ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಬೆಂಗಳೂರಿನಲ್ಲಿ ಭೇಟಿ ಮಾಡಿ, ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಅಭಿನಂದಿಸಿದರು 
ಬೆಂಗಳೂರು ದಕ್ಷಿಣ

ಸಿಎಂ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಿಷ್ಠ

ಪ್ರಮುಖ ಮುಖ್ಯಾಂಶಗಳು

  • ಸಿಎಂ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಿಷ್ಠ
ಮಾಗಡಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಭದ್ರ ತಳಪಾಯಹಾಕಿಕೊಟ್ಟಿದ್ದಾರೆ. ಆ ತಳಪಾಯದ ಮೇಲೆ ಈಗ ಪಕ್ಷವನ್ನು ಬಲಗೊಳಿಸುವ ಜವಾಬ್ದಾರಿ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ,ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕಾಂಗ್ರೆಸ್‌ಗೆ ಸಿಕ್ಕಿರುವ ತಳಪಾಯ ಅತ್ಯಂತ ಗಟ್ಟಿಯಾಗಿದೆ. ಮುಂಬರುವ ದಿನಗಳಲ್ಲಿ ನೂತನ ಮುಖ್ಯಮಂತ್ರಿಗಳು ಅತ್ಯಂತ ಯಶಸ್ವಿಯಾಗಿ ಆಡಳಿತ ನಡೆಸಿ, 2028ರ ಚುನಾವಣೆಯಲ್ಲೂ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಸ್ಥಾನದ ನಿರೀಕ್ಷೆ ಇದೆ...: ತಮಗೂ ಸಚಿವ ಸ್ಥಾನ ಸಿಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಬಾಲಕೃಷ್ಣ, 5 ಬಾರಿ ಶಾಸಕನಾಗಿರುವ ನನಗೂ ಸಚಿವನಾಗುವ ಆಸೆ ಇದೆ. ಹೈಕಮಾಂಡ್ ನಮ್ಮನ್ನು ಪರಿಗಣಿಸಲಿದೆ ಎಂಬ ವಿಶ್ವಾಸವಿದೆ. ಪಕ್ಷಕ್ಕಾಗಿ ನಾನು ಸಲ್ಲಿಸಿರುವ ಸೇವೆ ಮತ್ತು ನನ್ನ ನಿಷ್ಠೆ ಹೈಕಮಾಂಡ್ ಹಾಗೂ ರಾಜ್ಯ ನಾಯಕರಿಗೆ ಚೆನ್ನಾಗಿ ತಿಳಿದಿದೆ. ಹಾಗಾಗಿ ನಾನು ಸಚಿವ ಸ್ಥಾನಕ್ಕಾಗಿ ಯಾವುದೇ ವಿಶೇಷ ಪ್ರಯತ್ನ ನಡೆಸುತ್ತಿಲ್ಲ. ಎಲ್ಲವನ್ನೂ ಕಾದು ನೋಡೋಣ ಎಂದರು.
ಹೈಕಮಾಂಡ್ ತೀರ್ಮಾನ: ಇದೇ ವೇಳೆ ಜಮೀರ್ ಅಹ್ಮದ್ ಖಾನ್ ಅವರ ಆಡಿಯೋ ವಿವಾದ ಹಾಗೂ ಅವರಿಗೆ ಸಚಿವ ಸ್ಥಾನ ತಪ್ಪಿರುವ ಕುರಿತು ಮಾತನಾಡಿದ ಶಾಸಕರು, ಜಮೀರ್ ಅಹ್ಮದ್ ಖಾನ್ ಅವರು ಒಂದು ಪ್ರಮುಖ ಸಮುದಾಯದ ಬಲಿಷ್ಠ ನಾಯಕ. ಅವರಿಗೂ ಅವಕಾಶ ಸಿಗಬೇಕು. ಆಡಿಯೋ ವಿವಾದದ ಕುರಿತು ಅವರೇ ಅದು ಫೇಕ್ ಎಂದು ಹೇಳುತ್ತಿದ್ದಾರೆ. ಅದು ನಿಜವೋ? ಅಲ್ಲವೋ? ಎಂಬುದನ್ನು ಹೈಕಮಾಂಡ್ ಪರಿಶೀಲಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಯೋಗ್ಯತೆ ಪರಿಗಣಿಸಿ ಖಾತೆ: ಚೆಲುವರಾಯಸ್ವಾಮಿ ಅವರ ಖಾತೆಯನ್ನು ಬದಲಾಯಿಸಿ ತಮಗೆ ನೀಡಲಾಗುತ್ತದೆ ಎಂಬ ವದಂತಿಗೆ ಸ್ಪಷ್ಟನೆ ನೀಡಿದ ಬಾಲಕೃಷ್ಣ, ಯಾರದ್ದೋ ಖಾತೆಯನ್ನು ಕಿತ್ತುಕೊಂಡು ಮತ್ತೊಬ್ಬರಿಗೆ ಕೊಡುವುದಲ್ಲ. ನಮಗೆ ಯೋಗ್ಯತೆ ಮತ್ತು ಅರ್ಹತೆ ಇದ್ದರೆ ಹೈಕಮಾಂಡ್ ಖಂಡಿತವಾಗಿಯೂ ಜವಾಬ್ದಾರಿ ನೀಡುತ್ತದೆ. ಮಂಡ್ಯ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗೂ ಯಾವುದೇ ಹೋಲಿಕೆಯಿಲ್ಲ. ಮೈಸೂರು ಭಾಗದ ಒಕ್ಕಲಿಗ ಸಮುದಾಯದ ಪ್ರಾತಿನಿಧ್ಯ ಸೇರಿದಂತೆ ಎಲ್ಲ ಲೆಕ್ಕಾಚಾರಗಳನ್ನು ಹೈಕಮಾಂಡ್ ಗಮನದಲ್ಲಿಟ್ಟುಕೊಂಡು ಯಾರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದನ್ನು ನಿರ್ಧರಿಸುತ್ತದೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ನಿರ್ದೇಶಕ ಎಂ.ರವೀಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರವೀಶ್, ಬೆಂ. ದಕ್ಷಿಣ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಗಿನಗೆರೆ ಕುಮಾರ್, ಆಚಾರಿ ಮಂಜುನಾಥ್, ರೂಪೇಶ್ ಕುಮಾರ್, ಶಶಾಂಕ್ ಇತರರು ಇದ್ದರು.
.