ಬಾನಂದೂರು ಗ್ರಾಮದಲ್ಲಿ ನಂಜುಂಡಿ ಬೆಳೆದಿರುವ ರಾಗಿ ಬೆಳೆ 
ಬೆಂಗಳೂರು ದಕ್ಷಿಣ

ಚಿನ್ನದ ಯುವಕನ ಕೃಷಿ ಕಮಾಯಿ

ಬಿಡದಿ: ಜಾನಪದ ಕಲಾವಿದ, ಸ್ನಾತಕ ಪದವಿಯಲ್ಲಿ ಚಿನ್ನದ ಪದಕ ಪಡೆದ ಪ್ರತಿಭಾನ್ವಿತ. ಆದರೂ ಬದುಕು ಕಟ್ಟಿಕೊಂಡಿದ್ದು ಕೃಷಿಯಿಂದ.
ವ್ಯವಸಾಯದಿಂದ ಆದಾಯ ಕಾಣುವವರ ಸಂಖ್ಯೆ ವಿರಳ ಎಂಬ ಅಪವಾದದ ನಡುವೆ ಮನಸಿದ್ದರೆ ಏನನ್ನಾದರೂ ಸಾಧಿಸಬಹುದು, ಕೃಷಿಯಿಂದಲೂ ಲಾಭಕಾಣಬಹುದು, ಹೆಸರನ್ನೂ ಮಾಡಬಹುದು ಎಂಬುದಕ್ಕೆ ಯುವ ರೈತ, ಪದವೀಧರ ನಂಜುಂಡಿ ಮಾದರಿಯಾಗಿದ್ದಾರೆ. ಮುಖ್ಯವಾಗಿ ನಂಜುಂಡಿ ಬೆಳೆದ ಧಾನ್ಯಗಳು ಮಾರಾಟವಾಗುವುದು ಬಿತ್ತನೆ ಉದ್ದೇಶಕ್ಕೆ ಎಂಬುದು ಮತ್ತೊಂದು ವಿಶೇಷ.
ಹೌದು.... ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟೂರು ಬಾನಂದೂರಿನ ಪ್ರಗತಿಪರ ರೈತ ನಂಜುಂಡಿ ಜಾನಪದದೊಂದಿಗೆ ವ್ಯವಸಾಯವನ್ನೇ ನಂಬಿ ಜೀವನ ಸಾಗಿಸುತ್ತಿದ್ದು, ಮಿಶ್ರ ಬೇಸಾಯದ ಮೂಲಕ ಆದಾಯ ಕಂಡುಕೊಂಡಿದ್ದಾರೆ. ಬಾಲ್ಯದಿಂದಲೇ ಕೃಷಿಯತ್ತ ಆಕರ್ಷಿತರಾಗಿದ್ದ ನಂಜುಂಡಿ ಮಾಗಡಿ ತಾಲೂಕಿನ ಕೆವಿಕೆ ಕೃಷಿ ವಿಾನ ಕೇಂದ್ರದಿಂದ ಬೇಸಾಯದ ವಿಚಾರದಲ್ಲಿ ಒಂದು ವರ್ಷ ತರಬೇತಿ ಪಡೆದಿದ್ದು, ಅಗ್ರಿಕಲ್ಚರ್​ ಡಿಪ್ಲೊಮಾ ಕೋರ್ಸ್​ ಮಾಡಿದ್ದಾರೆ.
ಒಟ್ಟು 5.20 ಎಕರೆ ಕೃಷಿ ಭೂಮಿ ಹೊಂದಿದ್ದು, ಮುಖ್ಯವಾಗಿ ರಾಗಿ, ಭತ್ತ, ಜೋಳ, ತೊಗರಿ, ಅವರೆ ಬೆಳೆಯುತ್ತಾರೆ. ಸದ್ಯ 3 ಎಕರೆಯಲ್ಲಿ ವಿವಿಧ ತಳಿಯ ರಾಗಿಯನ್ನು ನಾಟಿ ಹಾಗೂ ಕೂರುಗೆಯಿಂದ ಬಿತ್ತಲಾಗಿದ್ದು, ಪ್ರತಿ ಬಾರಿಯೂ ಹೊಸ ತಳಿಯ ಬಿತ್ತನೆ ಬೀಜಗಳನ್ನು ಪರಿಚಯಿಸುತ್ತಾರೆ. ಮುಖ್ಯವಾಗಿ ಎಂ.ಆರ್​&1, ಎಂ.ಆರ್​&2, ಕೆಎಂಆರ್​&340 ಮಜ್ಜಿಗೆ ರಾಗಿ(ಬಿಳಿ ರಾಗಿ), ಎಂ.ಎಲ್​ 322, ಕೆ.ಎಂ.ಆರ್​&301 ರಾಗಿ ತಳಿಯನ್ನು ಬೆಳೆಯುತ್ತಾರೆ.
