Ensure guarantee schemes reach the eligible beneficiaries 
ಬೆಂಗಳೂರು ದಕ್ಷಿಣ

ಅರ್ಹರಿಗೆ ಗ್ಯಾರಂಟಿ ಯೋಜನೆ ತಲುಪಲಿ

ರಾಮನಗರ: ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಯಾವೊಬ್ಬ ಫಲಾನುಭವಿಗಳು ಹೊರಗುಳಿಯದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೃಹಜ್ಯೋತಿ ಯೋಜನೆ ಫಲಾನುಭವಿಗಳ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ಒದಗಿಸಬೇಕು. ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿ ಮರಣ ಹೊಂದಿದ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡಬೇಕು. ಅರ್ಹ ಬಿಪಿಎಲ್ ಪಡಿತರ ಚೀಟಿದಾರರುಗಳಿಗೆ ಅನ್ನಭಾಗ್ಯ ಯೋಜನೆ ತಲುಪಿಸಬೇಕು ಎಂದರು.
ಸರ್ಕಾರದ ಮಾನದಂಡಗಳಿಗೆ ಒಳಪಡದೇ ಇರುವುದರಿಂದ ಜಿಲ್ಲೆಯ ಅಂತ್ಯೋದಯ ಪಡಿತರ ಚೀಟಿಗಳನ್ನು ಎಪಿಎಲ್ ಪಡಿತರ ಚೀಟಿಗೆ ಪರಿವರ್ತಿಸಬೇಕು. ಅನರ್ಹ ಪಡಿತರ ಚೀಟಿಗಳಿಂದ ಸರ್ಕಾರದ ಆರ್ಥಿಕ ಹೊರೆ ತಗ್ಗಲಿದೆ. ಪಡಿತರ ಚೀಟಿಗಳನ್ನು ಪರಿವರ್ತಿಸುವ ಸಂದರ್ಭದಲ್ಲಿ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಬೇಕು, ಅರ್ಹ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಿಂದ ಹೊರಗುಳಿಯದಂತೆ ಅಗತ್ಯ ಕ್ರಮವಹಿಸಬೇಕು ಎಂದು ನಿರ್ದೇಶಿಸಿದರು.
ಹೆಚ್ಚುವರಿ ಬಸ್:
ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ 6 ಹಾಗೂ ರಾಮನಗರಕ್ಕೆ 2 ಹವಾನಿಯಂತ್ರಿತ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿದೆ. ಈ ಮಾರ್ಗದಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ ಬೆಂಗಳೂರಿನಿಂದ ರಾಮನಗರಕ್ಕೆ ಹೆಚ್ಚುವರಿ 4 ಬಸ್‌ಗಳ ಸಂಚಾರ ವ್ಯವಸ್ಥೆಗೆ ಮಾಡುವಂತೆ ಬಿಎಂಟಿಸಿ ವ್ಯವಸ್ಥಾಪಕರ ನಿರ್ದೇಶಕರಿಗೆ ಪತ್ರ ಬರೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು ಸೂಚಿಸಿದರು.
ಜನದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅನುಕೂಲಕ್ಕೆ ತಕ್ಕಂತೆ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕೆಂದರು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಅವಶ್ಯವಿರುವ ಗ್ರಾಮಗಳಿಗೆ ಬಸ್ ವ್ಯವಸ್ಥೆ ಹಾಗೂ ಜನದಟ್ಟಣೆ ಸಮಯದಲ್ಲಿ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು, ಜಿಲ್ಲೆಯ ಆಯಾ ಡಿಪೋ ಮ್ಯಾನೇಜರ್‌ಗಳು ಪ್ರಯಾಣಿಕರ ದಟ್ಟಣೆಯ ಅವಧಿಯಲ್ಲಿ ಕಡ್ಡಾಯವಾಗಿ ಖುದ್ದು ಹಾಜರಾಗಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ ಜನರಿಗೆ ಅನುಕೂಲವಾಗುವಂತೆ ಅವಶ್ಯಕತೆಯಿದ್ದಲ್ಲಿ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಿಸುವಂತೆ ಸೂಚಿಸಿದರು.
