ರಾಮನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಕೆ.ರಾಜು ಅಧ್ಯಕ್ಷತೆಯಲ್ಲಿ ನಡೆಯಿತು. ಸಮಿತಿಯ ಉಪಾಧ್ಯಕ್ಷರಾದ ಮಹದೇಶ್, ಎಸ್.ಸಿ. ಶೇಖರ್, ಶಿವಪ್ರಸಾದ್, ಸಿದ್ದೇಗೌಡ ಮುಂತಾದವರು ಇದ್ದರು.  
ಬೆಂಗಳೂರು ದಕ್ಷಿಣ

ಗ್ಯಾರಂಟಿ ಯೋಜನೆ ಅರ್ಹರಿಗೆ ತಲುಪಿಸಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಸಭೆ
  • ಬಸ್ ಸೇವೆ ಹೆಚ್ಚಳಕ್ಕೆ ಸೂಚನೆ
  • ಅರ್ಹರು ಯೋಜನೆಯಿಂದ ವಂಚಿತರಾಗಬಾರದು
ರಾಮನಗರ: ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಯಾವೊಬ್ಬ ಫಲಾನುಭವಿಗಳು ಹೊರಗುಳಿಯದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೃಹಜ್ಯೋತಿ ಯೋಜನೆ ಫಲಾನುಭವಿಗಳ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ಒದಗಿಸಬೇಕು. ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿಯಾಗಿ ಮರಣ ಹೊಂದಿದ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡಬೇಕು. ಅರ್ಹ ಬಿಪಿಎಲ್ ಪಡಿತರ ಚೀಟಿದಾರರುಗಳಿಗೆ ಅನ್ನಭಾಗ್ಯ ಯೋಜನೆ ತಲುಪಿಸಬೇಕು ಎಂದರು.
ಸರ್ಕಾರದ ಮಾನದಂಡಗಳಿಗೆ ಒಳಪಡದೇ ಇರುವುದರಿಂದ ಜಿಲ್ಲೆಯ ಅಂತ್ಯೋದಯ ಪಡಿತರ ಚೀಟಿಗಳನ್ನು ಎಪಿಎಲ್ ಪಡಿತರ ಚೀಟಿಗೆ ಪರಿವರ್ತಿಸಬೇಕು. ಈ ಅನರ್ಹ ಪಡಿತರ ಚೀಟಿಗಳಿಂದ ಸರ್ಕಾರದ ಆರ್ಥಿಕ ಹೊರೆ ತಗ್ಗಲಿದೆ ಎಂದ ಅವರು ಪಡಿತರ ಚೀಟಿಗಳನ್ನು ಪರಿವರ್ತಿಸುವ ಸಂದರ್ಭದಲ್ಲಿ ಅಧಿಕಾರಿಗಳು ಕೂಲಕುಂಷವಾಗಿ ಪರಿಶೀಲಿಸಬೇಕು, ಅರ್ಹ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಿಂದ ಹೊರಗುಳಿಯದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ನಿರ್ದೇಶಿಸಿದರು.
ಜಿಲ್ಲೆಯ 291 ಎಪಿಎಲ್ ಪಡಿತರ ಚೀಟಿಗಳನ್ನು ಬಿಪಿಎಲ್‌ಗೆ ಪರಿವರ್ತಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 2025ರ ಫೆಬ್ರವರಿ ಮಾಹೆಯಿಂದ 2026ರ ಜುಲೈ ಮಾಹೆಯವರೆಗೆ 1,70,52,804 ಪಡಿತರ ಚೀಟಿ ಫಲಾನುಭವಿಗಳಿಗೆ ಒಟ್ಟು 7,82,170 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಹಂಚಿಕೆ ಮಾಡಲಾಗಿದೆ ಎಂದು ಸಂಬಂಧಿಸಿದ ಇಲಾಖೆಯ ಉಪನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡಿದರು.
ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ 6 ಹಾಗೂ ರಾಮನಗರಕ್ಕೆ 2 ಹವಾನಿಯಂತ್ರಿತ ಬಿ.ಎಂ.ಟಿ.ಸಿ ಬಸ್‌ಗಳು ಸಂಚರಿಸುತ್ತಿದೆ. ಈ ಮಾರ್ಗದಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ ಬೆಂಗಳೂರಿನಿಂದ ರಾಮನಗರಕ್ಕೆ ಹೆಚ್ಚುವರಿ 4 ಬಸ್‌ಗಳ ಸಂಚಾರ ವ್ಯವಸ್ಥೆಗೆ ಮಾಡುವಂತೆ ಬಿಎಂಟಿಸಿ ವ್ಯವಸ್ಥಾಪಕರ ನಿರ್ದೇಶಕರಿಗೆ ಪತ್ರ ಬರೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜನದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅನುಕೂಲಕ್ಕೆ ತಕ್ಕಂತೆ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕೆಂದರು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಅವಶ್ಯವಿರುವ ಗ್ರಾಮಗಳಿಗೆ ಬಸ್ ವ್ಯವಸ್ಥೆ ಹಾಗೂ ಜನದಟ್ಟಣೆ ಸಮಯದಲ್ಲಿ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು, ಜಿಲ್ಲೆಯ ಆಯಾ ಡಿಪೋ ಮ್ಯಾನೇಜರ್‌ಗಳು ಪ್ರಯಾಣಿಕರ ದಟ್ಟಣೆಯ ಅವಧಿಯಲ್ಲಿ ಕಡ್ಡಾಯವಾಗಿ ಖುದ್ದು ಹಾಜರಾಗಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ ಜನರಿಗೆ ಅನುಕೂಲವಾಗುವಂತೆ ಅವಶ್ಯಕತೆಯಿದ್ದಲ್ಲಿ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಿಸುವಂತೆ ಸೂಚಿಸಿದರು.
ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲು ಜಿಲ್ಲೆಯ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಶ್ರಮಿಸಬೇಕು, ಯೋಜನೆಗೆ ಅರ್ಹರಿರುವ ಯಾವುದೇ ಫಲಾನುಭವಿಯು ಗ್ಯಾರಂಟಿ ಯೋಜನೆಯಿಂದ ಹೊರಗುಳಿಯಬಾರದು ಹಾಗೂ ಈ ಯೋಜನೆಗಳ ಯಶಸ್ಸಿಗೆ ಎಲ್ಲಾ ಅಧಿಕಾರಿಗಳು ಸಹಕರಿಸಬೇಕು ಎಂದವರು ಹೇಳಿದರು.
ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಮಹದೇಶ್, ಎಸ್.ಸಿ. ಶೇಖರ್, ಶಿವಪ್ರಸಾದ್, ಸಿದ್ದೇಗೌಡ, ಸದಸ್ಯರು ಹಾಗೂ ರಾಮನಗರ ತಾಲೂಕು ಅಧ್ಯಕ್ಷರಾದ ರಾಜು ವಿ.ಎಚ್., ಮಾಗಡಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಿವಣ್ಣ, ದಿಲೀಪ್, ರಂಗನಾಥ್, ಸದಸ್ಯರುಗಳಾದ ಮಹದೇವ್, ರಮೇಶ್, ಜಯಣ್ಣ, ವನಜಾ, ಶೋಭ, ಕಾಳಮ್ಮ ಸೇರಿದಂತೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಧನರಾಜ್ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.