ನಗರಸಭೆ ವ್ಯಾಪ್ತಿಯ ಕೆಲ ಪ್ರದೇಶಗಳನ್ನು ಮತ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವಂತೆ ಪರಿಗಣಿಸಿ, ಅವುಗಳಿಗೂ ಗ್ರಾಪಂ ಮೀಸಲಾತಿ ನಿಗದಿಪಡಿಸಿರುವುದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ನಗರಸಭೆ ವ್ಯಾಪ್ತಿಯಲ್ಲಿರುವ ಪ್ರದೇಶಗಳಿಗೆ ಗ್ರಾಮ ಪಂಚಾಯಿತಿ ಚುನಾವಣೆಯ ಮೀಸಲಾತಿ ಅನ್ವಯಿಸುವುದಿಲ್ಲ. ಹೀಗಾಗಿ ಪಟ್ಟಿಯಲ್ಲಿ ಹೆಸರುಗಳು ಹೇಗೆ ಸೇರ್ಪಡೆಯಾದವು ಎಂಬುದೇ ಹಲವರ ಪ್ರಶ್ನೆಯಾಗಿದೆ.
ಒಂದು ವೇಳೆ ಪಟ್ಟಿಯಲ್ಲಿ ಕಂಡುಬಂದಿರುವ ಪ್ರದೇಶಗಳು ನಗರಸಭೆಗೆ ಸೇರಿರುವುದು ಅಧಿಕೃತವಾಗಿ ದೃಢಪಟ್ಟರೆ, ಅವುಗಳ ಹೆಸರನ್ನು ಗ್ರಾಪಂ ಮೀಸಲಾತಿ ಪಟ್ಟಿಯಿಂದ ಕೈಬಿಡಬೇಕಾಗುತ್ತದೆ. ಇದರಿಂದ ಪ್ರಕಟಿಸಿರುವ ಗ್ರಾಪಂನ ಇತರ ಗ್ರಾಮಗಳ ಮೀಸಲಾತಿಯಲ್ಲಿಯೂ ಬದಲಾವಣೆ ಆಗುವ ಸಾಧ್ಯತೆ ಇದೆ. ಇದು ಆಕಾಂತ ಅಭ್ಯರ್ಥಿಗಳ ಗೊಂದಲಕ್ಕೆ ಕಾರಣವಾಗುತ್ತಿದೆ. ಸದ್ಯೆ ವಂದಾರಗುಪ್ಪೆ ಹಾಗೂ ರಾಂಪುರ ಗ್ರಾಪಂನಲ್ಲಿ ಇದು ಸಹಜವಾಗಿಯೇ ಹೆಚ್ಚಾಗಿದೆ.
ನಗರಸಭೆ ವ್ಯಾಪ್ತಿಯ ಮತಪಟ್ಟಿಯಲ್ಲಿ ಹೆಸರು ಹೊಂದಿರುವ ಅಪ್ಪಗೆರೆ ಹಾಗೂ ಕೆರೆಮೇಗಳದೊಡ್ಡಿ ಗ್ರಾಮಗಳು ಯಾವ ಮಾನದಂಡದಲ್ಲಿ ಮತ್ತೆ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀಸಲು ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಮತಪಟ್ಟಿಯಲ್ಲಿ ಒಬ್ಬ ವ್ಯಕ್ತಿಯ ಹೆಸರು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಣಿಯಾಗದಂತೆ ಕಾನೂನು ಕ್ರಮವಿದೆ. ಚುನಾವಣಾ ಆಯೋಗದ ಪ್ರಕಾರ ವ್ಯಕ್ತಿಯು ತನ್ನ ಸಾಮಾನ್ಯ ವಾಸಸ್ಥಳಕ್ಕೆ ಅನುಗುಣವಾಗಿ ಸಂಬಂಧಪಟ್ಟ ಮತದಾರರ ಪಟ್ಟಿಯಲ್ಲಿ ಮಾತ್ರ ನೋಂದಾಯಿಸಿಕೊಳ್ಳಬೇಕು. ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಮತದಾರನಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ.
