ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನವಣೆ ಮಫಿನ್ ಅಭಿವೃದ್ಧಿಪಡಿಸಿರುವುದು.
ಮೈದಾ ಆಧಾರಿತ ತಿನಿಸುಗಳಲ್ಲಿ ನಾರಿನಂಶ ಹಾಗೂ ಪೋಷಕಾಂಶಗಳ ಕೊರತೆ ಇರುವುದನ್ನು ಗಮನಿಸಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು, ಗ್ರಾಹಕರಿಗೆ ಆರೋಗ್ಯಕರ ತಿನಿಸು ನೀಡುವ ನಿಟ್ಟಿನಲ್ಲಿ ನವಣೆ ಮಫಿನ್ ಅಭಿವೃದ್ಧಿಪಡಿಸಿದ್ದಾರೆ. ನವಣೆ ಮಫಿನ್ ಸಂಪೂರ್ಣವಾಗಿ ಸಿರಿಧಾನ್ಯ ಆಧಾರಿತವಾಗಿದೆ.
ಏನಿದು ನವಣೆ ಮಫಿನ್?: ಹೌದು...ಗಡಿಬಿಡಿಯ ಜೀವನಶೈಲಿ, ಸಮಯದ ಅಭಾವದಿಂದ ಸಿದ್ಧ ಉಡುಪು ಮತ್ತು ದಿಢೀರ್ ತಿಂಡಿಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿದ್ಯಾರ್ಥಿಗಳಿಂದ ಹಿಡಿದು ಕಚೇರಿಗೆ ಓಡುವ ಉದ್ಯೋಗಸ್ಥರವರೆಗೆ ಎಲ್ಲರಿಗೂ ಕೇಕ್, ರ್ಬಗರ್, ಮಫಿನ್ಗಳಂತಹ ಬೇಕರಿ ಉತ್ಪನ್ನಗಳು ನೆಚ್ಚಿನ ತಿನಿಸುಗಳಾಗಿರುತ್ತವೆ. ಮೈದಾ ಮತ್ತು ಸಂಸ್ಕರಿತ ಗೋದಿಯ ಹಿಟ್ಟಿನಲ್ಲಿ ಲಭ್ಯವಿರುವ ಗ್ಲುಟೆನ್ ಎಂಬ ಪ್ರೋಟಿನ್ ಹೊಟ್ಟೆ ಉಬ್ಬರ, ನೋವು ಮುಂತಾದ "ಗ್ಲುಟೆನ್ ಇನ್ಟಾಲರನ್ಸ್' ಸಮಸ್ಯೆ ಉಂಟುಮಾಡುತ್ತದೆ. ಆದರೆ, ನವಣೆ ಸಿರಿಧಾನ್ಯದಲ್ಲಿ ಗ್ಲುಟೆನ್ ಅಂಶ ಇಲ್ಲದಿರುವುದರಿಂದ ಈ ಮಫಿನ್ ಗ್ಲುಟೆನ್ ಅಲರ್ಜಿ ಇರುವವರಿಗೂ ಅತ್ಯಂತ ಸುರತ ಹಾಗೂ ಆರೋಗ್ಯಕರ ಪರ್ಯಾಯ ಆಹಾರವಾಗಿದೆ.
