22 ಬಿಡದಿ 4 ತಿಮ್ಮೇಗೌಡನದೊಡ್ಡಿ ಬಸವೇಶ್ವರ ಪದವಿ ಕಾಲೇಜು ವಾಷಿಕೋತ್ಸವದಲ್ಲಿ ಡಾ.ಸಂತೋಷ ಎಂ.ಮುರನಾಳ ಅವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು. ಡಾ.ರಾಜೇಶ್ ಬಿ., ಪ್ರೊ.ಕರಿರಾಮಕೃಷ್ಣ ಇದ್ದರು. 
ಬೆಂಗಳೂರು ದಕ್ಷಿಣ

ಶಿಸ್ತು, ಹೊಂದಾಣಿಕೆ, ನಾಯಕತ್ವದ ಗುಣವೇ ಯಶಸ್ಸಿನ ಮಂತ್ರ

ಪ್ರಮುಖ ಮುಖ್ಯಾಂಶಗಳು

  • ಶಿಸ್ತು, ಹೊಂದಾಣಿಕೆ, ನಾಯಕತ್ವದ ಗುಣವೇ ಯಶಸ್ಸಿನ ಮಂತ್ರ
ಬಿಡದಿ: ವಿದ್ಯಾರ್ಥಿ ಜೀವನದಲ್ಲಿ ಚಟುವಟಿಕೆಯಿಂದ ಇರಬೇಕು. ಮನುಷ್ಯ ನಿರಂತರವಾಗಿ ಹರಿಯುವ ನೀರಿನಂತೆ ಆಗಬೇಕು. ನಮ್ಮಲ್ಲಿನ ಶಿಸ್ತು, ಹೊಂದಾಣಿಕೆ ಮತ್ತು ನಾಯಕತ್ವದ ಗುಣಗಳು ಯಶಸ್ಸಿನ ಮೂಲ ಮಂತ್ರವಾಗಬೇಕು. ಈ ಮೂರೂ ಗುಣಗಳಿದ್ದರೆ ಎಲ್ಲರೂ ನಮ್ಮನ್ನು ಅನುಸರಿಸುತ್ತಾರೆ ಎಂದು ಅಮೃತ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಸಂತೋಷ ಎಂ.ಮುರನಾಳ ಹೇಳಿದರು.
ತಿಮ್ಮೇಗೌಡನದೊಡ್ಡಿ ಬಸವೇಶ್ವರ ಪದವಿ ಕಾಲೇಜು ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾವೆಲ್ಲ ಸ್ಪರ್ಧಾತ್ಮಕ ಯುಗದಲ್ಲಿದ್ದೇವೆ. ನಾವು ಈಗ ಮನುಷ್ಯರೊಂದಿಗೆ ಮಾತ್ರವಲ್ಲದೆ ಯಂತ್ರಗಳೊಂದಿಗೂ ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ನಾವು ಯಾವಾಗಲು ಚಟುವಟಿಕೆಯಿಂದಿ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಮೃತ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಪ್ರೊ.ಕರಿರಾಮಕೃಷ್ಣ ಮಾತನಾಡಿ, ಜೀವನದ ಪ್ರತಿ ಹಂತದಲ್ಲೂ ಒಂದೊಂದು ವಿಭಾಗಗಳು ಬರುತ್ತವೆ. ಹಾಗೆಯೇ ವಿದ್ಯಾರ್ಥಿ ಜೀವನದಲ್ಲಿ ಬಿಎ, ಬಿ.ಕಾಂ., ಬಿ.ಎಸ್ಸಿ., ಬಿಬಿಎ, ಬಿಸಿಎ ಹೀಗೆ ಹಲವು ವಿಭಾಗಗಳು ಬರುತ್ತವೆ. ಆಯಾ ವಿಭಾಗಗಳು ತಮ್ಮದೇ ಮಹತ್ವ ಪಡೆದಿವೆ. ದೇಶದಲ್ಲಿಯೇ ಮಾದರಿ ಮತ್ತು ಕನಸಿನ ಹುದ್ದೆ ಎಂದರೆ ಜಿಲ್ಲಾಧಿಕಾರಿ ಆಗುವುದು. ಅದಕ್ಕೆ ಬಿಎ ಪದವಿ ಮಾಡಿದವರೇ ಹೆಚ್ಚು ಪರೀಕ್ಷೆಗಳನ್ನು ಬರೆಯುತ್ತಾರೆ. ಆದರೂ ಇತ್ತೀಚೆಗೆ ಬಿಎ ಎಂದರೆ ಸಾಮಾನ್ಯ ಎನಿಸಿ ಅದರ ಮಹತ್ವ ಕಡಿಮೆಯಾಗುತ್ತಿದೆ. ಎಲ್ಲ ಪದವಿ ವಿಭಾಗಗಳಿಗೂ ಅದರದೇ ಆದ ಮಹತ್ವವಿದೆ. ಹಾಗಾಗಿ ಪದವಿ ಗಳಿಸುವ ಪ್ರತಿ ವಿಭಾಗಗಳಿಗೂ ಅದರದೇ ಆದ ಮಹತ್ವವಿದೆ ಎಂದು ತಿಳಿಸಿದರು.
