ಸಾಂದಂಭಿರ್ಕ ಚಿತ್ರ 
ಬೆಂಗಳೂರು ದಕ್ಷಿಣ

ರೇಷ್ಮೆ ಬೆಳೆಗಾರರಿಗೆ ಶುಕ್ರದೆಸೆ

ದ್ವಿತಳಿ ಗೂಡು ಕೆಜಿಗೆ 905 ರೂ.ಗೆ ಹರಾಜು > ದಿನೇದಿನೆ ಏರಿಕೆ ಕಾಣುತ್ತಿದೆ ದರ

ರಾಮನಗರ: ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ಬೆಲೆ ಕೆಲದಿನಗಳಿಂದ ಏರಿಕೆ ಕಾಣುತ್ತಿದ್ದು, ಬೆಳೆಗಾರರಲ್ಲಿ ಲಾಭದ ಭರವಸೆ ಮೂಡಿಸಿದೆ.
ರಾಮನಗರ ಮಾರುಕಟ್ಟೆಯಲ್ಲಿ ಶುಕ್ರವಾರ ಒಂದು ಕೆಜಿ ದ್ವಿತಳಿ ರೇಷ್ಮೆಗೂಡು ಪ್ರಸಕ್ತ ವರ್ಷದಲ್ಲೇ ಇದೇ ಮೊದಲಿಗೆ ದಾಖಲೆ ಮಟ್ಟದಲ್ಲಿ 905 ರೂ.ಗೆ ಹರಾಜಾಗಿದ್ದು, ಒಂದು ಸಾವಿರ ಗಡಿ ಸಮೀಪಿಸುವ ಮುನ್ಸೂಚನೆ ನೀಡಿದೆ. 2022ರಲ್ಲಿ ರೈತರೊಬ್ಬರ ಗೂಡು ಸಾವಿರ ಗಡಿ ದಾಟಿದ್ದು ಸಾರ್ವಕಾಲೀಕ ದಾಖಲೆಯಾಗಿದೆ.
ಏಷ್ಯಾಖಂಡದಲ್ಲೇ ರಾಮನಗರ ರೇಷ್ಮೆ ಮಾರುಕಟ್ಟೆ ಪ್ರಸಿದ್ಧಿ ಪಡೆದಿದ್ದು, ಪ್ರತಿದಿನ ನೂರಾರು ರೈತರು ರಾಜ್ಯಹೊರ ರಾಜ್ಯದಿಂದಲೂ ಮಿಶ್ರತಳಿ ಮತ್ತು ದ್ವಿತಳಿ ರೇಷ್ಮೆ ತಂದು ಇಲ್ಲಿ ಮಾರಾಟ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ದರ ಸಿಗುತ್ತಿಲ್ಲ ಎಂಬ ಕೊರಗಿನಲ್ಲೇ ಇಷ್ಟುದಿನ ಬೆಳೆಗಾರರು ಮನೆಯೆಡೆಗೆ ನಿರಾಸೆಯಿಂದ ಹೆಜ್ಜೆ ಹಾಕುತ್ತಿದ್ದರು. ಈ ಮಧ್ಯೆ ತಿಂಗಳಿನಿಂದ 750 ರೂ., 800 ರೂ. ಗೆರೆ ದಾಟಿರುವ ರೇಷ್ಮೆ ದರ ವಾರದಿಂದ 800 ರೂ. ಗಡಿ ದಾಟಿ ದಿನೇ ದಿನೆ ಏರಿಕೆ ಕಾಣುತ್ತಿದೆ. ಅದರಂತೆ ಶುಕ್ರವಾರ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕೆಸ್ತೂರು ರೇಷ್ಮೆ ಬೆಳೆಗಾರರೊಬ್ಬರಿಗೆ ಒಂದು ಕೆಜಿ ರೇಷ್ಮೆಗೂಡಿಗೆ 905 ರೂ. ಬೆಲೆ ದೊರೆತಿದೆ. ಬೆಲೆ ಇನ್ನೂ ಏರಿಕೆ ಕಾಣಲಿದೆ ಎಂದು ಅಂದಾಜಿಸಲಾಗಿದೆ.

ಮಿಶ್ರತಳಿಗೂ ಬೆಲೆ ಏರಿಕೆ

ಮಿಶ್ರತಳಿ ರೇಷ್ಮೆ ದರವೂ ಮೂರ್ನಾಲ್ಕು ದಿನಗಳಿಂದ ಏರುತ್ತಿದ್ದು, 800 ರೂ.ಗಡಿ ದಾಟುತ್ತಿದೆ. ದರ ಹೀಗೆ ಸಾಗುತ್ತಿದ್ದರೆ ಮಿಶ್ರತಳಿ ರೇಷ್ಮೆಯೂ ಸಾವಿರ ಗಡಿ ಮುಟ್ಟಬಹುದು ಎಂದು ಬೆಳೆಗಾರರಲ್ಲಿ ಭರವಸೆ ಮೂಡಿಸಿದೆ.

