ಹಾರೋಹಳ್ಳಿ ಪಟ್ಟಣ ಪಂಚಾಯತಿ ಕಚೇರಿ 
ಬೆಂಗಳೂರು ದಕ್ಷಿಣ

ಪುರಸಭೆಯಾದರೂ ಮೇಲ್ದರ್ಜೆಗೇರದ ಬದುಕು

ಪ್ರಮುಖ ಮುಖ್ಯಾಂಶಗಳು

  • ಹಾರೋಹಳ್ಳಿಯಲ್ಲಿ ಸಮಸ್ಯೆಗಳ ತಾಂಡವ
  • ಅಧಿಕಾರಿಗಳದೇ ದರ್ಬಾರ್
ರಾಮನಗರ
ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿದ್ದ ಹಾರೋಹಳ್ಳಿಗೆ ಮೂರೇ ವರ್ಷಗಳಲ್ಲಿ ಪುರಸಭೆ ಭಾಗ್ಯವೂ ಬಂದಿದೆ. ಆದರೆ, ಹಾರೋಹಳ್ಳಿ ಪಟ್ಟಣಿಗರ ಬದುಕು ಮಾತ್ರ ಈವರೆಗೂ ಮೇಲ್ದರ್ಜೆಗೆ ಏರುತ್ತಲೇ ಇಲ್ಲ.
ಕನಕಪುರದಿಂದ ಬೇರ್ಪಟ್ಟ ಹೊಸ ಹಾರೋಹಳ್ಳಿ ತಾಲೂಕು ಘೋಷಣೆ ಮಾಡಿದ ಸರ್ಕಾರ ನಂತರ ಪಟ್ಟಣ ಪಂಚಾಯಿತಿ ಪಟ್ಟವನ್ನೂ ಕಟ್ಟಿತು. ಗ್ರಾಪಂ ಕಟ್ಟಡದಲ್ಲಿಯೇ ಪಪಂ ಕಚೇರಿಯೂ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಆದರೆ ಇಲ್ಲಿಗೆ ಬೇಕಾದ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮಾತ್ರ ಪೌರಾಡಳಿತ ಇಲಾಖೆ ವಿಫಲವಾಗಿದೆ.
ಅಧಿಕಾರಗಳದೇ ದರ್ಬಾರ್
ಹಾರೋಹಳ್ಳಿ ಗ್ರಾಮ ಪಂಚಾಯಿತಿಯನ್ನು ಪಪಂ ಆಗಿ ಮೇಲ್ದರ್ಜೆಗೆ ಏರಿಸಿದ ವೇಳೆ ಟಿ.ಹೊಸಹಳ್ಳಿ, ಕೊಳ್ಳಿಗನಹಳ್ಳಿ, ಕಗ್ಗಲಹಳ್ಳಿ ಮತ್ತು ದ್ಯಾವಸಂದ್ರ ಗ್ರಾಪಂಗಳ ಕೆಲ ಗ್ರಾಮಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಲಾಗಿತ್ತು. ಅಂದಿನಿಂದ ಈವರೆಗೂ ಗ್ರಾಪಂಗಳಿಗೆ ಚುನಾವಣೆ ನಡೆದಿಲ್ಲ. ಇತ್ತ ಪಟ್ಟಣ ಪಂಚಾಯಿತಿಗೂ ಚುನಾವಣೆ ನಡೆಯಲೇ ಇಲ್ಲ. ಇಲ್ಲಿವರೆಗೂ 4 ಗ್ರಾಪಂಗಳು ಮತ್ತು ಹಾರೋಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರಿಗಳ ದರ್ಬಾರ್ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಲೇ ಇದೆ.

ವಾರ್ಡ್ ನಿಗದಿ ಆಗಿಲ್ಲ

ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದೇ ಇಲ್ಲ ಎನ್ನುವುದು ಒಂದು ಪ್ರಶ್ನೆಯಾದರೆ, ಇದಕ್ಕಿಂತಲೂ ಮುಂಚಿತವಾಗಿ ವಾರ್ಡ್ಗಳನ್ನು ಏಕೆ ನಿಗದಿಪಡಿಸಿಲ್ಲ ಎನ್ನುವ ದೊಡ್ಡ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಪಟ್ಟಣ ಪಂಚಾಯಿತಿಗಾಗಿ 5 ವರ್ಷ ಆಗಿದ್ದರೂ ಈವರೆಗೂ ವಾರ್ಡ್ ನಿಗದಿಪಡಿಸದೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ವಾರ್ಡ್ ನಿಗದಿ ಆಗದ ಹೊರತು ಚುನಾವಣೆ ನಡೆಸಲು ಸಾಧ್ಯವಿಲ್ಲ, ಪುರಪಿತೃಗಳು ಇಲ್ಲದ ಸ್ಥಳೀಯ ಸಂಸ್ಥೆಯಲ್ಲಿ ಸಾರ್ವಜನಿಕರು ಮೂಕ ಪ್ರೇಕ್ಷಕರಷ್ಟೇ ಆಗಿದ್ಧಾರೆ. ಈಗ ಪುರಸಭೆ ಆಗಿರುವ ಕಾರಣ ಚುನಾವಣೆ ನಡೆಯುವುದು ಈ ಬಾರಿಯೂ ಅನುಮಾನ ಎನ್ನುವಂತಾಗಿದೆ.

