ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

ಸಾಲಪಡೆದು ತಲೆಮರೆಸಿಕೊಂಡಿದ್ದ ದಂಪತಿ ಸೆರೆ

ಕನಕಪುರ: ಹಲವರಿಂದ 72 ಲಕ್ಷ ರೂ. ಸಾಲ ಪಡೆದು ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ದಂಪತಿಯನ್ನು ಕೋಡಿಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ತುಮಕೂರು ಜಿಲ್ಲೆಯ ನಾಗೇಂದ್ರ, ಕವಿತಾ ಬಂಧಿತರು. ಏನಿದು ಪ್ರಕರಣ? ತಾಲೂಕಿನ ಕೋಡಿಹಳ್ಳಿಯ ಬಸ್​ನಿಲ್ದಾಣದ ಬಳಿ ಹಲವು ವರ್ಷಗಳಿಂದ ತಳ್ಳುಗಾಡಿಯಲ್ಲಿ ಆಮ್ಲೆಟ್​ ಹಾಗೂ ಎಗ್​ರೈಸ್​ ಮಾರುತ್ತಿದ್ದ ದಂಪತಿ ವಿವಿಧ ಕಾರಣ ಹೇಳಿ ಗ್ರಾಮದ 15ಕ್ಕೂ ಹೆಚ್ಚು ಮಂದಿಯಿಂದ ಸುಮಾರು 72 ಲಕ್ಷ ರೂ. ಸಾಲ ಪಡೆದು ನ.20ರ ರಾತ್ರಿ ಪರಾರಿಯಾಗಿದ್ದರು.
ಸಾಲ ನೀಡಿದ್ದ ದಿವ್ಯಾ ಎಂಬುವವರು ಈ ಸಂಬಂಧ ನ.30ರಂದು ದೂರು ನೀಡಿದ್ದರು. ಸಬ್​ಇನ್​ಸ್ಪೆಕ್ಟರ್​ ಸತೀಶ್​ಕುಮಾರ್​ ನೇತೃತ್ವದಲ್ಲಿ ಸಿಬ್ಬಂದಿ ಮನೋಹರ್​, ಧನಂಜಯ, ಕೈಲಾಸ್​ ಹಾಗೂ ನರಸಿಂಹಮೂರ್ತಿ ತಂಡ ಆರೋಪಿಗಳ ಜಾಡು ಹಿಡಿದು ಹೋದಾಗ ಆಂಧ್ರಪ್ರದೇಶದ ಗ್ರಾಮವೊಂದರಲ್ಲಿ ಸಿಕ್ಕಿಬಿದ್ದಿದ್ದಾರೆ.
ನೋಟಿಸ್​ ಜಾರಿ
ಕೆಬ್ಬಳ್ಳಿ ಗ್ರಾಮದ ಸುನಿತಾ ಅಲಿಯಾಸ್​ ಜ್ಯೋತಿ ಎಂಬುವವರು ಈ ಹಿಂದೆ ಬೆಂಗಳೂರಿನಲ್ಲಿ ಸಾಲ ಮಾಡಿಕೊಂಡು ತೊಂದರೆಗೊಳಗಾಗಿದ್ದ ನಾಗೇಂದ್ರ, ಕವಿತಾ ದಂಪತಿಯನ್ನು ಕೋಡಿಹಳ್ಳಿಗೆ ಕರೆತಂದು ಬಾಡಿಗೆ ಮನೆಯಲ್ಲಿ ಇರಿಸಿದ್ದರು. ನಂತರದ ದಿನಗಳಲ್ಲಿ ದಂಪತಿ ದುಡಿದು ಕೂಡಿಟ್ಟಿದ್ದ ಹಣವೂ ಅಲ್ಲದೇ ಬೇರೆಯವರಿಂದ ಸಾಲ ಕೊಡಿಸುವಂತೆ ನಾಗೇಂದ್ರ ಹಾಗೂ ಕವಿತಾಗೆ ಹೆದರಿಸುತ್ತಿದ್ದರು. ಇದೇಕಾರಣಕ್ಕೆ ಹಲವರಿಂದ 72 ಲಕ್ಷ ರೂ. ಸಾಲವಾಗಿ ಪಡೆದು, ಸುನಿತಾ ಅವರ ಬ್ಯಾಂಕ್​ ಖಾತೆಗೆ ಜಮೆ ಮಾಡಿರುವುದಾಗಿ ಪೊಲೀಸ್​ ವಿಚಾರಣೆ ವೇಳೆ ದಂಪತಿ ಬಾಯ್ಬಿಟ್ಟಿದ್ದು, ಹೇಳಿಕೆ ಆಧರಿಸಿ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಕೆಬ್ಬಳ್ಳಿ ಸುನಿತಾಗೆ ಪೊಲೀಸರು ನೋಟಿಸ್​ ಜಾರಿಗೊಳಿಸಿದ್ದಾರೆ ಎನ್ನಲಾಗಿದೆ.