ಕಟ್ಟುನಿಟ್ಟಿನ ಕ್ರಮ

ಮಾರುಕಟ್ಟೆಗಳ ಪ್ರತಿ ವಿಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ರೇಷ್ಮೆ ಬೆಳೆಗಾರರಿಗೆ ಆಗುತ್ತಿದ್ದ ಕಿರುಕುಳಕ್ಕೆ ಬ್ರೇಕ್​, ರೇಷ್ಮೆಗೂಡು ಕದಿಯುತ್ತಿದ್ದವರ ವಿರುದ್ಧ ಎಫ್​ಐಆರ್​ ದಾಖಲಿಸಿ ಕಠಿಣ ಕ್ರಮ, ರೈತರಿಗೆ ನೇರವಾಗಿ ಗೂಡಿನ ಮೌಲ್ಯಕ್ಕೆ ತಕ್ಕಂತೆ ದರ, ಇ-&ಪೆಮೆಂಟ್​ ಸೌಲಭ್ಯ ಹೀಗೆ ಹಲವು ಕಟ್ಟುನಿಟ್ಟಿನ ಕ್ರಮ ಹಾಗೂ ಸುಧಾರಿತ ವ್ಯವಸ್ಥೆಗಳನ್ನು ಮಾರುಕಟ್ಟೆಯಲ್ಲಿ ಒದಗಿಸಿರುವ ಕಾರಣ ರೇಷ್ಮೆ ಗೂಡು ಮಾರಾಟದಲ್ಲಿ ರೈತರಿಗೆ ಹೆಚ್ಚಿನ, ನೈಜ ಬೆಲೆ ಸಿಗುತ್ತಿದೆ ಎನ್ನಲಾಗಿದೆ.

ಆವಕ ಕಡಿಮೆ

ಈ ಹಿಂದೆ ಮಾರುಕಟ್ಟೆಗೆ ಪ್ರತಿದಿನ 30 ಟನ್​ ದ್ವಿತಳಿ ರೇಷ್ಮೆ ಬರುತ್ತಿತ್ತು, ಆದರೆ ಈಗ 20 ಮೆಟ್ರಿಕ್​ ಟನ್​ ಮಾತ್ರ ಆವಕವಿದೆ. ಮಿಶ್ರತಳಿ ಎಂದಿನಂತೆ 10 ಮೆಟ್ರಿಕ್​ ಟನ್​ ಮಾರುಕಟ್ಟೆಗೆ ಬರುತ್ತಿದೆ. ಚಳಿಗಾಲವಾಗಿರುವ ಕಾರಣ ರೇಷ್ಮೆ ಗೂಡಿನ ಆವಕ ಕಡಿಮೆ ಇದೆ ಎನ್ನುತ್ತಾರೆ ಅಧಿಕಾರಿಗಳು.
"

ರೇಷ್ಮೆ ಮಾರುಕಟ್ಟೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ. ದಿನದಿಂದ ದಿನಕ್ಕೆ ದ್ವಿತಳಿ ಮತ್ತು ಮಿಶ್ರತಳಿ ಗೂಡು ದರದಲ್ಲಿ ಏರಿಕೆ ಕಾಣುತ್ತಿದೆ. ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ರೇಷ್ಮೆ ತರುವ ರೈತರಿಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ಮಾರುಕಟ್ಟೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

"

ಕಳೆದ 20 ವರ್ಷಗಳಿಂದಲೂ ಸಿಬಿ ರೇಷ್ಮೆ ಬೆಳೆಯುತ್ತಿದ್ದೆ. ಕೂಲಿ ಕಾರ್ಮಿಕರ ಕೊರತೆಯಿಂದ ಕಳೆದ ವರ್ಷದಿಂದ ದ್ವಿತಳಿ (ಸಿಎಸ್​ಆರ್​) ರೇಷ್ಮೆಯತ್ತ ಮುಖ ಮಾಡಿದೆ. 120 ಮೊಟ್ಟೆ ಚಾಕಿ ಹುಳುವಿಗೆ 102 ಕೆಜಿ ರೇಷ್ಮೆ ಉದ್ಪಾದನೆಯಾಗಿದ್ದು, ಕೆಜಿಗೆ 905 ರೂ. ದರ ಸಿಕ್ಕಿದೆ. ನಾನು, ನನ್ನ ಕುಟುಂಬ ಶ್ರಮಪಟ್ಟಿದ್ದಕ್ಕೂ ಸಾರ್ಥಕ ಎನಿಸಿದೆ.