ರಾಮನಗರದಲ್ಲಿ ನಡೆದ ಕರಗ ಮಹೋತ್ಸವದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಶಾಸಕ ಇಕ್ಬಾಲ್ ಹುಸೇನ್ ಸನ್ಮಾನಿಸಿದರು.  
ಬೆಂಗಳೂರು ದಕ್ಷಿಣ

ಚಾಮುಂಡೇಶ್ವರಿ ಕೃಪೆ "ಕಂಟಕ ನಿವಾರಣೆ'

ಪ್ರಮುಖ ಮುಖ್ಯಾಂಶಗಳು

  • ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಹೇಳಿಕೆ
  • ಜಿಲ್ಲೆ ಅಭಿವೃದ್ಧಿಗೆ ಸಹಕಾರ
ರಾಮನಗರ
ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಮಳೆ ಕೊರತೆಯಿಂದ ನೀರಿನ ಸಮಸ್ಯೆ ಎದುರಾಗಿತ್ತು. ಆದರೆ
ಚಾಮುಂಡೇಶ್ವರಿ ಕೃಪೆಯಿಂದ ರಾಜ್ಯಕ್ಕೆ ಎದುರಾದ ಕಂಟಕ ನಿವಾರಣೆಯಾಗಿ ಮಳೆ ಸುರಿಯುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಹೇಳಿದರು.
ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಸಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದೆ ಯಾರೂ ಮಾಡಿರದ ಹಾಗೂ ಮುಂದೆ ಯಾರಿಂದಲೂ ಮಾಡಲಾಗದ ರೀತಿಯಲ್ಲಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವುದಾಗಿ ಸಿಎಂ ಭರವಸೆ ನೀಡಿದರು.
ಬೆಂಗಳೂರು ದಣ ಜಿಲ್ಲೆ ಅಂತಾರಾಷ್ಟ್ರೀಯಮಟ್ಟಕ್ಕೆ ಕೊಂಡೊಯ್ಯವ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ರೂಪಿಸಲಾಗುತ್ತಿದ್ದು, ಜಿಲ್ಲೆಯ ನಾಲ್ಕೂ ಕ್ಷೇತ್ರದ ಶಾಸಕರೊಟ್ಟಿಗೆ ಕುಳಿತು ಚರ್ಚಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಡಿಕೆಶಿ ತಿಳಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಮನಗರ ಕ್ಷೇತ್ರಕ್ಕೆ ಸುಮಾರು 2 ಸಾವಿರ ಕೋಟಿ ರೂ. ಅನುದಾನ ಬಂದಿದೆ. ರಾಜೀವ್​ ಗಾಂಧಿ ಆರೋಗ್ಯ ವಿವಿಗೆ 600 ಕೋಟಿ, ನಿರಂತರ ಕುಡಿಯುವ ನೀರು ಪೂರೈಕೆಗೆ 450 ಕೋಟಿ, ನದಿ ಪಾತ್ರದ ಅಭಿವೃದ್ಧಿಗೆ 150 ಕೋಟಿ ರೂ. ಸೇರಿ ಹಲವು ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಈಗಾಗಲೇ ನಿವೇಶನ ರಹಿತರಿಗೆ ನಿವೇಶನ ನೀಡಲು ಡಿ.ಕೆ.ಸುರೇಶ್​ ಮತ್ತು ಇಕ್ಬಾಲ್​ ಹುಸೇನ್​ ಸುಮಾರು 300 ಎಕರೆ ಜಾಗ ಗುರುತಿಸಿದ್ದು. ಶ್ರೀವೇ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಹೈಟೆಕ್​ ಶಿಕ್ಷಣ ನೀಡುವ ನಿಟ್ಟಿನಲ್ಲಿ ಈಗಾಗಲೇ ಪ್ರತಿ ಗ್ರಾಪಂಗೆ ಒಂದರಂತೆ ಮಾದರಿ ಶಾಲೆಗಳ ನಿರ್ಮಾಣ ನಡೆದಿದೆ. ಯುವಕರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಭಾರತ್​ ಜೋಡೋ ಸಂದ ಸ್ಥಾಪನೆ ಮಾಡಲಾಗುತ್ತಿದ್ದು, ಪ್ರತಿ ಗ್ರಾಪಂಗೆ 10 ಲಕ್ಷ ರೂ. ನೀಡಲಾಗುವುದು, ಜಿಲ್ಲೆಗೆ 4 ಕೋಟಿ ರೂ. ನೀಡಲಾಗುತ್ತಿದೆ ಎಂದರು.
ಶಾಸಕ ಎಚ್​.ಎ ಇಕ್ಬಾಲ್​ ಹುಸೇನ್​ ಮಾತನಾಡಿ, ಹಿಂದಿನ ರಾಮನಗರಕ್ಕೂ ಈಗಿನ ರಾಮನಗರಕ್ಕೂ ಸಾಕಷ್ಟು ಬದಲಾವಣೆಯಾಗಿದೆ. ರಸ್ತೆ, ನೀರಾವರಿ, ಮೂಲಸೌಕರ್ಯ, ಶಿಕ್ಷಣ ಸೇರಿ ಹಲವು ಅಭಿವೃದ್ಧಿಯಾಗಿದ್ದು, ಈಗ ಡಿ.ಕೆ.ಶಿವಕುಮಾರ್​ ಮುಖ್ಯಮಂತ್ರಿಯಾಗಿದ್ದು, ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.
ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್​.ಎಂ.ರೇವಣ್ಣ , ಎಂಎಲ್​ಸಿ ಎಸ್​.ರವಿ, ರಾಮೋಜಿಗೌಡ, ಸುಧಾಮ್​ ದಾಸ್​, ಶಾಸಕ ಬೇಳೂರು ಗೋಪಾಲಕೃಷ್ಣ್ಣ, ಕದಲೂರು ಉದಯ್​ , ಮುಖಂಡ ರಘುನಂದನ್​ ರಾಮಣ್ಣ, ಮಂಜುನಾಥ ಗೌಡ, ಮಾಜಿ ಎಂಎಲ್​ ಎ ಕೆ.ರಾಜು, ಅಶರ್ತತ್​, ವಿಶ್ವನಾಥ್​ ಇದ್ದರು. ರಾಜ್ಯದ ನಂ.1 ಕನ್ನಡ ದಿನ ಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗ ಕಾರ್ಯಕ್ರಮಕ್ಕಿತ್ತು.