ಶಕ್ತಿ ಯೋಜನೆಯಡಿ 2023ರ ಜೂನ್‌ನಿಂದ 2026ರ ಮೇ ವರೆಗೆ ಜಿಲ್ಲೆಯಲ್ಲಿ ಇದುವರೆಗೂ 12,48,73,401 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅವರ ಪ್ರಯಾಣ ದರದ ಮೊತ್ತ 373.5 ಕೋಟಿ ರೂ. ಗಳಾಗಿವೆ. ಹಾಗೂ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ 2026ರ ಜುಲೈ ಮೊದಲನೇ ವಾರದವರೆಗೆ ಜಿಲ್ಲೆಯಲ್ಲಿ ಒಟ್ಟು 5,080 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 2024ರ ಜನವರಿಯಿಂದ 2026ರ ಏಪ್ರಿಲ್‌ಯವರೆಗೆ ಒಟ್ಟು ಅರ್ಹ 4,368 ಡಿಪ್ಲೋಮಾ ಹಾಗೂ ಪದವೀಧರ ಫಲಾನುಭವಿಗಳಿಗೆ 13.27 ಕೋಟಿ ರೂ. ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 7,886 ಮರಣ ಹೊಂದಿದ ಫಲಾನುಭವಿಗಳ ಪಟ್ಟಿಯನ್ನು ನಿರ್ದೇಶನಾಲಯದಿಂದ ನೀಡಲಾಗಿದೆ. ಪಟ್ಟಿಯಲ್ಲಿನ ಫಲಾನುಭವಿಗಳಿಗೆ ಮರಣಾ ನಂತರ ಜಮೆಯಾಗಿರುವ ಹಣದ ಮಾಹಿತಿಯನ್ನು ಸಂಬಂಧಪಟ್ಟ ಬ್ಯಾಂಕುಗಳಿಂದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮೂಲಕ ಪಡೆಯಲು ಕ್ರಮವಹಿಸಬೇಕು. 4,800 ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿ ಐಟಿ, ಜಿಎಸ್‌ಟಿ ಪಾವತಿದಾರರಾಗಿದ್ದು, ಈ ಫಲಾನುಭವಿಗಳನ್ನು ಪಟ್ಟಿಯಿಂದ ತೆಗೆದು ಹಾಕಲು ಶೀಘ್ರವಾಗಿ ಕ್ರಮವಹಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಕೆ. ರಾಜು ತಿಳಿಸಿದರು.
ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲು ಜಿಲ್ಲೆಯ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಶ್ರಮಿಸಬೇಕು, ಯೋಜನೆಗೆ ಅರ್ಹರಿರುವ ಯಾವುದೇ ಫಲಾನುಭವಿಯು ಗ್ಯಾರಂಟಿ ಯೋಜನೆಯಿಂದ ಹೊರಗುಳಿಯಬಾರದು ಹಾಗೂ ಈ ಯೋಜನೆಗಳ ಯಶಸ್ಸಿಗೆ ಎಲ್ಲ ಅಧಿಕಾರಿಗಳು ಸಹಕರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಮಹದೇಶ್, ಎಸ್.ಸಿ. ಶೇಖರ್, ಶಿವಪ್ರಸಾದ್, ಸಿದ್ದೇಗೌಡ, ಸದಸ್ಯರು ಹಾಗೂ ರಾಮನಗರ ತಾಲೂಕು ಅಧ್ಯಕ್ಷ ವಿ.ಎಚ್.ರಾಜು , ಮಾಗಡಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಿವಣ್ಣ, ದಿಲೀಪ್, ರಂಗನಾಥ್, ಸದಸ್ಯರಾದ ಮಹದೇವ್, ರಮೇಶ್, ಜಯಣ್ಣ, ವನಜಾ, ಶೋಭ, ಕಾಳಮ್ಮ ಸೇರಿ ಜಿಪಂ ಉಪಕಾರ್ಯದರ್ಶಿ ಧನರಾಜ್ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಇದ್ದರು.
ಬಿಪಿಎಲ್‌ಗೆ ಪರಿವರ್ತನೆ : ಜಿಲ್ಲೆಯ 291 ಎಪಿಎಲ್ ಪಡಿತರ ಚೀಟಿಗಳನ್ನು ಬಿಪಿಎಲ್‌ಗೆ ಪರಿವರ್ತಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 2025ರ ಫೆಬ್ರವರಿಯಿಂದ 2026ರ ಜುಲೈವರೆಗೆ 1,70,52,804 ಪಡಿತರ ಚೀಟಿ ಫಲಾನುಭವಿಗಳಿಗೆ ಒಟ್ಟು 7,82,170 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಹಂಚಿಕೆ ಮಾಡಲಾಗಿದೆ ಎಂದು ಸಂಬಂಧಿಸಿದ ಇಲಾಖೆಯ ಉಪನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡಿದರು.
ಶೇ.95.92 ಫಲಾನುಭವಿಗಳು ನೋಂದಣಿ: ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ 2,94,399 ಅರ್ಹ ಫಲಾನುಭವಿಗಳ ಪೈಕಿ 2,82,393 (ಶೇ.95.92) ಫಲಾನುಭವಿಗಳು ನೋಂದಣಿಯಾಗಿದ್ದು, ಉಳಿದ 12,006 ಶೇ.4.08 ಫಲಾನುಭವಿಗಳ ನೋಂದಣಿಗೆ ಬಾಕಿ ಇರುತ್ತದೆ. 30 ಕಂತುಗಳಲ್ಲಿ ಅಂದರೆ 2026ರ ಏಪ್ರಿಲ್ ಮಾಹೆಯವರೆಗೆ 2,56,952 ಫಲಾನುಭವಿಗಳಿಗೆ 1586 ಕೋಟಿ ರೂ. ಹಣ ಪಾವತಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3,34,268 ಮಂದಿ ನೋಂದಾಯಿಸಿಕೊಂಡಿದೆ. ಈ ಯೋಜನೆ ಪ್ರಾರಂಭವಾದಾಗಿನಿಂದ ಇದುವರೆಗೂ ಒಟ್ಟಾರೆ 436.34 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.