- ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ
- ಮಾತಿಗೆ ಈಗಲೂ ಬದ್ಧ ಎಂದ ಶಾಸಕ
- ನನ್ನ ಮಾತಲ್ಲ ಶರಣರ ಮಾತು
ರಾಮನಗರ: ಡಿ.ಕೆ.ಶಿವಕುಮಾರ್ ಅವರು ಜನವರಿ 6 ಇಲ್ಲವೇ 9ಕ್ಕೆ ಮುಖ್ಯಮಂತ್ರಿ ಹುದ್ದೆಗೆ ಏರುವುದು ಶೇ.200ರಷ್ಟು ಖಚಿತ ಎಂದು ರಾಮನಗರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಪುನರುಚ್ಚರಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ವಿಚಾರ ನನ್ನ ಬಾಯಿಂದ ಬಂದದ್ದಲ್ಲ, ನಾವು ನಂಬಿರುವ ಶರಣರ ಬಾಯಿಂದ ಬಂದಿರುವುದು. ಅವರಿಂದ ಮಾಹಿತಿ ಪಡೆದುಕೊಂಡು ನಾನು ಹೇಳಿಕೆ ನೀಡಿದ್ದೇನೆ. ಇದೇ ವಿಶ್ವಾಸ ಇಂದಿಗೂ ಇದ್ದು, ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಶಿವಕುಮಾರ್ ಜ.6ಇಲ್ಲವೇ 9ಕ್ಕೆ ಸಿಎಂ ಆಗುವುದು ಖಚಿತ.
ಇಕ್ಬಾಲ್ ಹುಸೇನ್ ಮಾತನ್ನು ನಂಬದಂತೆ ಸ್ವತಃ ಡಿ.ಕೆ.ಶಿವಕುಮಾರ್ ಅವರೇ ಹೇಳಿಕೆ ನೀಡಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಅವರು ಏನೇ ಹೇಳಲಿ, ಅವರು ನಮ್ಮ ನಾಯಕರು, ಅವರಿಗೆ ಅವರದ್ಧೇ ಆದ ಒತ್ತಡ ಇದೆ. ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೂ ಇಲ್ಲ. ಈ ಮಾತಿಗೆ ಇಂದಿಗೂ ಬದ್ಧ ಎಂದರು.
ಸಿಎಂ ಆಗಲು ಹೈ ಕಮಾಂಡ್ ಅವಕಾಶ ನೀಡಲಿದೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್, ಈಗಾಗಲೇ ಒಪ್ಪಂದ ಆಗಿದೆ ಎಂದು ನಮ್ಮ ನಾಯಕರೇ ಹೇಳಿಕೆ ನೀಡಿದ್ದಾರೆ. ಒಪ್ಪಂದ ಆಗಿದ್ದರೆ ಮಾತ್ರ ನಮ್ಮ ನಾಯಕರು ಹೇಳೋಕೆ ಸಾಧ್ಯ. ಒಪ್ಪಂದ ಆಗದಿದ್ದರೆ ಇಲ್ಲ ಎಂದೇ ಹೇಳುತ್ತಿದ್ದರು ಎಂದರು.