ಸೀಜನ್​ ತಕ್ಕಂತೆ 2 ಎಕರೆಯಲ್ಲಿ ಭತ್ತ ಹಾಗೂ ಜೋಳವನ್ನೂ ಬೆಳೆಯುವ ನಂಜುಂಡಿ ಅವರು, ಸದ್ಯ ಒಂದು ಎಕರೆಯಲ್ಲಿ ಭತ್ತ ಹಾಗೂ ಒಂದು ಎಕರೆಯಲ್ಲಿ ಬಿಆರ್​ಜಿ&3, ಬಿಆರ್​ಜಿ&1 ತಳಿಯ ತೊಗರಿ ಬೆಳೆದಿದ್ದಾರೆ. ಭತ್ತವನ್ನು ಕಟಾವು ಮಾಡಿದ ನಂತರ ಹೆಬ್ಬಾಳ&5 ತಳಿಯ ಅವರೆಕಾಯಿ ಬೆಳೆಯುವುದಾಗಿ ತಿಳಿಸಿದ್ದಾರೆ.
ಪ್ರಸ್ತುತ ಬೆಳೆದಿರುವ ರಾಗಿಯನ್ನು ಪೂರ್ಣ ಪ್ರಮಾಣದಲ್ಲಿ ಖರೀದಿಸಲು ಜಿಕೆವಿಕೆಯವರು ಒಪ್ಪಂದ ಮಾಡಿಕೊಂಡಿದ್ದು, ನಂಜುಂಡಿ ಬೆಳೆದಿರುವ ಎಂ.ಎಲ್​.322, ಎಂ.ಆರ್​.&1 ತಳಿಯ 13 ಕ್ವಿಂಟಾಲ್​ ರಾಗಿಯನ್ನು ಬಿತ್ತನೆಗಾಗಿ 10 ಜಿಲ್ಲೆಗಳಿಗೆ ನೀಡಲಾಗಿದೆ.
ಜಾನಪದ ಕಲಾವಿದ
ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕ ಪದವಿಯಲ್ಲಿ ಚಿನ್ನದ ಪದಕ ಪಡೆದಿರುವ ನಂಜುಂಡಿ, ಅದೇ ವಿವಿಯಲ್ಲಿ ಜಾನಪದ ವಿಷಯದಲ್ಲಿ ಡಿಪ್ಲೊಮಾ ಕೋರ್ಸ್​ ಮಾಡಿದ್ದಾರೆ. ನಶಿಸುತ್ತಿರುವ ಜಾನಪದ ಕಲೆಗಳನ್ನು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಬೇಸಿಗೆ ಶಿಬಿರ ಆಯೋಜಿಸುತ್ತ ಮಕ್ಕಳಲ್ಲಿ ಜಾನಪದ ಕಲೆಗಳ ಬಗ್ಗೆ ಒಲವು ಮೂಡಿಸುತ್ತಿದ್ದಾರೆ.
ಆನ್​ಲೈನ್​ ಮಾರುಕಟ್ಟೆ
ನಂಜುಂಡಿ ಅವರು ಪ್ರಮುಖವಾಗಿ ಬಿತ್ತನೆ ಬೀಜಗಳ ಕಡೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಇವರು ಬೆಳೆಯುವ ವಿವಿಧ ತಳಿಯ ರಾಗಿ, ಭತ್ತ, ತೊಗರಿ, ಅವರೆಕಾಯಿ ಬೀಜಗಳಿಗೆ ಅಧಿಕ ಬೇಡಿಕೆ ಇದೆ. ಅಕ್ಕಪಕ್ಕದ ಗ್ರಾಮಗಳ ರೈತರು ನೇರವಾಗಿ ಮನೆಬಳಿಗೆ ಬಂದು ಖರೀದಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಬಿತ್ತನೆ ಬೀಜಗಳ ಬಗ್ಗೆ ಪ್ರಚಾರಿಸಿ ವ್ಯಾಪಾರ ಮಾಡುತ್ತಾರೆ. ಕೃಷಿ ಅಧಿಕಾರಿಗಳೊಂದಿಗೂ ಸಂಪರ್ಕ ಇದ್ದು, ರೈತ ಸಂಪರ್ಕ ಕೇಂದ್ರಕ್ಕೆ ಬರುವವರಿಗೂ ವಿವಿಧ ತಳಿಯ ಬಿತ್ತನೆ ಬೀಜಗಳು ಬಾನಂದೂರಿನಲ್ಲಿ ಸಿಗುವುದಾಗಿ ಅಧಿಕಾರಿಗಳೆ ಹೇಳಿ ಕಳುಹಿಸುತ್ತಾರೆ.
