- ಕುಸಿತದ ಹಾದಿ ಹಿಡಿದ ಕಾಯಿಯ ಬೆಲೆ
- ಬೆಳೆಗಾರರಿಗಿಲ್ಲ ಖುಷಿ
ಕಳೆದ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಸಾರ್ವಕಾಲಿಕ ಉತ್ತುಂಗದಲ್ಲಿದ್ದ ತೆಂಗಿನ ಬೆಲೆ ಈಗ ಕುಸಿತದ ಹಾದಿ ಹಿಡಿದಿದ್ದು, ಕೆಜಿಗೆ 50 ರೂ. ಆಸುಪಾಸಿಗೆ ಬಂದು ನಿಂತಿದೆ. ಇದಕ್ಕೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊರ ರಾಜ್ಯದ ಕಾಯಿಯೂ ಕಾರಣ ಎಂಬ ಮಾತು ಕೇಳಿಬಂದಿದೆ. ಈ ಬೆಳವಣಿಗೆ ಗ್ರಾಹಕರಿಗೆ ತುಸು ನಿರಾಳವೆನಿಸಿದರೆ ಬೆಳೆಗಾರರ ಖುಷಿಯನ್ನು ಕಸಿದಿದೆ.
2024ರ ಬೇಸಿಗೆಯ ಬಿಸಿಲ ಬೇಗೆಗೆ ಬಹುತೇಕ ತೆಂಗು ನೆಲ ಕಚ್ಚಿ ಇಳುವರಿ ಕುಂಠಿತವಾದ ಪರಿಣಾಮ ಕಳೆದ ಎರಡು ವರ್ಷಗಳಿಂದಲೂ ತೆಂಗು ಬೆಲೆ 60ರಿಂದ 80 ರೂ.ವರೆಗೆ ಏರಿಳಿತ ಆಗುತ್ತಲೇ ಇತ್ತು. ಇದು ರೈತರಿಗೆ ಸಂತಸವನ್ನೂ ತಂದಿತ್ತು. ಆದರೆ ಈ ಬಾರಿ ಯುಗಾದಿಯಲ್ಲಿ ಬೆಲೆ ಏರಿಕೆ ಆಗಬಹುದು ಎನ್ನುವ ನಿರೀಕ್ಷೇಯಲ್ಲಿದ್ದ ರೈತರಿಗೆ ಶಾಕ್ ಆಗಿದ್ದು, ತೆಂಗು ಬೆಲೆ ಪ್ರತಿ ಕೆಜಿಗೆ 50 ರೂ. ನಿಂದ ಮೇಲೆ ಏಳಲೇ ಇಲ್ಲ. ಮುಂದಿನ ದಿನಗಳಲ್ಲಿ ಇದು ಪ್ರತಿ ಕೆಜಿಗೆ 40 ರೂ.ಗೆ ಇಳಿಕೆ ಆದರೂ ಆಶ್ಚರ್ಯ ಪಡಬೇಕಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.
ಬೆಲೆ ಇಳಿಕೆ?:
ಸದ್ಯ ಬೆಂಗಳೂರು ದಣ ಜಿಲ್ಲೆಯ ಮಾರುಕಟ್ಟೆಯಲ್ಲಿ ಸಗಟು ಖರೀದಿಯಲ್ಲಿ ತೆಂಗಿನ ಕಾಯಿ ಪ್ರತಿ ಕೆಜಿಗೆ 50 ರೂ.ವರೆಗೂ ರೈತರಿಗೆ ಸಿಗುತ್ತಿದೆ. ಯುಗಾದಿಯಲ್ಲಿ ತೆಂಗು ಬೆಲೆ 60-65 ರೂ.ಗೆ ತಲುಪಬಹುದು ಎನ್ನುವ ನಿರೀಕ್ಷೆ ಇತ್ತು. ಮತ್ತೊಂದೆರೆ ರಂಜಾನ್ಗೂ ಸಹ ತೆಂಗು ಬಳಕೆ ಆಗುವುದರಿಂದ ಬೆಲೆ ಇಳಿಕೆ ಆಗುವುದಿಲ್ಲ ಎನ್ನುವ ಬಲವಾದ ನಂಬಿಕೆ ರೈತರು ಮತ್ತು ಮಾರುಕಟ್ಟೆಯಲ್ಲಿ ಇತ್ತು.
