ಲಕ್ಕೋಜನಹಳ್ಳಿ ಶಾಲಾವರಣದಲ್ಲಿ ಮದ್ಯ ಸೇವಿಸುತ್ತಿದ್ದ ರೌಡಿಶೀಟರ್ ಹನುಮ ಹಾಗೂ ಆತನ ಸಹಚರರಾದ ಕೌಶಿಕ್, ಭಾನುಪ್ರಕಾಶ್ ಹಾಗೂ ಅನುಕುಮಾರ್.
ರಾಮನಗರ: ತಾಲೂಕಿನ ಲಕ್ಕೋಜನಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಮದ್ಯಪಾನ ಮಾಡಿ, ಇಸ್ಪೀಟ್ ಆಡುತ್ತಿದ್ದ ರೌಡಿಶೀಟರ್ ಹಾಗೂ ಆತನ ಮೂವರು ಸಹಚರರನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಲಕ್ಕೋಜನಹಳ್ಳಿ ರೌಡಿಶೀಟರ್ ಹನುಮ ಹಾಗೂ ಸಹಚರರಾದ ಕೌಶಿಕ್, ಭಾನುಪ್ರಕಾಶ್, ಅನುಕುಮಾರ್ ಬಂಧಿತರು. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಶಾಲೆ ಬಂದ್ ಆಗಿದೆ. ಈ ವೇಳೆ ಆರೋಪಿಗಳು ಶಾಲಾ ಆವರಣದಲ್ಲಿನ ತೆರೆದ ರಂಗಮಂದಿರದಲ್ಲಿ ಮದ್ಯ ಸೇವಿಸುತ್ತ ಇಸ್ಪೀಟ್ ಆಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳಿಯರೊಬ್ಬರು ಶಾಲಾ ಆವರಣದಲ್ಲಿ ಹೀಗೆಲ್ಲ ಮಾಡುವುದು ತಪು$್ಪ ಎಂದು ಬುದ್ಧಿ ಹೇಳಿದಕ್ಕೆ ಧಮ್ಕಿ ಹಾಕಿದ್ದರು. ಈ ಕುರಿತು ಪ್ರಶ್ನಿಸಿದ ಶಿಕ್ಷಕರು ಹಾಗೂ ಗ್ರಾಮಸ್ಥರಿಗೂ ಬೆದರಿಸಿದ್ದರು ಎನ್ನಲಾಗಿದೆ.
ಶಾಲಾ ಆವರಣದಲ್ಲಿ ಮದ್ಯ ಸೇವಿಸುತ್ತ ಜೂಜಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ ಎಚ್ಚೆತ್ತ ಗ್ರಾಮಾಂತರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.