ರಾಮನಗರ ನಗರಸಭೆಯಿಂದ ನಿರ್ಮಾಣಗೊಳ್ಳುತ್ತಿರುವ ಫುಡ್ ಕೋರ್ಟ್
- ಶೀಘ್ರವೇ ಆಹಾರ ಪ್ರಿಯರ ಬಳಕೆಗೆ ಸಿದ್ಧ
- 50 ಆಹಾರ ಮಳಿಗೆಗಳ ಕಾಮಗಾರಿಗೆ ಚಾಲನೆ
ಜಿಲ್ಲಾ ಕೇಂದ್ರ ರಾಮನಗರದಲ್ಲಿರಾಮನಗರದಲ್ಲಿ ಶೀಘ್ರ ಫುಡ್ ಸ್ಟ್ರೀಟ್ ಬೇಕೆನ್ನುವ ಬೇಡಿಕೆ ಹಿಂದಿನಿಂದಲೂ ಇತ್ತು. ಈ ಬೇಡಿಕೆಗೆ ಈಡೇರುವ ಕಾಲ ಕೂಡಿ ಬಂದಿದ್ದು, ಶೀಘ್ರದಲ್ಲಿಯೇ ಆಹಾರ ಪ್ರಿಯರ ಬಳಕೆಗೆ ತೆರೆದುಕೊಳ್ಳಲಿದೆ.
ರಾಮನಗರ ಬಹುತೇಕ ರಸ್ತೆಗಳು ಕಿರಿದಾಗಿವೆ, ಅಲ್ಲಲ್ಲಿ ರುಚಿಯಾಗಿ ಬೀದಿಬದಿ ತಿನಿಸುಗಳು ದೊರೆಯುತ್ತವೆಯಾದರೂ, ಅಲ್ಲಿ ನಿಂತು ರುಚಿ ಸವಿಯುವುದು ಸವಾಲಿನ ಕೆಲಸ. ಜತೆಗೆ ಸಂಚಾರ ಸಿಕ್ಕಿನ ಕಿರಿಕಿರಿಯೂ ಆಹಾರ ಪ್ರಿಯರಿಗೆ ಬೇಸರ ತರಿಸುತಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ, ಹಾಸನ ಮಾದರಿಯಲ್ಲಿಯೇ ರಾಮನಗರದಲ್ಲಿಯೇ ಫುಡ್ ಸ್ಟ್ರೀಟ್ ತೆರೆಯಬೇಕೆನ್ನುವ ಬೇಡಿಕೆ ಹಿಂದಿನಿಂದಲೂ ಇತ್ತು.
ಈ ಹಿನ್ನೆಲೆಯಲ್ಲಿ ರಾಮನಗರ ನಗರಸಭೆಯು ಬೆಂಗಳೂರು&ಮೈಸೂರು ರಸ್ತೆಯ ಗಾಂಧಿನಗರ ವೃತ್ತದ ಎದುರಿಗೆ ಫುಡ್ ಸ್ಟ್ರೀಟ್ ನಿಮಾರ್ಣ ಮಾಡುತ್ತಿದೆ. ಸುಮಾರು 45.90 ಲಕ್ಷ ರೂ.ವೆಚ್ಚದಲ್ಲಿ 50 ಆಹಾರ ಮಳಿಗೆಗಳನ್ನು ಒಳಗೊಂಡ ಆಹಾರ ಬೀದಿ ಕಾಮಗಾರಿಗೆ ಈಗಾಗಲೇ ಚಾಲನೆ ದೊರೆತಿದೆ.
ರುಚಿ ನೀಡುತ್ತಿವೆ: ನಗರದ ಐಜೂರು ವೃತ್ತದ ಆಸುಪಾಸು, ರೋಟರಿ ವೃತ್ತ, ಗಾಂಧಿನಗರ, ಆಂಜನೇಯ ಗೋಪುರ ವೃತ್ತ, ಜೂನಿಯರ್ ಕಾಲೇಜು ರಸ್ತೆ, ಮಾಗಡಿ ರಸ್ತೆ ಸೇರಿ ಮುಖ್ಯರಸ್ತೆಗಳಿಂದಿಡಿದು ಸಣ್ಣ ರಸ್ತೆಗಳಲ್ಲಿ ಕೆಲವೆಡೆ ಆಟೊ ಹಾಗೂ ತಳ್ಳುಗಾಡಿಗಳಲ್ಲಿ ಸಂಜೆ ಸಸ್ಯಾಹಾರ ಮತ್ತು ಮಾಂಸಾಹಾರದ ವೈವಿಧ್ಯಮಯ ತಿನಿಸುಗಳನ್ನು ಮಾರಾಟ ಮಾಡುತ್ತಾರೆ.
