ರಾಮನಗರದ ಜಿಬಿಡಿಎ ಕಚೇರಿಯಲ್ಲಿ ಬಿಡದಿ ಸಮಗ್ರ ಉಪನಗರದ ಯೋಜನೆ ವಿರೋಧವಾಗಿರುವ ರೈತರು ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು. ಮುಖಂಡ ಪ್ರಕಾಶ್, ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜು ಮುಂತಾದವರು ಇದ್ದರು 
ಬೆಂಗಳೂರು ದಕ್ಷಿಣ

ನಮಗೆ ಟೌನ್ ಷಿಪ್ ಬೇಡ ರೈತರ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಾಲಕೃಷ್ಣಗೆ ಮನವಿ ಸಲ್ಲಿಸಿದ ರೈತರು
  • ಯೋಜನೆ ಕೈ ಬಿಡಿ
  • ಮನವಿಗೆ ಸ್ಪಂದಿಸದಿದ್ದರೆ ಕ್ರಾಂತಿಗೂ ಸಿದ್ದ
ರಾಮನಗರ : ಗ್ರೇಟರ್ ಬೆಂಗಳೂರು ಸಮಗ್ರ ಉಪನಗರದ ಯೋಜನೆ ಕೈ ಬಿಡಬೇಕೆಂಬ ನಮ್ಮ ಬೇಡಿಕೆಯಲ್ಲಿ ಯಾವ ಬದಲಾವಣೆ ಇಲ್ಲ ಎಂದು ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಭೂ ಹಿತರಕ್ಷಣಾ ಸಮಿತಿ ಮುಖಂಡ ಪ್ರಕಾಶ್ ತಿಳಿಸಿದರು.
ನಗರದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಡಿಎ) ಕಚೇರಿಯಲ್ಲಿ ಬುಧವಾರ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರ ಜೊತೆ ನಡೆದ ಸಭೆ ನಂತರ ಸುದ್ಧಿಗಾರರಜೊತೆ ಮಾತನಾಡಿದರು.
ಫಲವತ್ತಾದ ಕೃಷಿ ಭೂಮಿಯಲ್ಲಿ ಟೌನ್‌ಶಿಪ್ ಬೇಡವೆಂದು ಒಂದೂವರೆ ವರ್ಷದಿಂದ ಹೋರಾಟ ನಡೆಸುತ್ತಿದ್ದೇವೆ. ನಮ್ಮ ಈ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇಂದು ನಡೆದ ಸಭೆಯಲ್ಲೂ ಯೋಜನೆ ಕೈ ಬಿಡಿ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಅವರನ್ನು ಒತ್ತಾಯಿಸಿದ್ದೇವೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು ಹಾಗೂ ಅಲ್ಲಿಯವರೆಗೆ ಯೋಜನಾ ಪ್ರದೇಶದಲ್ಲಿ ಜಂಟಿ ಅಳತೆ ಪ್ರಮಾಣೀಕರಣ (ಜೆಎಂಸಿ) ಕೆಲಸ ಮಾಡಬಾರದು ಎಂದು ಮನವಿ ಮಾಡಿದ್ದೇವೆ.
ಅದನ್ನು ಮೀರಿಯೂ ಏನಾದರೂ ಜಂಟಿ ಅಳತೆ ಮತ್ತು ಹಣ ಬಿಡುಗಡೆ ಮಾಡಬಾರದು. ಒಂದು ವೇಳೆ ನಮ್ಮ ಮನವಿಗೆ ಸ್ಪಂಧಿಸದೇ ಮುಂದುವರೆದರೆ ಶಾಂತಿಯುತವಾಗಿರುವ ನಮ್ಮ ಹೋರಾಟ ಕ್ರಾಂತಿಗೆ ತಿರುಗುತ್ತದೆ. ಆಗ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾದರೆ ನಾವು ಹೊಣೆಗಾರರಲ್ಲ ಎಂದು ಎಚ್ಚರಿಸಿದರು.
ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಭೂ ಹಿತರಕ್ಷಣಾ ಸಂಘದ ಅಧ್ಯಕ್ಷ ರಾಮಯ್ಯ, ರೈತ ಮುಂಖಂಡರಾದ ಅಶ್ವತ್, ಶಿವಣ್ಣ, ಮಂಜುನಾಥ್, ಸುಮಾ, ಜಯಮ್ಮ, ಸುಮಿತ್ರಮ್ಮ, ಹನುಮಂತು ಮುಂತಾದವರಿದ್ದರು.