ರಾಮನಗರದ ರಾಯರದೊಡ್ಡಿ ಸರ್ಕಲ್ನಲ್ಲಿ ನಗರಸಭೆ ವತಿಯಿಂದ ಬಟ್ಟೆ ಬ್ಯಾಗ್ ವಿತರಣೆ ಎಟಿಎಂ ಯಂತ್ರದ ನಗರಸಭಾ ಅಧ್ಯಕ್ಷ ಕೆ. ಶೇಷಾದ್ರಿ ಚಾಲನೆ ನೀಡಿದರು. ಆಯುಕ್ತ ಡಾ. ಜಯಣ್ಣ, ನಗರಸಭೆ ಉಪಾಧ್ಯೆ ಗಿರಿಜಮ್ಮ ಗುರುವೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಆರೀಫ್, ಎಇಇ ವಿಶ್ವನಾಥ್, ಸುಬ್ರಹ್ಮಣಿ ಇದ್ದರು.
ರಾಮನಗರ: ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾಗಿ ಬಟ್ಟೆ ಬ್ಯಾಗ್ ಸುಲಭವಾಗಿ ಜನರಿಗೆ ಸಿಗುವ ರೀತಿಯಲ್ಲಿ ನಗರಸಭೆ ಕ್ರಮ ಕೈಗೊಂಡಿದೆ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ತಿಳಿಸಿದರು.
ರಾಮನಗರದ ರಾಯರದೊಡ್ಡಿ, ಕೆಂಪೇಗೌಡ ಸರ್ಕಲ್ ಸೇರಿ ನಗರದ ವಿವಿಧೆಡೆ ಎಂಟು ಸ್ಥಳಗಳಲ್ಲಿ ಶುಕ್ರವಾರ ಬಟ್ಟೆ ಬ್ಯಾಗ್ ವೆಂಡಿಂಗ್ ಮೆಷಿನ್ (ಎಟಿಎಂ) ವಿತರಣಾ ಯಂತ್ರಗಳಿಗೆ ಚಾಲನೆ ನೀಡಿ ಮಾತನಾಡಿದರು.
ರಾಮನಗರ ನಗರಸಭೆ ರಾಜ್ಯದಲ್ಲಿಯೇ ವಿಶೇಷವಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಾ ಅದರಲ್ಲಿ ಯಶಶ್ವಿಯಾಗಿಯೂ ಮುನ್ನಡೆಯುತ್ತಾ ಬರುತ್ತಿದೆ. ಜನಸ್ನೇಹಿ, ಪರಿಸರಸ್ನೇಹಿ ಆಡಳಿತ ನೀಡುವುದು ನಮ್ಮೆಲ್ಲರ ಧ್ಯೇಯ. ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಅಭಿಯಾನ ನಡೆಸುತ್ತಿದ್ದೇವೆ. ನಾವು ಪ್ಲಾಸ್ಟಿಕ್ ಬದಲು ಪರ್ಯಾಯವಾಗಿ ಬಟ್ಟೆ ಬ್ಯಾಗ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಬಟ್ಟೆ ಬ್ಯಾಗ್ 10 ರೂ. ನಲ್ಲಿ ಕಾಯಿನ್ ಹಾಕಿದರೆ ಮೆಷಿನ್ನಲ್ಲಿ ಸಿಗುವ ಹಾಗೇ ಮಾಡಲಾಗಿದೆ. ನಗರದ ಆಯ್ದ ಎಂಟು ಸ್ಥಳಗಳಲ್ಲಿ ಮೆಷಿನ್ ಅಳವಡಿಸಲಾಗಿದೆ. ಹುಬ್ಬಳ್ಳಿಯ ಕಂಪನಿಯಿಂದ ಬಟ್ಟೆ ಬ್ಯಾಗ್ ವಿತರಣಾ ಯಂತ್ರಗಳನ್ನು ತರಲಾಗಿದೆ. ಇಂದು ಜನರು ಹೆಚ್ಚಾಗಿ ಬಳಕೆ ಮಾಡುವ ವ್ಯಾಪಾರದ ಜಾಗಗಳಲ್ಲಿ ಬಟ್ಟೆ ಬ್ಯಾಗ್ ವಿತರಣೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು. ಸಾರ್ವಜನಿಕರು ಮತ್ತು ವರ್ತಕರು ಪ್ಲಾಸ್ಟಿಕ್ ಬಳಕೆಗೆ ಇತಿಶ್ರೀ ಹಾಡಬೇಕು. ನಗರಸಭೆ ಜತೆ ಸಾರ್ವಜನಿಕರು ಕೈ ಜೋಡಿಸಿ ಸ್ವಚ್ಛ ರಾಮನಗರದ ಕನಸು ನನಸು ಮಾಡಬೇಕಿದೆ ಎಂದರು.
