ಮಾಗಡಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಪಂಪ್ಸೆಟ್ಗಳ ಕೇಬಲ್ ಕಳ್ಳತನ ಮಾಡುತ್ತಿದ್ದ ದಂಡಿನಪಾಳ್ಯದ ಚಂದ್ರು (38) ಎಂಬಾತನನ್ನು ಸೋಮವಾರ ತಡರಾತ್ರಿ ಕದ್ದ ಮಾಲು ಸಮೇತ ಹಿಡಿದ ರೈತರು, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೆಲ ದಿನಗಳಿಂದ ತಾಲೂಕಿನ ಚಕ್ರಬಾವಿ, ಕೋರಮಂಗಲ, ಮರಳು&ದೇವನಪುರ, ಪೂಜಾರಿಪಾಳ್ಯ, ಕೊಟ್ಟಗಾರಹಳ್ಳಿ, ದಂಡಿಗೆಪುರ ಹಾಗೂ ಮತ್ತಿಕೆರೆ ಸುತ್ತಮುತ್ತಲ ಗ್ರಾಮಗಳ ಜಮೀನುಗಳಲ್ಲಿ ಸರಣಿ ಕೇಬಲ್ ಕಳ್ಳತನ ಪ್ರಕರಣಗಳು ಜರುಗಿದ್ದವು. ರಾತ್ರಿ ವೇಳೆ ಬೋರ್ವೆಲ್ಗಳ ತಾಮ್ರದ ಕೇಬಲ್ ಕತ್ತರಿಸಿ ಪರಾರಿಯಾಗುತ್ತಿದ್ದ ಕಳ್ಳನಿಗಾಗಿ ರೈತರು ನಿಗಾ ವಹಿಸಿದ್ದರು.
ಸೋಮವಾರ ರಾತ್ರಿ 2ರ ಸುಮಾರಿನಲ್ಲಿ ರಾಮನಗರ ಮುಖ್ಯರಸ್ತೆಯ ಕೊಟ್ಟಗಾರಹಳ್ಳಿ ಬಳಿ ಆರೋಪಿ ಚಂದ್ರು ಕೇಬಲ್ ಕಳವು ಮಾಡುತ್ತಿರುವುದನ್ನು ರೈತರು ಗಮನಿಸಿದ್ದಾರೆ. ತಣ ಆತನನ್ನು ಬೆನ್ನಟ್ಟಿ, ಕದ್ದ ಮಾಲಿನೊಂದಿಗೆ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.