ಕೈಲಾಂಚ ಹೋಬಳಿ ವಡ್ಡರಹಳ್ಳಿಯಲ್ಲಿ ಆನೆಗಳ ದಾಳಿಗೆ ತೆಂಗಿನಮರ ನಾಶವಾಗಿವೆ.
ಕೈಲಾಂಚ: ಹೋಬಳಿಯ ವಡ್ಡರಹಳ್ಳಿಯಲ್ಲಿ ಐದು ಆನೆಗಳ ಹಿಂಡು ದಾಂಧಲೆ ನಡೆಸಿ, ರೈತ ವೆಂಕಟೇಶ್ ಅವರ ತೋಟದಲ್ಲಿನ ತೆಂಗಿನಮರ, ಜೋಳ, ನೀರಾವರಿ ಪೈಪ್ಗಳನ್ನು ನಾಶಮಾಡಿದೆ.
ಕಳೆದ ಹದಿನೈದು ದಿನಗಳಿಂದ ತೆಂಗಿನಕಲ್ಲು ಅರಣ್ಯದಿಂದ ಹಂದಿಗೊಂದಿ ಅರಣ್ಯಕ್ಕೆ ಬಂದಿರುವ ಆನೆಗಳು ವಡ್ಡರಹಳ್ಳಿ ಮುಖಾಂತರ ತೆಂಗಿನಕಲ್ಲು ಅರಣ್ಯಕ್ಕೆ ಮರಳುವ ವೇಳೆ ಬೆಳೆ ನಾಶಪಡಿಸಿವೆ. ಅರ್ಕಾವತಿ ನದಿ ಸಮೀಪ ಹೋದ ಆನೆಗಳು ಮತ್ತೆ ವಾಪಸ್ ಬಂದು ಹಂದಿಗೊಂದಿ ಅರಣ್ಯ ಸೇರಿವೆ ಎನ್ನಲಾಗಿದ್ದು, ಬೆಳೆ ನಾಶದ ಬಗ್ಗೆ ರೈತರು ಅರಣ್ಯಾಧಿಕಾರಿಗಳಿಗೆ ತಿಳಿಸಿ, ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಆನೆಗಳು ರಾತ್ರಿ ದಾಳಿ ನಡೆಸಿ ತುಂಬೇನಹಳ್ಳಿ ಬಳಿ ಇರುವ ಹಂದಿಗೊಂದಿ ಅರಣ್ಯದ ಸೀಗೆಹುದಿ ಎಂಬಲ್ಲಿ ಸೇರಿವೆ. ಹಂದಿಗೊಂದಿ ಅರಣ್ಯದಲ್ಲಿ ಈಗ ಯಾವುದೇ ಮೇವು ಮತ್ತು ನೀರು ಅಷ್ಟಾಗಿ ಲಭ್ಯವಿಲ್ಲ. ಈಗಾಗಲೇ ಮರಗಿಡಗಳೆಲ್ಲ ಒಣಗಿ ನಿಂತಿವೆ. ಆನೆಗಳು ಸೀಗೆಹುದಿ ಅರಣ್ಯದಲ್ಲಿ ತಂಗುವುದಿಲ್ಲ. ಆನೆಗಳು ಮತ್ತೆ ವಾಪಸ್ ಬಂದು ದಾಳಿ ನಡೆಸಬಹುದಾದ ಸಾಧ್ಯತೆಗಳಿವೆ. ಅರಣ್ಯಾಧಿಕಾರಿಗಳು ಕೂಡಲೇ ಅವುಗಳನ್ನು ವಾಪಸ್ ಸ್ವಸ್ಥಾನ, ಕಾವೇರಿ ವನ್ಯಜಿವಿಧಾಮ ಮುತ್ತತ್ತಿ ಅರಣ್ಯಕ್ಕೆ ಓಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.