ಆಯುಕ್ತ ಡಾ. ಜಯಣ್ಣ, ನಗರಸಭೆ ಉಪಾಧ್ಯೆ ಗಿರಿಜಮ್ಮ ಗುರುವೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಆರೀಫ್, ಸದಸ್ಯರಾದ ಮಂಜುನಾಥ್, ಪವಿತ್ರಾ, ಬಿ.ಸಿ. ಪಾರ್ವತಮ್ಮ, ವಿಜಯಕುಮಾರಿ, ಸೋಮಶೇಖರ್, ರಮೇಶ್, ನರಸಿಂಹ, ಮುತ್ತುರಾಜು, ಮಹಾಲ್ಮ, ಮಂಜುಳಾ, ಸಮದ್, ನಾಗಮ್ಮ, ಜಯಲಕ್ಷ$್ಮಮ್ಮ, ಅಜ್ಮತ್ ಎಇಇ ವಿಶ್ವನಾಥ್, ಸುಬ್ರಹ್ಮಣಿ, ನಟರಾಜೇಗೌಡ, ಪವಿತ್ರ, ಮುಖಂಡರಾದ ಶಿವಕುಮಾರಸ್ವಾಮಿ, ಪ್ರವಿಣ್, ಹರೀಶ್, ವೆಂಕಟೇಶ್, ಲ್ಮಕಾಂತ್, ಪುಟ್ಟಣ್ಣ ಇದ್ದರು.
10 ರೂ. ನಾಣ್ಯ ಎಟಿಎಂನಂತೆ ಇರುವ ಮೆಷಿನ್ನಲ್ಲಿ ಹಾಕಿದರೆ ಅದರಿಂದ ಒಂದು ಬಟ್ಟೆ ಬ್ಯಾಗ್ ಬರುತ್ತದೆ. ನಗರಸಭೆ ಮೆಷಿನ್ಗಳನ್ನು ನಗರದ ರಾಯರದೊಡ್ಡಿ, ಕೆಂಪೇಗೌಡ ಸರ್ಕಲ್, ಎಪಿಎಂಸಿ ಆವರಣ, ಐಜೂರು ಸರ್ಕಲ್, ಮಾಗಡಿ ರಸ್ತೆ, ಹಳೇ ಬಸ್ ನಿಲ್ದಾಣ, ಕೋರ್ಟ್ರಸ್ತೆ, ದೇವೇಗೌಡ ಕಾಂಪ್ಲೆಕ್ಸ್ನಲ್ಲಿ ಅಳವಡಿಸಲಾಗಿದೆ. ಬಟ್ಟೆ ಬ್ಯಾಗ್ ಬಳಸಲು ಸುಲಭವಾಗಿದ್ದು, ಜತೆಗೆ 10 ಕೆ.ಜಿ. ತೂಕ ಮನೆಗೆ ಒಯ್ಯಬಹುದು. ಒಂದು ಭಾರಿ ಬಳಕೆಗೆ ಬ್ಯಾಗ್ ಪಡೆದರೆ ಸುಮಾರು 10 ರಿಂದ 15 ಭಾರಿ ಮರು ಬಳಕೆ ಮಾಡಬಹುದು. ಜೇಬಿನಲ್ಲಿ ಇಟ್ಟುಕೊಂಡು ಬರಬಹುದು ತೊಳೆದು ಮತ್ತೆ ಮತ್ತೆ ಬಳಸಬಹುದಾಗಿರುತ್ತದೆ ಎಂದು ಹೇಳುತ್ತಾರೆ ನಗರಸಭೆ ಆಯುಕ್ತ ಡಾ. ಜಯಣ್ಣ.
ನಗರಸಭೆಯಿಂದ ಈಗಾಗಲೇ ಜನರಿಗೆ ಸುಮಾರು 10 ರಿಂದ 15 ಸಾವಿರ ಬಟ್ಟೆ ಬ್ಯಾಗ್ಗಳನ್ನ ವಿತರಿಸಿದ್ದೇವೆ. ಆದರೂ ಪ್ಲಾಸ್ಟಿಕ್ ಬಳಕೆ ನಿಂತಿಲ್ಲ. ಕಡಿಮೆ ದರದಲ್ಲಿ ಉತ್ತಮ ಬ್ಯಾಗ್ ಸಿಗುವ ವ್ಯವಸ್ಥೆ ಮಾಡಲಾಗಿದೆ. ಜನರು ಪ್ಲಾಸ್ಟಿಕ್ ಮೊರೆ ಹೋಗದೆ ಬಟ್ಟೆ ಬ್ಯಾಗ್ ಬಳಸಿದರೆ, ನಗರಸಭೆ ಶ್ರಮಕ್ಕೆ ಪ್ರತಿಫಲ ಸಿಗಲಿದ್ದು, ನಮ್ಮ ಹಸಿರು ರಾಮನಗರದ ಕನಸು ನನಸಾಗಲಿದೆ.