ಕೆಂಪಾಪುರ ಗ್ರಾಮದ ರೈತರ ತೋಟ, ಹೊಲ ಗದ್ದೆಗಳಿಗೆ ಅಳವಡಿಸಿರುವ ಮೋಟಾರ್ ಪಂಪ್ಸೆಟ್ಗಳ ಕೇಬಲ್ ಕಳ್ಳತನವಾಗಿರುವುದು.
ಕುದೂರು: ಗ್ರಾಮೀಣ ಭಾಗಗಳಲ್ಲಿ ಕೃಷಿ ಪಂಪ್ಸೆಟ್ಗಳಿಗೆ ಅಳವಡಿಸಿರುವ ವಿದ್ಯುತ್ ಕೇಬಲ್ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ರೈತರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ರಾತ್ರಿ ವೇಳೆ ಹೊಲಗಳಿಗೆ ನುಗ್ಗುತ್ತಿರುವ ಕಳ್ಳರು ಕೇಬಲ್ಗಳನ್ನು ಕತ್ತರಿಸಿ ಕಳವು ಮಾಡುತ್ತಿರುವುದರಿಂದ ರೈತರು ಸಾವಿರಾರು ರೂ.ನಷ್ಟ ಅನುಭವಿಸುತ್ತಿದ್ದಾರೆ.
ಹೌದು... ಇತ್ತೀಚೆಗೆ ಹೋಬಳಿಯ ಹಲವು ಗ್ರಾಮಗಳಲ್ಲಿ ಪಂಪ್ ಸೆಟ್ಗಳ ಕೇಬಲ್ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ತಾಮ್ರದ ತಂತಿಗೆ ಉತ್ತಮ ಬೆಲೆ ಇರುವುದರಿಂದ ಕೇಬಲ್ ಕಳ್ಳತನ ಹೆಚ್ಚುತ್ತಿದೆ. ಕೇಬಲ್ ಕಳ್ಳತನದಿಂದ ಪಂಪ್ಸೆಟ್ಗಳು ಕಾರ್ಯನಿರ್ವಹಿಸದೆ ನೀರಾವರಿ ಸ್ಥಗಿತಗೊಳ್ಳುತ್ತಿದೆ. ಇದರಿಂದ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ನೀರುಣಿಸಲು ಸಾಧ್ಯವಾಗದೆ ಬೆಳೆ ಹಾನಿಯಾಗುವ ಭೀತಿ ಎದುರಾಗಿದೆ. ಈಗಾಗಲೇ ಮಳೆ ಕೊರತೆ, ಹೆಚ್ಚಿದ ಕೃಷಿ ವೆಚ್ಚ ಮತ್ತು ಕಾರ್ಮಿಕ ಸಮಸ್ಯೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಈ ಕಳವು ಪ್ರಕರಣಗಳು ಮತ್ತಷ್ಟು ಆರ್ಥಿಕ ಹೊರೆ ತಂದೊಡ್ಡಿವೆ.
ಕೇಬಲ್ ಕಳ್ಳತನ ತಡೆಯಲು ಪೊಲೀಸ್ ಹಾಗೂ ವಿದ್ಯುತ್ ಇಲಾಖೆ ಸಮನ್ವಯದಿಂದ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸುವ ಜತೆಗೆ ಹೊಲಗಳ ಸುತ್ತಮುತ್ತ ಪೊಲೀಸ್ ನಿಗಾ ಬಲಪಡಿಸಬೇಕು ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶ್ರೀ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
"
ಕೆಂಪಾಪುರ ಗ್ರಾಮದಲ್ಲಿನ ತೋಟಗಳಿಗೆ ರಾತ್ರೋರಾತ್ರಿ ಕಳ್ಳರು ನುಗ್ಗಿ ಲಾಂತರ ರೂಪಾಯಿ ಮೌಲ್ಯದ ಪಂಪ್ ಸೆಟ್ಗಳಿಗೆ ಅಳವಡಿಸಿರುವ ವಿದ್ಯುತ್ ತಂತಿ ಕದಿಯುತ್ತಿದಾದಾರೆ. ಪೊಲೀಸರು ಕೂಡಲೇ ರಾತ್ರಿ ವೇಳೆ ಬೀಟ್ ವ್ಯವಸ್ಥೆ ಹೆಚ್ಚಿಸಿ ಕ್ರಮ ಕೈಗೊಳ್ಳಬೇಕು.
— > ಸಾಬೀರ್ ಪಾಷಾ, ಹುಲಿಕಲ್ ಗ್ರಾಪಂ ಮಾಜಿ ಸದಸ್ಯ, ಕೆಂಪಾಪುರ.
"
ರೈತರ ಜಮೀನುಗಳಲ್ಲಿ ನಡೆಯುತ್ತಿರುವ ಕಳ್ಳತನ ಇಲಾಖೆಯ ಗಮನಕ್ಕೆ ಬಂದಿದೆ. ಶ್ರೀವೇ ಬೀಟ್ ವ್ಯವಸ್ಥೆ ಹೆಚ್ಚಿಸಿ ಕಳ್ಳರನ್ನು ಸೆರೆಹಿಡಿಯಲಾಗುವುದು.
— > ಚಂದ್ರಶೇಖರ್, ಪೊಲೀಸ್ ಇನ್ಸ್ಪೆಕ್ಟರ್, ಕುದೂರು ಪೊಲೀಸ್ ಠಾಣೆ.