ಪದವಿ ಕಾಲೇಜು ಪ್ರಾಂಶುಪಾಲ ಡಾ.ರಾಜೇಶ್ ಬಿ. ಮಾತನಾಡಿ, ಅಂತಿಮ ವರ್ಷದ ವಿದ್ಯಾರ್ಥಿಗಳೆಲ್ಲ ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳುತಿದ್ದೀರಿ. ನಮ್ಮ ಸಾಧನೆ ನಮ್ಮ ಬಗ್ಗೆ ಮಾತನಾಡುವ ರೀತಿಯಲ್ಲಿ ನಿಮ್ಮ ಜೀವನ ಸಾಗಬೇಕು. ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಹಲವಾರು ಸೋಲುಗಳ ಕಹಿ ನೆನಪಿರುತ್ತದೆ. ಹಾಗಾಗಿ ಗೆಲುವು ಒಂದೆ ಬಾರಿ ಸಿಗುವುದಿಲ್ಲ. ಸೋಲೇ ಗೆಲುವಿನ ಸೋಪಾನ ಎಂಬಂತೆ ಸೋಲಾದಾಗ ಕುಗ್ಗದೆ ಸತತ ಪ್ರಯತ್ನ ಇದ್ದಾಗ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಆತ್ಮವಿಶ್ವಾಸ ಮೂಡಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆ, ಸಾಂಸ್ಕೃತಿಕ ವಿಭಾಗಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ನೀಡಿ ಗೌರವಿಸಲಾಯಿತು. ಪದವಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕೌಶಲ ರೂಢಿಸಿಕೊಳ್ಳಿ: ಕೇವಲ ಪುಸ್ತಕದ ಜ್ಞಾನದಿಂದ ನಾವು ಬದುಕಲು ಸಾಧ್ಯವಿಲ್ಲ. ಕೌಶಲಗಳನ್ನೂ ಮೈಗೂಡಿಸಿಕೊಂಡಾಗ ಮಾತ್ರ ಗೆಲವು ಸಾಧ್ಯ. ಈ ಗೆಲುವು ನಮ್ಮದಾಗಬೇಕಾದರೆ ಜೀವನದಲ್ಲಿ ಶಿಸ್ತು, ನಾಯಕತ್ವದ ಗುಣ, ಹೊಂದಾಣಿಕೆ ಗುಣಗಳನ್ನು ರೂಢಿಸಿಕೊಂಡಾಗ ಗೆಲುವು ನಮ್ಮದಾಗುತ್ತದೆ. ನಾವು ಬೇರೆಯವರನ್ನು ನಿಂದಿಸುವ ಮುನ್ನ ನಮ್ಮನ್ನು ನಾವು ನೋಡಿಕೊಳ್ಳಬೇಕು, ಅಂತರಂಗದೊಂದಿಗೆ ಮಾತನಾಡಿಕೊಳ್ಳಬೇಕು, ಶಿಸ್ತುಬದ್ಧ ಜೀವನ ನಡೆಸಿದರೆ ಯಶಸ್ಸು ನಮ್ಮದಾಗುತ್ತದೆ. ಇಂದು ಎಲ್ಲ ವಿಭಾಗಗಳಲ್ಲಿ ಕೃತಕ ಬುದ್ಧಿಮತ್ತೆ ಬಂದಿರುವುದರಿಂದ ನಾವು ಅದನ್ನು ಮೀರಿಸುವಂತಹ ಕೌಶಲಗಳನ್ನು ರೂಢಿಸಿಕೊಳ್ಳಬೇಕು ಎಂದು ಪದವಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.