- ರಾತ್ರಿ ವೇಳೆ ಮನೆ ಮುಂದೆ ಓಡಾಡುತ್ತಿದ್ದ ಬಾಲಕಿ
- ಕತ್ತಲೆಯಲ್ಲಿ ಏನು ಕಚ್ಚಿದೆ ಎನ್ನುವುದು ತಿಳಿಯಲಿಲ್ಲ
- ಪಾಲಕರಿಗೆ ಹೇಳಿದರೂ ಅವರೂ ಹೆಚ್ಚು ಗಮನ ಹರಿಸಿಲ್ಲ
ರಾಮನಗರ : ಕೈಲಾಂಚ ಹೋಬಳಿಯ ಗೌಡಯ್ಯನದೊಡ್ಡಿ ಗ್ರಾಮದಲ್ಲಿ ಹಾವು ಕಚ್ಚಿ ಆರ್. ಲಾವಣ್ಯ ಎಂಬ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ಗೌಡಯ್ಯನದೊಡ್ಡಿ ಗ್ರಾಮದ ರಮೇಶ್ ಮತ್ತು ಸವಿತ ದಂಪತಿಗಳ ಮಗು ಆರ್. ಲಾವಣ್ಯ (10) ಶನಿವಾರ ರಾತ್ರಿ ಮನೆ ಬಳಿ ತಿರುಗಾಡುವ ವೇಳೆ ವಿಷಪೂರಿತ ಹಾವು ಕಚ್ಚಿದೆ. ಆದರೆ ಮಗು ಹಾವನ್ನು ಕತ್ತಲೆಯಲ್ಲಿ ನೋಡಿರದ ಕಾರಣ ಏನು ಕಡಿಯಿತು ಎಂದು ತಂದೆ ತಾಯಿಗೆ ಹೇಳಿದೆ ಆದರೆ ತಂದೆ ತಾಯಿಗಳು ಎಲ್ಲೋ ಇರುವೆ, ಕಡಜ, ಚೇಳು ಕಡಿದಿರಬೇಕು ಎಂದು ಸುಮ್ಮನಾಗಿದ್ದಾರೆ.
ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ಮಗು ಒದ್ದಾಡಿ ಮೈ ಉರಿಯುತ್ತಿದೆ ಎಂದು ಹೇಳಿದೆ ಕೂಡಲೇ ರಾಮನಗರದ ಜಿಲ್ಲಾಸ್ಪತ್ರೆಗೆ ಮಗುವನ್ನು ಕರೆತಂದಿದ್ದಾರೆ. ವೈದ್ಯರು ಪ್ರಥಮಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಮಗುವುಗೆ ಬೇಕಿದ್ದರಿಂದ ಬೆಂಗಳೂರು ಆಸ್ಪತ್ರೆಗೆಹೋಗಲು ತಿಳಿಸಿದ್ದಾರೆ. ಮಗುವನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ಸಮಯದಲ್ಲಿ ಮಾರ್ಗಮಧ್ಯದಲ್ಲಿಯೇ ಮಗು ಮೃತಪಟ್ಟಿದೆ.
ವಾಪಸ್ ಮಗುವಿನ ಮೃತದೇಹವನ್ನು ರಾಮನಗರ ಜಿಲ್ಲಾಸ್ಪತ್ರೆಗೆ ತಂದು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಭಾನುವಾರ ಸಂಜೆ ಮೃತ ಮಗುವಿನ ಶವವನ್ನು ಪಾಲಕರಿಗೆ ನೀಡಿದರು. ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಮಗುವಿಗೆ ಒಬ್ಬ ತಮ್ಮ ಕೂಡ ಇದ್ದಾನೆ. ಶಾಲೆಯಲ್ಲಿ ಲವಲವಿಕೆಯಿಂದ ಲಾವಣ್ಯ ಇರುತ್ತಿದ್ದು ಪ್ರತಿದಿನ ತಪ್ಪದೆ ಶಾಲೆಗೆ ಬರುತ್ತಿದ್ದಳು. ಶನಿವಾರ ಕೂಡ ಶಾಲೆಯಲ್ಲಿ ಲವಲವಿಕೆಯಿಂದ ಇದ್ದು ನಗು ನಗುತ್ತಲೇ ಮನೆಗೆ ಹೋಗಿದ್ದಳು. ವಿಧಿ ಹಾವಿನ ರೂಪದಲ್ಲಿ ಬಂದು ಪುಟ್ಟ ಕಂದಮ್ಮನನ್ನು ಬಲಿ ಪಡೆದಿದೆ ಎಂದು ಗೌಡಯ್ಯನದೊಡ್ಡಿ ಸರ್ಕಾರಿ ಶಾಲೆ ಶಿಕ್ಷಕಿಯರಾದ ಪ್ರತಿಭಾ, ರೀಟಾ ದುಃಖಿತರಾದರು.