ಬೆಳೆ ಕಟಾವಿಗೆ ಅವಕಾಶ ನೀಡುವಂತೆ ರೈತ ಮುಖಂಡರಾದ ಜಗದಾಪುರ ರಾಮೇಗೌಡ, ವಿರುಪಾಪುರ ರಮೇಶ್, ಕೋದಂಡರಾಮು, ಕೃಷ್ಣ ಹಾಗೂ ವಿವಾದಿತ ಜಮೀನಿನಲ್ಲಿ ಭತ್ತ ಹಾಕಿರುವ ರೈತರು ಪ್ರತಿಭಟಿಸಿದರು.
ಭತ್ತ ಕಟಾವಿಗೆ ಅವಕಾಶ ನೀಡಲಿಲ್ಲವೆಂದು ಆತ್ಮಹತ್ಯೆಗೆ ಯತ್ನ
ಚನ್ನಪಟ್ಟಣ: ಜಮೀನು ವಿವಾದದ ಹಿನ್ನೆಲೆಯಲ್ಲಿ ಬೆಳೆ ಕಟಾವಿಗೆ ಅವಕಾಶ ನೀಡಲಿಲ್ಲ ಎಂಬ ಅಸಮಾಧಾನದಲ್ಲಿ ರೈತರೊಬ್ಬರು ಶುಕ್ರವಾರ ಮಂಗಳವಾರಪೇಟೆ ಬಳಿ ಪೊಲೀಸರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆ ಸೇರಿದ್ದಾರೆ.
ಮಂಗಳವಾರಪೇಟೆಯ ರೈತ ವಿಶ್ವನಾಥ್ (45) ಆತ್ಮಹತ್ಯೆಗೆ ಯತ್ನಿಸಿದವರು.
ಮಂಗಳವಾರಪೇಟೆಯ ಗದ್ದೆ ಬಯಲಿನಲ್ಲಿ ಹಲವರು ಭತ್ತ ಬೆಳೆದಿದ್ದರು. ಈ ಪೈಕಿ ವಿಶ್ವನಾಥ್ ಸಹ ಒಂದು ಎಕರೆಯಲ್ಲಿ ಬೆಳೆದಿದ್ದರು. ಆದರೆ, ಕೆಲ ದಿನಗಳಿಂದ ಈ ಜಮೀನುಗಳ ಮೇಲೆ ವಿವಾದ ಆರಂಭವಾಗಿದ್ದು, ಜಮೀನು ನನಗೆ ಸೇರಿದ್ದು ಎಂದು ಮಂಗಳವಾರಪೇಟೆಯ ಸಿದ್ದೇಗೌಡ ಎಂಬುವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಇತ್ಯರ್ಥವಾಗಿಲ್ಲ.
ಈ ನಡುವೆಯೂ ವಿವಾದಿತ ಜಮೀನಿನಲ್ಲಿನ ಭತ್ತದ ಕಟಾವಿಗೆ ಶುಕ್ರವಾರ ಬೆಳಗ್ಗೆ ಕಾರ್ಮಿಕರೊಂದಿಗೆ ವಿಶ್ವನಾಥ್ ಗದ್ದೆಗೆ ಆಗಮಿಸಿದ್ದ. ಇದೇ ವೇಳೆ ಸಿದ್ದೇಗೌಡ ಬೆಂಬಲಿಗರೂ ಸ್ಥಳಕ್ಕೆ ಬಂದು ಭತ್ತದ ಕೊಯ್ಲಿಗೆ ವಿರೋಧಿಸಿದ್ದಾರೆ. ಇದರಿಂದ ಎರಡು ಗುಂಪಿನ ನಡುವೆ ಗಲಾಟೆ ಶುರುವಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಇಬ್ಬರ ನಡುವೆ ಸಂಧಾನಕ್ಕೆ ಪ್ರಯತ್ನಿಸಿದ್ದಾರೆ. ಆದರೆ, ಇದಕ್ಕೆ ಇಬ್ಬರೂ ಒಪ್ಪಿಲ್ಲ. ಈ ನಡುವೆಯೂ ವಿಶ್ವನಾಥ್ ಭತ್ತದ ಕಟಾವಿಗೆ ಮುಂದಾಗಿದ್ದು, ಅವಕಾಶ ಸಿಗದಿದ್ದರಿಂದ ಪೊಲೀಸರ ಎದುರಿಗೆ ವಿಷ ಸೇವಿಸಿದ್ದಾರೆ.
ವಿಶ್ವನಾಥ್ ಅವರನ್ನು ಸ್ಥಳಿಯರ ಸಹಾಯದಿಂದ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಆಸ್ಪತ್ರೆಗೆ ಕಳುಹಿಸಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರೈತ ಮುಖಂಡರಾದ ಜಗದಾಪುರ ರಾಮೇಗೌಡ, ವಿರುಪಾಪುರ ರಮೇಶ್, ಕೋದಂಡರಾಮು,
ಕೃಷ್ಣ ಹಾಗೂ ವಿವಾದಿತ ಜಮೀನಿನಲ್ಲಿ ಭತ್ತ ಹಾಕಿರುವ ರೈತರು ಸ್ಥಳದಲ್ಲಿದ್ದರು.