ಡಿ ಬಾಸ್​ ಕೂಗು ಸಿಎಂ ಬೇಸರ:


ಸಿಎಂ ಡಿ.ಕೆ.ಶಿವಕುಮಾರ್​ ಮಾತನಾಡಲು ಮುಂದಾಗುತ್ತಿದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಭಿಮಾನಿಗಳು ಡಿ ಬಾಸ್​ ಎಂದು ಘೋಷಣೆ ಕೂಗಲು ಆರಂಭಿಸಿದರು. ಸಮಾಧಾನದಿಂದ ಅಭಿಮಾನಿಗಳನ್ನು ತಣಿಸುವ ಪ್ರಯತ್ನ ಸಿಎಂ ಮಾಡಿದರೂ ಅದಕ್ಕೂ ಮೀರಿ ಅಭಿಮಾನಿಗಳ ಕೂಗು ಹೆಚ್ಚಾದ್ದರಿಂದ ಬೇಸರಗೊಂಡ ಶಿವಕುಮಾರ್​ "ನೀವು ಕೂಗಿಕೊಳ್ಳಿ ನಾನು ಮಾತನಾಡುವುದಿಲ್ಲ' ಎಂದು ತಮ್ಮ ಆಸನದತ್ತ ನಡೆದರು. ಶಾಸಕ ಇಕ್ಬಾಲ್​ ಹುಸೇನ್​ ಮನವಿ ಮಾಡಿ, ಸಿಎಂಗೆ ಅಗೌರವ ತೋರಬೇಡಿ ಎಂದು ಕೇಳಿಕೊಂಡರು. ನಂತರ ಮಾತನಾಡಿದ ಶಿವಕುಮಾರ್​, ನಿಮ್ಮ ಅಭಿಮಾನಕ್ಕೆ ಗೌರವ ಕೊಡುತ್ತೇನೆ. ಕೋರ್ಟ್​ ವಿಚಾರ ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಇದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ. ಇದಕ್ಕೆ ನಾನೇ ಸಾಕ್ಷಿ. ನೀವು ಚಾಮುಂಡೇಶ್ವರಿಯಲ್ಲಿ ಡಿ ಬಾಸ್​ಗಾಗಿ ಕೇಳಿಕೊಳ್ಳಿ ಎಂದರು.