ರಸ್ತೆ ಬದಿ ಆಹಾರ ಮಳಿಗೆಗಳಲ್ಲಿ ದೊಡ್ಡ ಹೋಟೆಲ್ಗಳಲ್ಲಿರುವಂತೆ ಎ.ಸಿ, ಫ್ಯಾನ್, ಕೂರಲು ಒಳ್ಳೆಯ ಕುರ್ಚಿ ಅಥವಾ ಸೋಫಾಗಳನ್ನು ಒಳಗೊಂಡ ಅತ್ಯುತ್ತಮ ವಾತಾವರಣ ಇಲ್ಲದಿದ್ದರೂ, ಬೀದಿ ತಿನಿಸು ಪ್ರಿಯರ ಬಾಯಿರುಚಿ ತಣಿಸುವಲ್ಲಿ ಯಶಸ್ವಿಯಾಗಿವೆ. ಕಡಿಮೆ ದರದಲ್ಲಿ ಹಸಿದವರ ಹೊಟ್ಟೆ ತುಂಬಿಸುತ್ತವೆ. ಹಾಗಾಗಿಯೇ, ಕಾರುಗಳಲ್ಲಿ ಇಲ್ಲಿಗೆ ಬಂದು ಚಾಟ್ಸ್ ಸೇರಿದಂತೆ ಇತರ ಆಹಾರ ಸೇವಿಸುವವರನ್ನು ಕಾಣುತ್ತೇವೆ.
ಬೀದಿಬದಿಯಲ್ಲಿ ಚಾಟ್ಸ್ ಮತ್ತು ಆಹಾರ ವ್ಯಾಪಾರ ಮಾಡುವವರಿಗೆ ಹಾಗೂ ಅಲ್ಲಿನ ಆಹಾರ ಮತ್ತು ತಿನಿಸುಗಳನ್ನು ಸ್ವಾಧಿಸುವವರಿಗೆ ಒಂದೆಡೆ ನೆಲೆ ಕಲ್ಪಿಸುವ ದೃಷ್ಟಿಯಿಂದ ನಗರಸಭೆ ತನ್ನ 2025 -26ನೇ ಬಜೆಟ್ನಲ್ಲಿ ಫುಡ್ ಸ್ಟ್ರೀಟ್ ಸ್ಥಾಪಿಸುವ ಘೋಷಣೆಯನ್ನು ನಗರಸಭೆ ಮಾಡಿತ್ತು. ಹಾಸನ ಮತ್ತು ಶಿವಮೊಗ್ಗ ನಗರಗಳಲ್ಲಿ ಫುಡ್ ಸ್ಟ್ರೀಟ್ಗಳು ಹೆಸರುಗಳಿಸಿವೆ. ಇಲ್ಲಿ ನೂರಾರು ಮಳಿಗೆಗಳು ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳು ಪಾಕ ಪ್ರಿಯರ ಮೆಚ್ಚುಗೆಯನ್ನು ಪಡೆದುಕೊಂಡಿವೆ. ಈ ನಗರಗಳಲ್ಲಿ ಈಗಾಗಲೇ ನಿರ್ಮಿಸಿರುವ ಆಹಾರ ಮಳಿಗೆಗಳ ಮಾದರಿಯಲ್ಲೇ ರಾಮನಗರದಲ್ಲೂ ಮೂರು ತಿಂಗಳಲ್ಲಿ ಆಹಾರ ಮಳಿಗೆಗಳು ನಿಮಾರ್ಣವಾಗಲಿವೆ. ಮಳೆ ಮತ್ತು ಗಾಳಿಯ ರಕ್ಷಣೆಯೊಂದಿಗೆ ವ್ಯಾಪಾರಿಗಳು ಸಂಜೆಯಿಂದ ರಾತ್ರಿವರೆಗೆ ಇಲ್ಲಿ ಚಾಟ್ಸ್ ಮತ್ತು ಆಹಾರ ಮಾರಾಟ ಮಾಡಬಹುದು.
