crime 
ಬೆಂಗಳೂರು ದಕ್ಷಿಣ

ವೀಲಿಂಗ್​ ಬೈಕ್​ ಢಿಕ್ಕಿಯಾಗಿ ಹಣ್ಣಿನ ವ್ಯಾಪಾರಿ ಸಾವು

ಪ್ರಮುಖ ಮುಖ್ಯಾಂಶಗಳು

  • ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ
  • ವೀಲ್ಹಿಂಗ್ ಹುಡುಗರ ಪುಂಡಾಟ
ಮಾಗಡಿ: ವೀಲಿಂಗ್​ನಲ್ಲಿ ತೊಡಗಿದ್ದ ಯುವಕರ ಗುಂಪಿನ ಬೇಜವಾಬ್ದಾರಿ ಬೈಕ್​ ಚಾಲನೆಯು ಅಮಾಯಕ ಮಾವಿನಹಣ್ಣಿನ ವ್ಯಾಪಾರಿಯನ್ನು ಬಲಿತೆಗೆದುಕೊಂಡಿದೆ.
ವಿಶ್ವನಾಥಪುರ ಗೇಟ್​ ಬಳಿ ಬುಧವಾರ ಸಂಭವಿಸಿದ ಈ ದುರ್ಟನೆಯಲ್ಲಿ ಮಾನಗಲ್​ ಗ್ರಾಮದ ವೆಂಕಟೇಶಪ್ಪ (55) ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಆರ್​.ಬ್ಯಾಡರಹಳ್ಳಿಯ ಆರು ಯುವಕರು ಬೈಕ್​ಗಳಲ್ಲಿ ಅತಿವೇಗವಾಗಿ ವೀಲಿಂಗ್​ ಮಾಡಿಕೊಂಡು ಬರುತ್ತಿದ್ದರು. ವಿಶ್ವನಾಥಪುರ ಗೇಟ್​ಗಿಂತ ಮುಂಚೆ ಕೆಂಪಸಾಗರ ಗೇಟ್​ ಬಳಿ ಬೈಕ್​ಗಳಲ್ಲಿ ಸಾಗುವಾಗ ಅಪಾಯಕಾರಿ ಚಾಲನೆಯನ್ನು ಕಂಡು ಸಾರ್ವಜನಿಕರು ಬೈಕ್​ ತಡೆದು ಬುದ್ಧಿವಾದ ಹೇಳಿ, ಎಚ್ಚರಿಕೆ ನೀಡಿದ್ದರು. ಆದರೆ, ಸಾರ್ವಜನಿಕರ ಮಾತಿಗೆ ಕ್ಯಾರೆ ಎನ್ನದ ಯುವಕರ ಗುಂಪು ಮತ್ತಷ್ಟು ವೇಗವಾಗಿ ವೀಲಿಂಗ್​ ಮಾಡಿಕೊಂಡು ಮುನ್ನುಗ್ಗಿ ವಿಶ್ವನಾಥಪುರ ಗೇಟ್​ ಬಳಿ ವೆಂಕಟೇಶಪ್ಪ ಅವರ ಬೈಕ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ವೆಂಕಟೇಶಪ್ಪ ಇತ್ತೀಚೆಗಷ್ಟೇ ಮಾಗಡಿಯ ಮಂಡಿಗೆ ಮಾವಿನ ಕಾಯಿಗಳನ್ನು ಹಾಕಿದ್ದರು. ಅದರ ಹಣ ಪಡೆದುಕೊಂಡು ಬರಲು ಮಾನಗಲ್ಲು&ಕೊಂಡಹಳ್ಳಿ ಮಾರ್ಗವಾಗಿ ಬೈಕ್​ನಲ್ಲಿ ಹೊರಟಿದ್ದರು. ಆದರೆ ಯುವಕರ ಹುಚ್ಚಾಟ ಇವರನ್ನು ಬಲಿಪಡೆದಿದೆ.
ಮೃತರಿಗೆ ಪತ್ನಿ, ಮೂವರು ಪುತ್ರಿಯರಿದ್ದಾರೆ. ವ್ಯಾಪಾರ ಮಾಡಿಕೊಂಡು ಹೆಣ್ಣು ಮಕ್ಕಳನ್ನು ಸಲಹುತ್ತಿದ್ದ ಕುಟುಂಬದ ಏಕೈಕ ಆಧಾರಸ್ತಂಭವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.