ಇಲ್ಲಿವೆ ನೂರೆಂಟು ಸಮಸ್ಯೆ

ಹಾರೋಹಳ್ಳಿ ಪಟ್ಟಣದಲ್ಲಿ ಸಾಕಷ್ಟು ಸಮಸ್ಯೆ ತಾಂಡವವಾಡುತ್ತಿವೆ. ಕುಡಿಯುವ ನೀರು, ರಸ್ತೆ ಸಮಸ್ಯೆ, ಸ್ವಚ್ಛತೆ ಹೀಗೆ ಸಾಕಷ್ಟು ಸಮಸ್ಯೆಗಳು ತಾಂಡವವಾಡುತ್ತಿವೆ. ಕಾವೇರಿ ನೀರು ಪೂರೈಕೆಗೆ ಕ್ರಮವಹಿಸಲಾಗಿದೆಯಾದರೂ, ಪಟ್ಟಣ ಪಂಚಾಯಿತಿ ಪೂರೈಕೆ ಶುಲ್ಕ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ. ಇದರಿಂದಾಗಿ ನೀರು ಪೂರೈಕೆಯಲ್ಲಿಯೂ ವ್ಯತ್ಯಯವಾಗುತ್ತಲೇ ಇರುತ್ತದೆ. ಇನ್ನು ಪಟ್ಟಣದಲ್ಲಿ ಈವರೆಗೂ ಒಂದೇ ಒಂದು ಉದ್ಯಾನವನ ಸಹ ಇಲ್ಲದಿರುವುದು ಪಟ್ಟಣ ವಾಸಿಗಳ ಬೇಸರಕ್ಕೂ ಕಾರಣವಾಗಿದೆ.
ಕೆಡವಿದ್ದಾಯ್ತು, ಮುಂದೆ?
ಕೈಗಾರಿಕಾ ಕೇಂದ್ರವಾಗಿ ಹೆಸರು ಮಾಡಿದ್ದ ಹಾರೋಹಳ್ಳಿಗೆ ತನ್ನದೇ ಆದ ಇತಿಹಾಸವಿದೆ. ಗ್ರಾಮ ಪಂಚಾಯಿತಿ ಹಂತದಲ್ಲಿ ಇದ್ದಾಗಲೇ ನಿರ್ಮಾಣ ಮಾಡಲಾಗಿದ್ದ ಇಲ್ಲಿನ ಅಂಗಡಿ ಮಳಿಗೆಗಳು ಸಾಕಷ್ಟು ಜನರ ಬದುಕು ಕಟ್ಟಿಕೊಟ್ಟಿದ್ದವು. ಹಂಚಿಕೆಯಲ್ಲಿ ತಾರತಮ್ಯ, ಬಾಡಿಗೆ ಪಡೆದವರು ಮತ್ತೊಬ್ಬರಿಗೆ ಬಾಡಿಗೆ ನೀಡಿರುವ ಆರೋಪಗಳು ಕೇಳಿ ಬಂದ ನಂತರ ಹಾಗೂ ಹಳೇ ಅಂಗಡಿ ಮಳಿಗೆಗಳು ಆಗಿದ್ದ ಕಾರಣ ಹೊಸ ಮಳಿಗೆಗಳನ್ನು ನಿರ್ಮಾಣ ಮಾಡಿಕೊಡುತ್ತೇವೆ ಎನ್ನುವ ಭರವಸೆಯೊಂದಿಗೆ ಸುಮಾರು 200ಕ್ಕೂ ಹೆಚ್ಚು ಅಂಗಡಿ ಮಳಿಗೆಗಳನ್ನು ಕೆಡವಲಾಯಿತು. ಹೀಗೆ ಮಾಡಿ ಒಂದು ವರ್ಷ ಕಳೆದರೂ ಇನ್ನೂ ಅಂಗಡಿ ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆಯೂ ಆಗಿಲ್ಲ. ಇಷ್ಟೇ ಅಲ್ಲ, ಅಂಗಡಿ ಪಡೆಯಲು ಮುಂಗಡವಾಗಿ ನೀಡಲಾಗಿದ್ದ ಹಣವನ್ನೂ ಸಹ ವಾಪಸ್ ನೀಡದೇ ಹಾರೋಹಳ್ಳಿ ಪುರಸಭೆ ಕಾಲಾಹರಣ ಮಾಡುತ್ತಿದೆ. ಇದಕ್ಕಾಗಿ ಅಂಗಡಿ ಕಳೆದುಕೊಂಡವರು ಹೋರಾಟ ಮಾಡುತ್ತಿದ್ದರೂ ಈವರೆಗೆ ಯಾವುದೇ ಫಲ ಸಿಕ್ಕಿಲ್ಲ.

