ಮಾಗಡಿ ಪುರಸಭೆ. 
ಬೆಂಗಳೂರು ದಕ್ಷಿಣ

ಮಾಗಡಿಯಲ್ಲಿ ಬೊಗಸೆ ನೀರಿಗೂ ತತ್ವಾರ

ಮಾಗಡಿ: ಬಿರು ಬೇಸಿಗೆಯಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು, ಸಾರ್ವಜನಿಕರು ಬೊಗಸೆ ನೀರಿಗೂ ತತ್ತರಿಸುವಂತಾಗಿದೆ.
ಜನರ ದಾಹ ನೀಗಿಸಲು ಪುರಸಭೆ ಅನುದಾನದಡಿ ತಿಂಗಳ ಹಿಂದಷ್ಟೇ 16 ಕೊಳವೆ ಬಾವಿ ಕೊರೆಸಲಾಗಿದೆ. ಇದರಲ್ಲಿ 12 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿದೆಯಾದರೂ ಅವುಗಳಿಗೆ ಇನ್ನೂ ಪಂಪ್​, ಮೋಟಾರು ಅಳವಡಿಸದ ಕಾರಣ ಕೋಟ್ಯಂತರ ರೂ. ವೆಚ್ಚದ ಯೋಜನೆ ಜನರಿಗೆ ಉಪಯುಕ್ತವಾಗದೆ ನನೆೆಗುದಿ ಬಿದ್ದಿದೆ.
ಹಳೇ ಮೋಟಾರ್​ ಅಳವಡಿಸಬೇಕಿತ್ತು!
ಹಾಲಿ ಇರುವ ಬೋರ್​ವೆಲ್​ಗಳನ್ನು ಸಮರ್ಪಕವಾಗಿ ದುರಸ್ತಿ ಮಾಡಿದ್ದರೆ ಈಗಾಗಲೇ ನೀರಿನ ಸಮಸ್ಯೆ ತಕ್ಕಮಟ್ಟಿಗೆ ಹತೋಟಿಗೆ ಬರುತ್ತಿತ್ತು. ಅಷ್ಟೇ ಅಲ್ಲದೆ, ಹಳೆಯ ಬೋರ್​ವೆಲ್​ಗಳಲ್ಲಿದ್ದ ಪಂಪ್​ ಮತ್ತು ಮೋಟಾರುಗಳನ್ನು ತೆಗೆದು, ಹೊಸದಾಗಿ ಕೊರೆದಿರುವ ಬೋರ್​ವೆಲ್​ಗಳಿಗೆ ತಾತ್ಕಾಲಿಕವಾಗಿ ಅಳವಡಿಸಿದ್ದರೆ ಪಟ್ಟಣದ ಜನರಿಗೆ ತಕ್ಷಣಕ್ಕೆ ಕುಡಿಯುವ ನೀರು ಒದಗಿಸಬಹುದಿತ್ತು. ಆದರೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಲಾಂತರ ರೂಪಾಯಿ ಸಾರ್ವಜನಿಕ ಹಣ ಸುಖಾಸುಮ್ಮನೆ ಪೋಲಾದಂತಾಗಿದೆ. ತುರ್ತು ಸಂದರ್ಭದಲ್ಲಿ ಬದಲಿ ಮೋಟಾರು ಅಳವಡಿಸಲು ಪುರಸಭೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪಟ್ಟಣದ ಜನತೆ ದಿನಗಟ್ಟಲೆ ನೀರಿಲ್ಲದೆ ಪರದಾಡುವಂತಾಗಿದೆ.
ಮಂಚನಬೆಲೆ ಯೋಜನೆಯೂ ಹಳ್ಳಕ್ಕೆ
ಪಟ್ಟಣಕ್ಕೆ ನೀರಿನ ಮುಖ್ಯ ಆಸರೆಯಾಗಿರುವ ಮಂಚನಬೆಲೆ ಜಲಾಶಯದ ನೀರಿನ ಪಂಪ್​ ಮತ್ತು ಮೋಟಾರ್​ಗಳು ನಿರಂತರವಾಗಿ ಸುಟ್ಟುಹೋಗುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿದೆ.
ಪ್ರತಿನಿಧಿಗಳಿಲ್ಲದ ಪುರಸಭೆ
ಪುರಸಭೆಗೆ ಸದ್ಯ ಚುನಾಯಿತ ಜನಪ್ರತಿನಿಧಿಗಳಿಲ್ಲದಿರುವ ಕಾರಣ ಅಧಿಕಾರಿಗಳದೇ ಪೂರ್ಣ ಆಡಳಿತವಾಗಿದೆ. ಪರಿಣಾಮ ಹೇಳುವವರು ಇಲ್ಲ, ಕೇಳುವವರೂ ಇಲ್ಲ ಎಂಬಂತಾಗಿದ್ದು, ಸಾರ್ವಜನಿಕರ ಅಹವಾಲುಗಳಿಗೆ ಇಲ್ಲಿ ಕಿಮ್ಮತ್ತೇ ಇಲ್ಲದಂತಾಗಿದೆ ಎಂದು ಪಟ್ಟಣವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳ ಅನುಪಸ್ಥಿತಿಯ ಲಾಭ ಪಡೆಯುತ್ತಿರುವ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶಿಸಿ, ಪಟ್ಟಣದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ಹೊಸ ಕೊಳವೆಬಾವಿಗಳಿಗೆ ಕೂಡಲೇ ಮೋಟಾರು ಅಳವಡಿಸಿ ನೀರಿನ ದಾಹ ನೀಗಿಸಬೇಕು ಎಂದು ಆಗ್ರಹಿಸಿದ್ದಾರೆ.
"

ಶ್ರೀವೇ ಉಪವಿಭಾಗಾಧಿಕಾರಿ, ಶಾಸಕರಿಂದ ರೆಜುಲೇಶನ್​ ಪಡೆದು ಟೆಂಡರ್​ ಕರೆದು, ಹೊಸದಾಗಿ ಕೊರೆಸಿದ ಕೊಳವೆ ಬಾವಿಗಳಿಗೆ ಮೋಟಾರ್​, ಪಂಪ್​ ಅಳವಡಿಸಲಾಗುವುದು.

— > ಪ್ರಶಾಂತ್​ ಶೆಟ್ಟಿ ಪುರಸಭೆ ಇಂಜಿನಿಯರ್​.