪ್ರಶ್ನೆಗಳನ್ನು ಇಟ್ಟುಕೊಂಡೇ ಬುಕ್ಕಿಂಗ್ ಮಾಡುತ್ತಿರುವುದು ಈ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತಿದೆ.

ಪೂರೈಕೆ ಸರಿಯಿಲ್ಲ

ಎಲ್ಲೆಡೆಯಂತೆ ಜಿಲ್ಲೆಯಲ್ಲಿಯೂ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ನಿಗದಿತ ಅವಧಿಯಲ್ಲಿ ವಾಣಿಜ್ಯ ಸಿಲಿಂಡರ್‌ಗಳು ಗ್ರಾಹಕರಿಗೆ ತಲುಪುತ್ತಿಲ್ಲ. ಯುದ್ಧಾರಂಭಕ್ಕೂ ಮುನ್ನ ಪೂರೈಕೆ ಮಾಡುತ್ತಿದ್ದ ಸಿಲಿಂಡರ್‌ಗಳಲ್ಲಿ ಶೇ.50ನ್ನು ಗ್ಯಾಸ್ ಏಜನ್ಸಿಗಳು ಪೂರೈಕೆ ಮಾಡುತ್ತಿಲ್ಲ ಎಂದು ರೆಸಾರ್ಟ್ಗಳ ಮಾಲೀಕರು ಆರೋಪಿಸುತ್ತಿದ್ದಾರೆ. ಇನ್ನು ಕೆಲ ಕಡೆಗಳಲ್ಲಿ ಕಾಳ ಸಂತೆಯಲ್ಲಿ ವಾಣಿಜ್ಯ ಸಿಲಿಂಡರ್‌ಗಳು ಹೆಚ್ಚಿನ ಬೆಲೆಗೆ ಸರಾಗವಾಗಿ ಸಿಗುತ್ತಿವೆ ಎನ್ನುವ ದೂರುಗಳೂ ಇದ್ದು, ಇದರ ಬಗ್ಗೆ ಆಹಾರ ಇಲಾಖೆ ಗಮನ ಹರಿಸಬೇಕಿದೆ.


ಸೌದೆಯೇ ಶಕ್ತಿ

ಸಿಲಿಂಡರ್ ಕೊರತೆ ಕಾರಣದಿಂದಾಗಿ ಈಗ ಸೌದೆ ಒಲೆಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ರೆಸಾರ್ಟ್ಗಳಲ್ಲಿಯೂ ನಿರ್ಮಾಣವಾಗಿದೆ. ಬಹುತೇಕ ಹೆಚ್ಚಿನ ಪ್ರಮಾಣದ ಅಡುಗೆಯನ್ನು ಸೌದೆ ಒಲೆಯಲ್ಲಿಯೇ ಮಾಡಲಾಗುತ್ತಿದೆ. ಆದರೆ, ರೆಸಾರ್ಟ್ಗಳಿಗೆ ಬರುವ ಪ್ರವಾಸಿಗರಿಗೆಲ್ಲರಿಗೂ ಬೇಕಾದ ಖಾದ್ಯ ತಯಾರಿಸುವುದು, ಗ್ಯಾಸ್ ಸ್ಟೌಗಳಿಗೆ ಹೊಂದಾಣಿಕೆ ಆದ ಶೆï‌ಗಳಿಗೆ ಕಷ್ಟವಾಗುತ್ತಿದೆ. ಕೆಲವು ರೆಸಾರ್ಟ್ಗಳಲ್ಲಿ ಸೌದೆ ಒಲೆಯಲ್ಲಿಯೇ ಹೆಚ್ಚು ಆಹಾರ ತಯಾರಿಕೆಗೆ ಒಲವು ತೋರುತ್ತಿದ್ದಾರೆ. ಆದರೆ ಇದು ನಿರೀಕ್ಷೆ ಹಂತವನ್ನು ಮುಟ್ಟುತ್ತಿಲ್ಲ ಎನ್ನುವುದು ರೆಸಾರ್ಟ್ನವರ ಅಭಿಪ್ರಾಯ.