ಛತ್ತೀಸ್​ಗಡಕ್ಕೆ ರವಾನೆ
ನಂಜುಂಡಿ ಅವರ ಪ್ರಮುಖ ಸಾಧನೆ ಎಂದರೆ ಇವರು ಬೆಳೆದ ರಾಗಿಯನ್ನು ಪ್ರಾಯೋಗಿಕವಾಗಿ ಬೆಳೆಯಲು ಕೆವಿಕೆ ವಿಾನ ಕೇಂದ್ರದಿಂದ ಛತ್ತೀಸ್​ಗಡಕ್ಕೆ ಕಳುಹಿಸಿಕೊಡಲಾಗಿದೆ. ಆ ರಾಜ್ಯದಲ್ಲಿ ರಬ್ಬರ್​ ಮರಗಳನ್ನು ಹಾಕಿದ ನಂತರ ಮರಗಳು ದಪ್ಪವಾಗಲು 5&6 ವರ್ಷಗಳು ಬೇಕಿರುವ ಹಿನ್ನೆಲೆಯಲ್ಲಿ ಅಷ್ಟೂ ವರ್ಷ ಭೂಮಿ ಖಾಲಿ ಬಿಡುವುದು ಬೇಡ. ರಾಗಿ ಬೆಳೆಯಬಹುದು ಎಂಬ ಪ್ರಾಯೋಗಿಕ ಚಾಲನೆಗಾಗಿ 4 ತಳಿಯ ರಾಗಿಯನ್ನು ಕಳುಹಿಸಿಕೊಡಲಾಗಿದೆ.
ಹೈನುಗಾರಿಕೆ
ಕೃಷಿಯೊಂದಿಗೆ ಹೈನುಗಾರಿಕೆಯಲ್ಲೂ ನಂಜುಂಡಿ ತೊಡಗಿಸಿಕೊಂಡಿದ್ದು, 3 ಉತ್ತಮ ತಳಿಯ ಸೀಮೆ ಹಸುಗಳನ್ನು ಸಾಕಿದ್ದಾರೆ. ಪ್ರತಿದಿನ 15 ಲೀಟರ್​ ಹಾಲನ್ನು ಡೇರಿಗೆ ಹಾಕಿ, ಪ್ರತಿ ತಿಂಗಳು 16ರಿಂದ 17 ಸಾವಿರ ರೂ. ಆದಾಯವನ್ನು ಡೇರಿಯಿಂದ ಪಡೆದುಕೊಳ್ಳುತ್ತಿದ್ದಾರೆ.
ಅತ್ಯುತ್ತಮ ರೈತ ಪ್ರಶಸ್ತಿ
ಬೆಂಗಳೂರಿನ ಯಲಹಂಕದಲ್ಲಿರುವ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ 33ನೇ ಸಂಸ್ಥಾಪನಾ ದಿನಾಚರಣೆ ಹಾಗೂ 3ನೇ ಕೃಷಿ ಕೀಟ ಜೈವಿಕ ನಿಯಂತ್ರಣ ಪ್ರದರ್ಶನದಲ್ಲಿ ಕೇಂದ್ರ ಕೈಗಾರಿಕಾ ಸಚಿವ ಎಚ್​.ಡಿ.ಕುಮಾರಸ್ವಾಮಿ ಅವರಿಂದ 2025ನೇ ಸಾಲಿನ ಪ್ರಗತಿಪರ ರೈತ, ಅತ್ಯುತ್ತಮ ರೈತ ಪ್ರಶಸ್ತಿಯನ್ನು ಕಳೆದ ತಿಂಗಳು ನಂಜುಂಡಿ ಪಡೆದುಕೊಂಡಿದ್ದಾರೆ.
"

ನಾನು ಪದವೀಧರನಾಗಿದ್ದರೂ ಮನಸ್ಸಿದ್ದರೆ ಮಾರ್ಗ ಎಂಬಂತೆ ಬೇಸಾಯ ಬಿಡಬಾರದು ಎಂದು ದೃಢ ನಿರ್ಧಾರದಿಂದ ಕೃಷಿ ವಿಾನ ಕೇಂದ್ರಗಳಿಗೆ ಹೋಗಿ ಅಲ್ಲಿನ ವಿಾನಿಗಳೊಂದಿಗೆ ಸಂಪರ್ಕ ಬೆಳೆಸಿಕೊಂಡು ವಿವಿಧ ತಳಿಯ ಬಿತ್ತನೆ ಬೀಜಗಳನ್ನು ಬಿತ್ತಿ, ಪ್ರಯೋಗಿಸಿ ಯಶಸ್ಸು ಕಾಣುತ್ತಿದ್ದೇನೆ. ರೈತರು ವೈಾನಿಕ ಪದ್ಧತಿ ಅಳವಡಿಸಿಕೊಂಡು, ವರ್ತಮಾನಕ್ಕೆ ಅನುಗುಣವಾದ ಬೆಳೆಗಳನ್ನು ಉತ್ತಮ ನಿರ್ವಹಣೆಯೊಂದಿಗೆ ಗುಣಮಟ್ಟದಲ್ಲಿ ಬೆಳೆಯಬೇಕು. ನೇರ ಮಾರುಕಟ್ಟೆ ಸೃಷ್ಟಿಸಿಕೊಂಡರೆ ಕೃಷಿ ಲಾಭದಾಯಕ.