ಶ್ಯಾನಮಂಗಲ ಬಳಿಯ ಜಿಎನ್ ಎಲೆಕ್ಟ್ರಾನಿಕ್ ಪ್ರೈವೇಟ್ ಲಿ. ಕಾರ್ಖಾನೆಯಲ್ಲಿ ಕಾಣಿಸಿಕೊಂಡ ಬೆಂಕಿ.  
ಬೆಂಗಳೂರು ದಕ್ಷಿಣ

ಗ್ಯಾಸ್ ಲೈಟರ್ ತಯಾರಿಕಾ ಕಾರ್ಖಾನೆ ಬೆಂಕಿಗಾಹುತಿ

ಪ್ರಮುಖ ಮುಖ್ಯಾಂಶಗಳು

  • ಗ್ಯಾಸ್ ಲೈಟರ್ ತಯಾರಿಕಾ ಕಾರ್ಖಾನೆ ಬೆಂಕಿಗಾಹುತಿ
ಗ್ಯಾಸ್ ಲೈಟರ್ ತಯಾರಿಕಾ ಕಾರ್ಖಾನೆ ಬೆಂಕಿಗಾಹುತಿ
ವಿಜಯವಾಣಿ ಸುದ್ದಿಜಾಲ ಬಿಡದಿ
ಸಿಗರೇಟ್ ಹೊತ್ತಿಸುವ ಗ್ಯಾಸ್ ಲೈಟರ್ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಹೊಂದುಕೊಂಡತೆ ಇರುವ ಶ್ಯಾನಮಂಗಲ ಗ್ರಾಮದ ಬಳಿಯ ಜಿಎನ್ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿ. ಕಾರ್ಖಾನೆಯಲ್ಲಿ ಗುರುವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಲೇ ಬೆಂಕಿ ಇಡೀ ಕಾರ್ಖಾನೆ ಆವರಿಸಿತು. ಕಾರ್ಖಾನೆಯಲ್ಲಿ 40ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಬೆಂಕಿ ಕಾಣಿಸಿಕೊಳ್ಳತ್ತಿದಂತೆ ಕಾರ್ಮಿಕರು ಹೊರ ಬಂದಿದ್ದರು. ಲೈಟರ್‌ಗಳಿಗೆ ಗ್ಯಾಸ್‌ನಿಂದ ಗ್ಯಾಸ್ ತುಂಬಿಸಲಾಗುತಿತ್ತು. ಅದೃಷ್ಟವಷಾತ್ ಕಾರ್ಖಾನೆಯಲ್ಲಿದ್ದ ಬಹುತೇಕ ಸಿಲಿಂಡರ್‌ಗಳು ಖಾಲಿಯಾಗಿದ್ದವು. ಇದರಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಕಾರ್ಖಾನೆ ಒಳಗಿದ್ದ ಮಿಷನ್‌ಗಳು, ಪೈಪ್‌ಗಳು ಸೇರಿ ಇನ್ನಿತರ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿವೆ. ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಕಚೇರಿಗೆ ಮಾಹಿತಿ ನೀಡಲಾಗಿ 5 ಅಗ್ನಿಶಾಮಕ ದಳದ ವಾಹನಗಳು ಹಾಗೂ ಸಿಬ್ಬಂದಿ ಬಂದು ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದರು. ಅಗ್ನಿಶಾಮಕ ದಳದವರು ಬರುವಷ್ಟರಲ್ಲೇ ಕಾರ್ಖಾನೆ ತುಂಬ ಬೆಂಕಿ ಹೊತ್ತಿಕೊಂಡು ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು. ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಪೆಟ್ಟಿಗೆ ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಮಾಗಡಿ ಪಟ್ಟಣದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ರಾಷ್ಟ್ರೀಯಮಟ್ಟದ ಅಂಗವಿಕಲ ಕುಸ್ತಿಪಟು ಕೃಷ್ಣಮೂರ್ತಿ ಇಟ್ಟುಕೊಂಡಿದ್ದ ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಪಟ್ಟಣದ ತಿರುಮಲೆ ಹೊಸ ಬಡಾವಣೆ ನಿವಾಸಿಯಾಗಿರುವ ಅಂಗವಿಕಲ ಕೃಷ್ಣಮೂರ್ತಿ 11 ವರ್ಷಗಳಿಂದ ಕಬ್ಬಿಣದ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು.
ಖಾಸಗಿ ಬಸ್ ನಿಲ್ದಾಣದವರೆಗಿನ ರಸ್ತೆ ವಿಸ್ತರಣೆ ಹಾಗೂ ಗಾಂಧಿ ಪ್ರತಿಮೆ ಕಾಮಗಾರಿ ಹಿನ್ನೆಲೆಯಲ್ಲಿ 7 ತಿಂಗಳಿಂದ ವ್ಯಾಪಾರ ಸ್ಥಗಿತಗೊಳಿಸಿ, ಇತ್ತೀಚೆಗಷ್ಟೇ ಅಂಗಡಿಯನ್ನು ಸ್ವಲ್ಪ ಹಿಂದಕ್ಕೆ ಸ್ಥಳಾಂತರಿಸಿ ಪುನಃ ವ್ಯಾಪಾರ ಆರಂಭಿಸಿದ್ದರು. ಬುಧವಾರ ತಡರಾತ್ರಿ 1.30ರ ಸಮಯದಲ್ಲಿ ಕಿಡಿಗೇಡಿಗಳು ಪೆಟ್ಟಿಗೆ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ.
ಸ್ಥಳೀಯರ ಮಾಹಿತಿ ಆಧರಿಸಿ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ಮಾಗಡಿ ಪೊಲೀಸರು ಸ್ಥಳ ಪರಿಶೀಲಿಸಿದ್ದು, ದೂರು ದಾಖಲಾಗಿದೆ.
ಅಂಗಡಿಯಿಂದ ಬರುವ ಆದಾಯ ನಮಗೆ ಜೀವನೋಪಾಯವಾಗಿತ್ತು. ಸಾಲ ಮಾಡಿ ವ್ಯಾಪಾರ ಆರಂಭಿಸಿದ್ದೆ. ಬೆಂಕಿ ಬಿದ್ದು, ಆರ್ಥಿಕವಾಗಿ ನಷ್ಟವಾಗಿದೆ ಎಂದು ಕೃಷ್ಣಮೂರ್ತಿ ನೋವು ತೋಡಿಕೊಂದರು.