ಪ್ರಮುಖ ಮುಖ್ಯಾಂಶಗಳು
ರಾಮನಗರ: ನಗರದ ಜಿಗೇನಹಳ್ಳಿಯ ಹೊಸ ಬಡಾವಣೆಯ ನಿರ್ಮಾಣ ಹಂತದ ಮನೆಯಲ್ಲಿ ಸೋಮವಾರ ಸಂಜೆ ನಕಲಿ ನೋಟು ತಯಾರಿಕೆ ಜಾಲ ಬೇಧಿಸಿರುವ ಐಜೂರು ಠಾಣೆ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ. ಜಾಲದಲ್ಲಿ ಹೊರ ರಾಜ್ಯದವರ ಜೊತೆಗೆ ಸ್ಥಳೀಯರು ಸಹ ಭಾಗಿಯಾಗಿದ್ದು, ಪೊಲೀಸರು ಸ್ಥಳದಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಮನೆ ಮಾಲೀಕ ಸಂತೋಷ್, ಸಂಪತ್, ಗೋವಿಂದಾರಾಜ್, ರೇಣುಕಾರಾಜ್, ರಾಜೇಶ್, ಶಿವರಾಜ್ ಮತ್ತು ಸತೀಶ್ ಎಂಬುವವರನ್ನ ಬಂಧನ ಮಾಡಲಾಗಿದೆ. ಆರೋಪಿಗಳಿಂದ ನಕಲಿ ನೋಟು ತಯಾರಿಸಲು ಬಳಕೆ ಮಾಡುವ ಪೇಪರ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಸಂತೋಷ್ ಮನೆಯಲ್ಲಿ ನಡೆಯುತ್ತಿದ್ದ ಕೃತ್ಯ ಕುರಿತು ಸಿಕ್ಕ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಮಾಲು ಸಮೇತ ಸಿಕ್ಕಿ ಬಿದ್ದಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪತ್ ಜಾಲದ ಸೂತ್ರಧಾರನಾಗಿದ್ದಾನೆ. ಕಮಿಷನ್ ಆಸೆಗಾಗಿ ಸಂತೋಷ್ ತನ್ನ ಮನೆಯನ್ನು ದಂಧೆಗೆ ಕೊಟ್ಟಿದ್ದ. ಕೃತ್ಯದ ಕುರಿತು ಸಿಕ್ಕ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಮಾಲು ಸಮೇತ ಸಿಕ್ಕಿ ಬಿದ್ದಿದ್ದಾರೆ ಎಂದರು.
ಬಿಳಿ ಪೇಪರ್ ನ ಬಂಡಲ್ ಗೆ ಕೆಮಿಕಲ್ ಲೇಪಿಸಿ, ಅದನ್ನು ನೋಟಿನ ಅಳತೆಗೆ ಕಟ್ ಮಾಡಿ ಒದಗಿಸಿದ್ದಾರೆ. ಒಟ್ಟು ₹5 ಲಕ್ಷ ಮೌಲ್ಯದ ನಕಲಿ ನೋಟಿಗೆ ಇಲ್ಲಿ ಪೇಪರ್ ರೆಡಿ ಮಾಡಲಾಗ್ತಿತ್ತು.
ಇಲ್ಲಿ ತಯಾರಾದ ಪೇಪರ್ ಗಳನ್ನ ಬೇರೆಕಡೆಗೆ ರವಾನೆ ಮಾಡಿ, ಅಲ್ಲಿ ಪೂರ್ಣ ಪ್ರಮಾಣದ ನಕಲಿ ನೋಟ್ ತಯಾರಿಸಲಾಗುತ್ತಿತ್ತು. ಜಾಲದ ಹಿಂದೆ ಮತ್ತಷ್ಟು ಜನ ಭಾಗಿಯಾಗಿರುವ ಸಾಧ್ಯತೆ ಇದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.