ಬುಕ್ಕಿಂಗ್‌ಗೆ ನೂರು ಪ್ರಶ್ನೆ

ಗ್ಯಾಸ್ ಸಮಸ್ಯೆಯಿಂದಾಗಿ ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರು ಹಲವಾರು ಪ್ರಶ್ನೆಗಳನ್ನು ರೆಸಾರ್ಟ್ ಮಾಲೀಕರ ಬಳಿ ಕೇಳುತ್ತಿರುವುದು ಹೆಚ್ಚಿದೆ. ಇದರಲ್ಲಿ ಪ್ರಮುಖವಾಗಿ ಊಟದ ಸಮಸ್ಯೆ ಬಗ್ಗೆ. ಊಟದಲ್ಲಿ ಏನಾದರೂ ಕಡಿತ ಮಾಡುತ್ತಿದ್ದೀರಾ?, ಬಗೆ ಬಗೆ ಖಾದ್ಯಗಳನ್ನು ಕಡಿಮೆಗೊಳಿಸಲಾಗಿದೆಯೇ? ಬಂದವರಿಗೆ ಎಲ್ಲರಿಗೂ ಊಟ, ತಿಂಡಿ ದೊರೆಯುವುದೇ ಎನ್ನುವ ಪ್ರಶ್ನೆ ಮುಂದಿಡುತ್ತಿದ್ದಾರೆ. ರೆಸಾರ್ಟ್ ಮಾಲೀಕರು ನೀಡುವ ಉತ್ತರದಿಂದ ತೃಪ್ತರಾದ ನಂತರವಷ್ಟೇ ಬುಕ್ಕಿಂಗ್ ಮಾಡುತ್ತಿದ್ದಾರೆ. ಇದರ ಜತೆಗೆ ಗ್ಯಾಸ್ ಸಮಸ್ಯೆಯಿಂದಾಗಿ ಡೇ ಔಟ್ ಪ್ಯಾಕೇಜ್ ಬುಕ್ಕಿಂಗ್ ಸಹ ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲೆ ಕಡಿಮೆ ಮಾಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ರೆಸಾರ್ಟ್ ಸಿಬ್ಬಂದಿ.
ಬಾಕ್ಸ್
ಕನಕಪುರದಲ್ಲೇ ಹೆಚ್ಚು
ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ಹೆಚ್ಚು ಸಮಸ್ಯೆ ಉಂಟಾಗಿರುವುದು ಜಿಲ್ಲೆಯ ಕನಕಪುರ ತಾಲೂಕಿನಲ್ಲಿ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ನಮಗೆ ಪೂರೈಕೆ ಆಗುತ್ತಿಲ್ಲ ಎನ್ನುವ ಸಿದ್ಧ ಉತ್ತರ ಹೇಳುತ್ತಿದ್ದಾರೆ ಎನ್ನುವುದು ರೆಸಾರ್ಟ್ಗಳ ಮಾಲೀಕರ ಆರೋಪ. ಪಕ್ಕದ ಹಾರೋಹಳ್ಳಿ, ರಾಮನಗರದಲ್ಲಿ ಅಷ್ಟಿಷ್ಟು ಸಿಲಿಂಡರ್‌ಗಳು ಪೂರೈಕೆ ಮಾಡಲಾಗುತ್ತಿದೆಯಾದರೂ ಕನಕಪುರ ವಿಚಾರದಲ್ಲಿ ಈ ತಾರತಮ್ಯ ಏಕೆ ಎನ್ನುವುದು ಹೋಂ ಸ್ಟೇ ಮಾಲೀಕರ ಪ್ರಶ್ನೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಹಿಂದಿನ ಬಳಕೆಯನ್ನು ಗಮನಿಸಿ, ಅದರಲ್ಲಿ ಕನಿಷ್ಠ ಶೇ.50 ವಾಣಿಜ್ಯ ಸಿಲಿಂಡರ್ ಪೂರೈಕೆ ಮಾಡಬೇಕು ಎನ್ನುವ ಬೇಡಿಕೆ ಇವರದು.

ಕನಕಪುರದಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್ಗಳಿಗೆ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ದೊಡ್ಡ ಸಮಸ್ಯೆಯೇ ಉಂಟಾಗಿದೆ. ನಮ್ಮ ಬೇಡಿಕೆ ತಕ್ಕಂತೆ ಸಿಲಿಂಡರ್ ಪೂರೈಕೆ ಸಾಧ್ಯವಿಲ್ಲ ಎನ್ನುವುದು ನಮಗೆ ಗೊತ್ತಿದೆ. ಆದರೆ ಬೇಡಿಕೆಯ ಅರ್ಧದಷ್ಟನ್ನಾದರೂ ಪೂರೈಕೆ ಮಾಡದಿರುವುದು ಸಾಕಷ್ಟು ಸಮಸ್ಯೆಯನ್ನು ಉಂಟು ಮಾಡಿದೆ.
| ಅರುಣೇಶ್, ಕಾರ್ಯದರ್ಶಿ
ಜಿಲ್ಲಾ ಹೋಂ ಸ್ಟೇ ಮತ್ತು ರೆಸಾರ್ಟ್ಗಳ ಮಾಲೀಕರ ಸಂಘ

====

ಯುದ್ಧದ ಸಂದರ್ಭದಲ್ಲಿ ಸಿಲಿಂಡರ್ ಪೂರೈಕೆ ಸಮಸ್ಯೆ ಆಗಿದೆ. ಅನಿವಾರ್ಯವಾಗಿ ಸೌದೆ ಒಲೆಯನ್ನು ಅವಲಂಬಿಸಬೇಕಿದೆ. ಬುಕ್ಕಿಂಗ್ ಮೇಲೂ ಕೊಂಚ ಪರಿಣಾಮ ಬೀರಿದೆ.
| ಶಿವಲಿಂಗಯ್ಯ
ರೆಸಾರ್ಟ್ ಮಾಲೀಕರು, ರಾಮನಗರ