ಸುಮಾರು 45.90 ಲಕ್ಷ ರೂ.ವೆಚ್ಚದ ಫುಡ್ ಸ್ಟ್ರೀಟ್ ಯೋಜನೆಯಡಿ ಸುಮಾರು 50 ಅಂಗಡಿಗಳು ನಿಮಾರ್ಣವಾಗಲಿವೆ. ನಗರಸಭೆಯು ಟೆಂಡರ್ ಮೂಲಕ ಮಳಿಗೆಗಳನ್ನು ಹಂಚಿಕೆ ಮಾಡಲಿದೆ. ಈಗಾಗಲೇ ನಗರದ ರೋಟರಿ ವೃತ್ತ, ಜೂನಿಯರ್ ಕಾಲೇಜು ವೃತ್ತ, ಬಸ್ ನಿಲ್ದಾಣ ವೃತ್ತ ಸೇರಿದಂತೆ ವಿವಿಧೆಡೆ ರಸ್ತೆ ಬದಿ ವಿವಿಧ ರೀತಿಯ ಆಹಾರ ಮಾಡುವವರು ಟೆಂಡರ್ನಲ್ಲಿ ಭಾಗವಹಿಸಿ ಅಂಗಡಿ ಪಡೆದು ವ್ಯಾಪಾರ ಮಾಡಬಹುದು. ಆಹಾರ ಮಳಿಗೆಗಳ ಜಾಗದಲ್ಲಿ ಸ್ವಚ್ಛತೆ ಸೇರಿದಂತೆ ಇತರ ನಿರ್ವಹಣಾ ಕೆಲಸಗಳನ್ನು ನಗರಸಭೆ ಮಾಡಲಿದೆ.
ಫುಡ್ ಸ್ಟ್ರೀಟ್ ಆರಂಭಿಸುವಂತೆ ಹಿಂದಿನಿಂದಲೂ ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ನಗರಸಭೆ ಕಳೆದ ಬಜೆಟ್ನಲ್ಲಿ ಇದಕ್ಕಾಗಿ ಅನುಧಾನ ಮೀಸಲಿಡಲಾಗಿತ್ತು. ಈಗ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಶೀಘ್ರವೇ ಟೆಂಟರ್ ಕರೆದು ಮಳಿಗೆ ಹಂಚಿಕೆ ಮಾಡಲಾಗುವುದು.
> ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ
ಇಲ್ಲಿ ಮಾಡಬಾರದಿತ್ತು
ನಗರಸಭೆಯಿಂದ ಫುಡ್ಸ್ಟ್ರೀಟ್ ನಿರ್ಮಾಣ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆಯಾದರೂ, ಇದನ್ನು ನಿರ್ಮಾಣ ಮಾಡಲಾಗುತ್ತಿರುವ ಜಾಗದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಸ್ಮಶಾನದ ಕಾಂಪೌಂಡ್ಗೆ ಹೊಂದಿಕೊಂಡಂತೆ ಫುಡ್ ಸ್ಟ್ರೀಟ್ ನಿರ್ಮಾಣ ಎಷ್ಟು ಸರಿ. ಇದರಿಂದ ಕುಟುಂಬ ಸಮೇತರಾಗಿ ಇಲ್ಲಿಗೆ ಬಂದು ಬೀದಿ ಬದಿಯ ಆಹಾರ ಸೇವನೆ ಕಷ್ಟವಾಗುತ್ತದೆ. ಬೇರೆ ಕಡೆ ನಿರ್ಮಾಣ ಮಾಡಿದ್ದರೆ ಒಳ್ಳೆಯದಾಗುತಿತ್ತು ಎನ್ನುತ್ತಾರೆ ನಗರ ವಾಸಿಗಳು.