ವಂದಾರಗುಪ್ಪೆ ಗ್ರಾಪಂನ ಸಿಲ್ಕ್ ಫಾಮ್ರ್ ವಾರ್ಡ್ಗೆ ನಾಲ್ವರು ಗ್ರಾಮ ಪಂಚಾಯಿತಿ ಸದಸ್ಯರ ಆಯ್ಕೆಗೆ ಮೀಸಲಾತಿ ಪ್ರಕಟಿಸಲಾಗಿದೆ. ಈ ವಾರ್ಡ್ನ ಒಟ್ಟು ಮತದಾರರ ಪೈಕಿ 1,150ಕ್ಕೂ ಹೆಚ್ಚು ಮಂದಿ ಚನ್ನಪಟ್ಟಣ ನಗರಸಭೆಯ 20ನೇ ವಾರ್ಡ್ಗೆ ಸೇರ್ಪಡೆಯಾಗಿ, 2021ರ ನಗರಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದರೂ, ಇದೀಗ ಮತ್ತೆ ಅದೇ ಪ್ರದೇಶಕ್ಕೆ ಗ್ರಾಮ ಪಂಚಾಯಿತಿ ಸದಸ್ಯರ ಆಯ್ಕೆಗೆ ಮೀಸಲಾತಿ ನಿಗದಿಪಡಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಂದಾರಗುಪ್ಪೆ ಗ್ರಾಪಂನ ಸಿಲ್ಕ್ ಫಾಮ್ರ್ ವಾರ್ಡ್ ವ್ಯಾಪ್ತಿಯಲ್ಲಿ ಕೆರೆಮೇಗಳದೊಡ್ಡಿ ಹಾಗೂ ಮಠದ ಬಯಲು ಪ್ರದೇಶಗಳ ಮತದಾರರು 2020ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡಿ ಸದಸ್ಯರನ್ನು ಆಯ್ಕೆ ಮಾಡಿದ್ದರು. ನಂತರ ಈ ಪ್ರದೇಶಗಳ ಮತದಾರರನ್ನು ಚನ್ನಪಟ್ಟಣ ನಗರಸಭೆಯ 20ನೇ ವಾರ್ಡ್ಗೆ ಸೇರ್ಪಡೆ ಮಾಡಲಾಗಿದ್ದು, 2021ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿಯೂ ಇದೇ ಮತದಾರರು ಮತ ಚಲಾಯಿಸಿ ನಗರಸಭಾ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ. ಇದೀಗ, ಮತ್ತೆ ಸಿಲ್ಕ್ ಫಾಮ್ರ್ ವಾರ್ಡ್ಗೆ ನಾಲ್ವರು ಗ್ರಾಮ ಪಂಚಾಯಿತಿ ಸದಸ್ಯರ ಆಯ್ಕೆಗೆ ಮೀಸಲಾತಿ ಪ್ರಕಟವಾಗಿರುವುದು ಸ್ಥಳಿಯರಲ್ಲಿ ಅಚ್ಚರಿ ಮೂಡಿಸಿದೆ.
ಈ ವಿಚಾರದಲ್ಲಿ ಪ್ರಮುಖ ಗೊಂದಲವೆಂದರೆ, 2021ರ ನಗರಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದ ಕೆರೆಮೇಗಳದೊಡ್ಡಿ ಮತ್ತು ಮಠದ ಬಯಲು ಪ್ರದೇಶ ಹಾಗೂ ಅಪ್ಪಗೆರೆಯ ಮತದಾರರು ಇದೀಗ ಮತ್ತೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ಪಡೆಯಲಿದ್ದಾರೆಯೇ ಎಂಬುದು.
ಒಂದೇ ಸಮಯದಲ್ಲಿ ಮತದಾರರ ಹೆಸರು ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರರ ಪಟ್ಟಿಗಳಲ್ಲಿ ಮುಂದುವರಿದಿದ್ದರೆ, ಅದು ಹೇಗೆ ಸಾಧ್ಯವಾಯಿತು ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕಾಗಿದೆ. ಮತದಾರರ ಪಟ್ಟಿಯ ವ್ಯಾಪ್ತಿ, ಗ್ರಾಮ ಪಂಚಾಯಿತಿ ೇತ್ರದ ಗಡಿ ಹಾಗೂ ನಗರಸಭೆಯ ವಾರ್ಡ್ ಗಡಿ ಈ ಮೂರನ್ನೂ ಹೋಲಿಕೆ ಮಾಡಿ ಸ್ಪಷ್ಟಪಡಿಸುವ ಅಗತ್ಯವಿದೆ ಎಂಬ ಆಗ್ರಹ ಕೇಳಿಬಂದಿದೆ.