ಪಟಾಕಿಗೂ ಬೇಸರ:

ಸಿಎಂ ಮಾತಿನ ನಡುವೆ ಸಿಡಿ ಮದ್ದು ಸಿಡಿತ ಆರಂಭಗೊಂಡಿದ್ದರಿಂದ ಆಕ್ರೋಶಗೊಂಡ ಸಿಎಂ, ಇದು ಬೇರೆ ಬೇಕಿತ್ತಾ, ಅದನ್ನು ನಿಲ್ಲಿಸಿ, ನೀರು ಹಾಕಿ ಎಂದು ತಾಕೀತು ಮಾಡಿದರು. ಶಾಸಕರು ಇದಕ್ಕೆ ಧ್ವನಿಗೂಡಿದರು. ಪಟಾಕಿ ಬೇಡ, ನಿಮ್ಮ ಬದುಕು, ನೆಮ್ಮದಿಯಿಂದ ಇರಲಿ, ನಿಮ್ಮ ಪ್ರಾರ್ಥನೆಯಿಂದ ಸಿಎಂ ಆಗಿದ್ದೇನೆ. ನಿಮ್ಮ ಸೇವಕನಾಗಿ ಬಂದಿದ್ದೇನೆ. ನಮಗೆ 136 ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದೀರಿ ಎಂದರು.
ನನ್ನನ್ನು ಮಂತ್ರಿ ಮಾಡಿದ ಡಿ.ಕೆ ಸಹೋದರರ ಋಣವನ್ನು ಸಾಯುವವರೆಗೂ ತೀರಿಸಲು ಸಾಧ್ಯವಿಲ್ಲ. ಡಿಕೆ ಸಹೋದರರ ನೇತೃತ್ವದಲ್ಲಿ ಇಡೀ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುವುದು. ನಾವು ಈ ಮಣ್ಣಿನ ಮಕ್ಕಳಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಕಂಕಣ ಬದ್ಧರಾಗಿದ್ದೇವೆ.
ಎಚ್​.ಸಿ.ಬಾಲಕೃಷ್ಣ, ಸಚಿವ
ನಿಮ್ಮ ಮನೆ ಬಾಗಿಲಿಗೆ ಅಧಿಕಾರ ಬಂದಿದೆ. ಇದನ್ನು ಉಳಿಸಿಕೊಳ್ಳಬೇಕು. ನಾನು ಸಿಎಂ ಮತ್ತು ಬಾಲಕೃಷ್ಣ ಮಂತ್ರಿ ಎಂದು ಬಂದಿಲ್ಲ. ನಿಮ್ಮ ಸೇವಕರಾಗಿ ಬಂದಿದ್ದೇವೆ. ಮುಂದೆಯೂ ಹೀಗೆ ಇರುತ್ತೇವೆ. ಪಕ್ಷಭೇದ ಮರೆತು ನಮ್ಮ ಕೈ ಬಲ ಪಡಿಸಬೇಕು. ಜಿಲ್ಲೆಯ ಅಭಿವೃದ್ಧಿಗೆ ಕೈ ಜೋಡಿಸಬೇಕು.
> ಡಿ.ಕೆ.ಶಿವಕುಮಾರ್​, ಮುಖ್ಯಮಂತ್ರಿ