ಮಾಗಡಿ ತಾಲೂಕಿನ ಕಲ್ಯಾ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯಲ್ಲಿ ಶಿಶು ಅಭಿವೃದ್ಧಿ ಯೋಜಾನಾಧಿಕಾರಿ ಸುರೇಂದ್ರ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯೆ ಉಮಾದೇವಿ, ಸದಸ್ಯರಾದ ಚಂದ್ರಕಲಾ, ಉಮೇಶ್, ಬಿ.ಕೆ. ಕುಮಾರ್, ಎ.ಜಯಮ್ಮ, ಕೆ.ಎಂ.ನಾಗರಾಜು, ರತ್ನಮ್ಮ ಎಂ.ವಿ.ರಂಗನಾಥ್ ಇದ್ದರು.
ಮಾಗಡಿ: ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು. ಹಾಗಾಗಿ ಅವರ ಹಕ್ಕುಗಳನ್ನು ಪ್ರತಿಪಾದಿಸಲು ಅವರಿಗೆ ಅವಕಾಶ ನೀಡಬೇಕು ಎಂದು ಕಲ್ಯಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಪತಿಹಳ್ಳಿ ಎಸ್.ಎಸ್.ಕೃಷ್ಣಪ್ಪ ಹೇಳಿದರು.
ತಾಲೂಕಿನ ಕಲ್ಯಾ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 2025&26ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹುಟ್ಟಿದ ಮಗುವಿಗೆ ಮನೆಯೇ ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರುವಾಗಿರುತ್ತಾರೆ. ಮಾತು ಅಳು ನಗು ಎಲ್ಲವನ್ನೂ ಅರಿತು ಓಲೈಸಿ, ಲಾಲನೆ ಪಾಲನೆ ಮಾಡುತ್ತಾಳೆ. ನಂತರ ಮಗು ಶಾಲೆಗೆ ಬಂದ ನಂತರ ಶಿಕ್ಷಣ ಪಡೆಯುತ್ತದೆ. ಅಕ್ಷರ, ಅಂಕಿ& ಸಂಖ್ಯೆ ಕಲಿಯುತ್ತಲೇ ಮಕ್ಕಳು ಸಮಾಜವನ್ನು ಗಮನಿಸುತ್ತಾರೆ.ಅವರಿಗೆ ಬಾಲ್ಯದಲ್ಲಿಯೇ ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡುವ, ಅವರ ಹಕ್ಕುಗಳನ್ನು ಪ್ರತಿಪಾದಿಸುವ ಗುಣವನ್ನು ಪಾಲಕರು, ಶಿಕ್ಷಕರು ಪ್ರೋತ್ಸಾಹಿಸಬೇಕು. ಆರೋಗ್ಯಕರ ಬೆಳವಣಿಗೆಗೆ ಪೌಷ್ಟಿಕ ಆಹಾರ ಒದಗಿಸುವುದು ಅಷ್ಟೇ ಮುಖ್ಯವಾಗಿರುತ್ತದೆ ಎಂದರು.
ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಆಟ&ಪಾಠಗಳ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸುವುದು. ಪ್ರತಿ 3 ವರ್ಷದಿಂದ 6 ವರ್ಷದ ಎಲ್ಲ ಮಕ್ಕಳು ಅಂಗನವಾಡಿ ಹಾಗೂ ಶಾಲೆಗಳಲ್ಲಿ ದಾಖಲಾಗಿ ಶಿಕ್ಷಣಪ್ರಾರಂಭಿಸುವುದು. ಜೀತ ಪದ್ಧತಿ ಹಾಗೂ ಕೃಷಿ ಕಾರ್ಮಿಕ ವೃತ್ತಿಯಲ್ಲಿ ಮಕ್ಕಳನ್ನು ತೊಡಗಿಸದಂತೆ ಪಾಲಕರಿಗೆ ಜಾಗೃತಿ ಮೂಡಿಸುವುದು, ಹೆಣ್ಣು ಮಕ್ಕಳ ಪೋಷಣೆ ಹಾಗೂ ರಕ್ಷಣೆ ಸೇರಿದಂತೆ ಮಕ್ಕಳ ಬೆಳವಣಿಗೆಗೆ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಯೋಜನೆಯ ಕಾರ್ಯಕ್ರಮಗಳನ್ನು ವಿವರವಾಗಿ ಚರ್ಚಿಸಿ ಗ್ರಾಮಸ್ಥರು ಹಾಗೂ ಪಾಲಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಂದ್ರ ಮಾತನಾಡಿ, ನಾನು ಸರ್ಕಾರದ ಕಾರ್ಯವನ್ನು ಮಾತ್ರ ನಿರ್ವಹಿಸುತ್ತಿರುವೆ. ಹೆಣ್ಣು ದೇಶದ ಕಣ್ಣು ಎನ್ನುತ್ತಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿ ಇದೆ. ತಾಯಿ ಮಕ್ಕಳ ಪೋಷಣೆ ನನ್ನ ಕೆಲಸವಾದರೂ, ಅವರಿಗೆ ತಮ್ಮಹಕ್ಕುಗಳನ್ನು ಗ್ರಾಮಸಭೆಯಲ್ಲಿ ತಿಳಿಸಿಕೊಡುವ ಅವಕಾಶ ಮಾಡಿಕೊಡಲಾಗಿದೆ. ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಇಲ್ಲಿ ಪ್ರಸ್ತಾಪಿಸಿ ಮಾತನಾಡುವ ವೇದಿಕೆ ಇದಾಗಿದೆ ಎಂದರು.
ಪಿಡಿಒ ಸೋಮಶೇಖರ್, ಕಾರ್ಯದರ್ಶಿ ರೇಣುಕಪ್ಪ, ಎಚ್.ಪ್ರಭು, ಭೀಮಯ್ಯ, ಶಿಕ್ಷಕ ಪತಿಗೌಡ, ಸುಲ್ತಾನ್ ಬಾಬು ಇತರರು ಭಾಗವಹಿಸಿದ್ದರು.