ಕುಸಿದ ಬೇಡಿಕೆ
ಈಗ ಜಿಲ್ಲೆಯ ತೆಂಗಿನ ತೋಟಗಳಲ್ಲಿ ಹೆಚ್ಚಿನ ಸಲೇನೂ ಇಲ್ಲ. ಆದರೂ ಬೇಡಿಕೆ ಕುಸಿತವಾಗಲು ಕಾರಣಗಳನ್ನು ಅವಲೋಕಿಸಿದಾಗ ಹೊರ ರಾಜ್ಯದ ತೆಂಗು ರಾಜ್ಯಕ್ಕೆ ಮತ್ತೆ ಲಗ್ಗೆ ಇಟ್ಟಿದೆ ಎನ್ನುವುದು ವ್ಯಾಪಾರಸ್ಥರ ಅನಿಸಿಕೆ. ಜಿಲ್ಲೆಯ ತೆಂಗಿಗೆ ಹೋಟೆಲ್ಗಳಲ್ಲಿ ಬೇಡಿಕೆ ಹೆಚ್ಚಿದೆ, ಆದರೆ ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ವಾಣಿಜ್ಯ ಸಿಲಿಂಡರ್ ಪೂರೈಕೆ ವ್ಯತ್ಯಯ ಹಿನ್ನೆಲೆಯಲ್ಲಿ ಹೋಟೆಲ್ಗಳಲ್ಲೂ ತೆಂಗಿಗೆ ಬೇಡಿಕೆ ಕುಸಿದಿದೆ. ಇನ್ನು ನೆರೆಯ ತಮಿಳುನಾಡು ಮತ್ತು ಕೇರಳಂದಿಂದ ಹೆಚ್ಚು ತೆಂಗು ರಾಜ್ಯ ಮಾರುಕಟ್ಟೆಗೆ ಪ್ರವೇಶ ಪಡೆದುಕೊಂಡಿದೆ. ಈ ರಾಜ್ಯಗಳಿಂದ ಪ್ರತಿ ಟನ್ ತೆಂಗನ್ನು 42ರಿಂದ 45 ಸಾವಿರ ರೂ.ಗಳವರೆಗೆ ಪೂರೈಕೆ ಮಾಡುತ್ತಿರುವ ಕಾರಣ, ರಾಜ್ಯದ ತೆಂಗಿನ ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ.
ಇಳುವರಿಯೂ ಕುಸಿತ
ಜಿಲ್ಲೆಯಲ್ಲಿ ಸುಮಾರು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಚನ್ನಪಟ್ಟಣ ತಾಲೂಕು ಒಂದರಲ್ಲಿಯೇ ಸುಮಾರು 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಕಳೆದ ಹಲವಾರು ವರ್ಷಗಳಿಂದಲೂ ಬೆಂಕಿ ರೋಗ, ನುಸಿ ಪೀಡೆಯಂತಹ ರೋಗಗಳನ್ನು ರೈತರು ಎದುರಿಸಿದ್ದಾರೆ. ಈಗಲೂ ನುಸಿ ಪೀಡೆ ರೋಗ ವ್ಯಾಪಕವಾಗಿದೆ. ಕಳೆದ ವರ್ಷ ರಾಮನಗರ ಜಿಲ್ಲೆಯಲ್ಲಿ ಬಿಸಿಲ ತಾಪ 40 ಡಿಗ್ರಿ ಆಸುಪಾಸಿಗೆ ಬಂದು ತಲುಪಿತ್ತು. ಈ ಬಾರಿಯೂ ಬಿಸಿಲು ತಾಪ ಕಳೆದ ಸಾಲಿನ ದಾಖಲೆ ಮುರಿಯುವ ಸಾಧ್ಯತೆ ಇದೆ. ನೀರಾವರಿ ತೋಟದಲ್ಲಿಯೂ ತೆಂಗು ಬಿಸಿಲ ಬೇಗೆಗೆ ಸಾಯುವ ಹಂತಕ್ಕೆ ತಲುಪಿದ್ದವು. ಇದರ ಪರಿಣಾಮ ಇನ್ನೂ ತೆಂಗು ಇಳುವರಿ ಮೇಲೆ ಇದ್ದು, ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.
ಯುಗಾದಿಗೆ ತೆಂಗು ಬೆಲೆ ಏರಿಕೆ ಆಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ತಮಿಳುನಾಡು ಮತ್ತು ಕೇರಳಂ ರಾಜ್ಯದಿಂದ ಹೆಚ್ಚಿನ ಪ್ರಮಾಣದ ತೆಂಗು ಕಡಿಮೆ ಬೆಲೆಗೆ ರಾಜ್ಯದ ಮಾರುಕಟ್ಟೆಗೆ ಬರುತ್ತಿರುವುದರಿಂದ ರಾಜ್ಯದಲ್ಲಿ ತೆಂಗು ಬೆಳೆ ಕುಸಿತ ದಾಖಲಿಸಿದೆ.
ವಾಸು ಮುಕುಂದ, ತೆಂಗು ವ್ಯಾಪಾರಿ
ಕಳೆದ 3-4 ತಿಂಗಳ ಹಿಂದೆ 70 ರೂ ಆಸುಪಾಸಿನಲ್ಲಿದ್ದ ತೆಂಗು ಬೆಲೆ ಈಗ ದಿಢೀರ್ ಕುಸಿತ ಕಂಡಿದೆ. ತೋಟದಲ್ಲಿ ರೋಗ ಬಾದೆ ಹಾಗೂ ಬಿಸಿಲ ತಾಪಕ್ಕೆ ಫಸಲೂ ಇಲ್ಲ. ಹೀಗೆ ಆದರೆ ಮುಂದಿನ ದಿನಗಳಲ್ಲಿ ನಮಗೆ ಕಷ್ಟವಾಗಲಿದೆ.