ತ್ಯಾಜ್ಯ ನಿರ್ವಹಣೆ, ಮೌಲ್ಯವರ್ಧನೆ
ಈ ಉತ್ಪನ್ನದ ಮತ್ತೊಂದು ವಿಶೇಷವೆಂದರೆ ಆಹಾರ ತ್ಯಾಜ್ಯದ ಸಮರ್ಪಕ ಬಳಕೆ. ನವಣೆ ಹಿಟ್ಟಿನೊಂದಿಗೆ, ತೆಂಗಿನ ಎಣ್ಣೆ ತೆಗೆದ ನಂತರ ಸಿಗುವ ಉಪಉತ್ಪನ್ನವಾದ ಕೊಬ್ಬರಿಯ ಹಿಂಡಿ ಪುಡಿಯನ್ನು ಮೌಲ್ಯವರ್ಧನೆಗಾಗಿ ಬಳಸಲಾಗುತ್ತದೆ. ತೆಂಗಿನಲ್ಲಿನ ಅಧಿಕ ಪ್ರೋಟಿನ್, ನಾರಿನಂಶ ಮತ್ತು ಖನಿಜಾಂಶಗಳು ಈ ಮಫಿನ್ನಲ್ಲೇ ಉಳಿಸಿಕೊಳ್ಳುವುದರ ಜತೆಗೆ ಆಹಾರ ತ್ಯಾಜ್ಯ ನಿರ್ವಹಣೆಗೂ ಸಹಕಾರಿಯಾಗಿದೆ. ಪೋಷಕಾಂಶಗಳ ಲೆಕ್ಕಾಚಾರದಲ್ಲಿ 50ಗ್ರಾಂ ತೂಕದ ಒಂದು ನವಣೆ ಮಫಿನ್ನಿಂದ ಸುಮಾರು 4.2ಗ್ರಾಂ ಪ್ರೋಟಿನ್, 14ಗ್ರಾಂ ಕೊಬ್ಬು, 0.4ಗ್ರಾಂ ನಾರಿನಂಶ, 25ಗ್ರಾಂ ಕಾಬೋರ್ಹೈಡ್ರೇಟ್ ಹಾಗೂ 238 ಕ್ಯಾಲರಿ ದೊರೆಯುವ ಜತೆಗೆ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶಗಳು ಸಮೃದ್ಧವಾಗಿವೆ. ಮೈದಾ ಮಫಿನ್ಗೆ ಹೋಲಿಸಿದರೆ ನವಣೆ ಮಫಿನ್ನಲ್ಲಿ ರುಚಿ, ಪರಿಮಳ, ಬಣ್ಣ ಉತ್ತಮವಾಗಿದ್ದು, ಗ್ರಾಹಕರ ಅಭಿಪ್ರಾಯ ಸಂಗ್ರಹದಲ್ಲಿ ಶೇ.84 ಜನರು ಇದನ್ನು ಮೆಚ್ಚಿಕೊಂಡಿದ್ದಾರೆ.
ಸ್ತ್ರೀಶಕ್ತಿ ಸಂಗಳಿಗೆ ಸುವರ್ಣಾವಕಾಶ
ನವಣೆ ಮಫಿನ್ ತಯಾರಿಕೆಗೆ 8 ರೂ. ವೆಚ್ಚವಾಗಲಿದ್ದು, ಪ್ಲಾಸ್ಟಿಕ್ ಡಬ್ಬಗಳಲ್ಲಿ ಯಾವುದೇ ಕೃತಕ ಸಂರಕ್ಷಕಗಳ ನೆರವಿಲ್ಲದೆ 10 ದಿನ ಸುರತವಾಗಿ ಇಡಬಹುದಾಗಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪೌಷ್ಟಿಕಾಂಶ ನೀಡುವ ಈ ತಂತ್ರಜ್ಞಾನವು ಸ್ವಯಂ ಉದ್ಯೋಗಕ್ಕೆ ಉತ್ತಮ ಮಾರ್ಗವಾಗಿದ್ದು, ಸ್ತ್ರೀಶಕ್ತಿ ಸಂಗಳು, ಸಣ್ಣ ಬೇಕರಿ ಮಾಲೀಕರು, ಆಹಾರ ಸಂಸ್ಕರಣಾ ಉದ್ಯಮಿಗಳು ಹಾಗೂ ಪ್ರಗತಿಪರ ಯುವ ರೈತರು ಈ ತಂತ್ರಜ್ಞಾನವನ್ನು ಬಳಸಿ ಲಾಭದಾಯಕ ಉದ್ದಿಮೆ ಪ್ರಾರಂಭಿಸಬಹುದಾಗಿದೆ.
ಈ ನೂತನ ತಂತ್ರಜ್ಞಾನವನ್ನು ಖರೀದಿಸಿ ಉದ್ಯಮ ಪ್ರಾರಂಭಿಸಲು ಇಚ್ಛಿಸುವ ಆಸಕ್ತರಿಗೆ ಕೃಷಿ ವಿಶ್ವವಿದ್ಯಾನಿಲಯವು ಸೂಕ್ತ ಕೌಶಲ ತರಬೇತಿ ಮತ್ತು ತಾಂತ್ರಿಕ ನೆರವು ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಶೋಧನಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು ಅವರನ್ನು ಸಂಪರ್ಕಿಸಬಹುದು.
ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳು ಅಪೌಷ್ಟಿಕತೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
— > ಡಾ.ಮೂಡಲಗಿರಿಯಪ್ಪ ವಿವಿ ಸಂಶೋಧನಾ ನಿರ್ದೇಶಕ