ಈಗ ಪುರಸಭೆ

ಪಟ್ಟಣ ಪಂಚಾಯಿತಿಯಾಗಿದ್ದ ಹಾರೋಹಳ್ಳಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಹಾರೋಹಳ್ಳಿ ಪಟ್ಟಣ ವ್ಯಾಪ್ತಿಯೂ ವಿಸ್ತಾರಗೊಳ್ಳುತ್ತಿದೆ. ಪುರಸಭೆಯಾಗಿ ಮೇಲ್ದರ್ಜೆಗೇರಿದ ಪರಿಣಾಮ ಕಗ್ಗಲಹಳ್ಳಿ ಗ್ರಾಪಂ ವ್ಯಾಪ್ತಿಯ ಮುಡೇನಹಳ್ಳಿ, ಕೆಬ್ಬೆದೊಡ್ಡಿ, ಗಬ್ಬಾಡಿ ಕಾವಲ್, ಹೊಸಗಬ್ಬಾಡಿ, ಹಳೆಗಬ್ಬಾಡಿ, ಪರುವಯ್ಯನಪಾಳ್ಯ, ಬಡೇಸಾಬರದೊಡ್ಡಿ, ಹೊಸಕೋಟೆ, ಪಿರಮಿಡ್ ವ್ಯಾಲಿ, ಟಿ.ಹೊಸಹಳ್ಳಿ ಗ್ರಾ.ಪಂ ವ್ಯಾಪ್ತಿಯ ನರಸಿಂಹಯ್ಯನದೊಡ್ಡಿ, ನರಸಿಂಹಯ್ಯನದೊಡ್ಡಿ, ಕೊಳ್ಳಿಗನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಮೇಡಮಾರನಹಳ್ಳಿ, ರಾಮೇಗೌಡನದೊಡ್ಡಿ, ರಾಮಸಾಗರ, ಸಂಬಯ್ಯನದೊಡ್ಡಿ, ದಾಸೇಗೌಡನದೊಡ್ಡಿ, ದ್ಯಾವಸಂದ್ರ ಗ್ರಾ.ಪಂ ವ್ಯಾಪ್ತಿಯ ಭೀಮಸಂದ್ರ, ಅಂಚಿಬಾರೆ, ಚುಳುಕನಕೆರೆ ಕಾವಲ್, ದ್ಯಾವಸಂದ್ರ ಗ್ರಾಮಗಳು ಪುರಸಭೆಗೆ ಸೇರ್ಪಡೆಗೊಂಡಿವೆ.

ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಆಯಿತು, ಈಗ ಪುರಸಭೆಯೂ ಆಗಿದೆ. ಆದರೆ ಇದರಿಂದ ಯಾವುದೇ ಪ್ರಯೋಜನವಂತೂ ಇಲ್ಲಿನ ನಾಗರಿಕರಿಗೆ ಆಗುತ್ತಿಲ್ಲ. ಈಗಿನ ಪುರಸಭೆಯಲ್ಲಿ ಅಧಿಕಾರಿಗಳದೇ ದರ್ಬಾರ್. ಕುಡಿಯುವ ನೀರು ಸೇರಿದಂತೆ ಸಾಕಷ್ಟು ಸಮಸ್ಯೆಗಳು ಹಾರೋಹಳ್ಳಿಯಲ್ಲಿದ್ದು, ನಮ್ಮ ಸಮಸ್ಯೆಗಳಿಗೆ ಇನ್ನಾದರೂ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳು ಮುಕ್ತಿನೀಡಬೇಕು.
| ಶ್ರೀನಿವಾಸ್
ಅಧ್ಯಕ್ಷರು, ನಿವೃತ್ತ ಸರ್ಕಾರಿ ನೌಕರರ ಸಂಘ
ಹಾರೋಹಳ್ಳಿ