ಚಿರತೆ ಸಾಂದರ್ಭಿಕ ಚಿರತೆ 
ಬೆಂಗಳೂರು ದಕ್ಷಿಣ

ಮಲೈ ಮಹದೇಶ್ವರ ಬೆಟ್ಟದ ಶಿವರಾತ್ರಿ ಪಾದಯಾತ್ರೆಗೆ ಚಿರತೆ ಆತಂಕ

ಪ್ರಮುಖ ಮುಖ್ಯಾಂಶಗಳು

  • ಮಹದೇಶ್ವರ ಬೆಟ್ಟದಲ್ಲಿ ಅವಢ
  • ಭಕ್ತನ ಸಾಯಿಸಿದ್ದ ಚಿರತೆ
  • ಬೆಳಿಗ್ಗೆ 7ರಿಂದ ಸಂಜೆ 4ರವರೆಗೆ ಪ್ರವೇಶ
ರಾಮನಗರ: ಪ್ರತಿ ವರ್ಷ ಶಿವರಾತ್ರಿಗೂ ಮುನ್ನಾ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಮಲೈ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳುತ್ತಿದ್ದ ಭಕ್ತರಿಗೆ ಈಗ ಚಿರತೆ ಭಯ ಆರಂಭಗೊಂಡಿದೆ.
ಪ್ರತಿ ವರ್ಷ ಶಿವರಾತ್ರಿಗೂ ಸುಮಾರು 5 ದಿನಗಳ ಮುಂಚಿತವಾಗಿ ಜಿಲ್ಲೆಯ ಕನಕಪುರ ತಾಲೂಕಿನ ಏಳಗಳ್ಳಿಯಲ್ಲಿ ಸೇರುವ ಸಾವಿರಾರು ಭಕ್ತರು, ಇಲ್ಲಿನ ಪ್ರಸಿದ್ಧ ತಾಯಿ ಮುದ್ಧಮ್ಮ ಸನ್ನಿಧಿಗೆ ಪೂಜೆ ಸಲ್ಲಿಸಿ ನಂತರ ಪಾದಯಾತ್ರೆಯನ್ನು ಕೈಗೊಳ್ಳುತ್ತಾರೆ. ಈ ಬಾರಿಯೂ ಫೆ.10ರಿಂದ ಏಳಗಳ್ಳಿಯಿಂದ ಪಾದಯಾತ್ರೆ ಹೊರಡಲಿದೆ.

ವಿವಿಧಡೆಯಿಂದ ಭಕ್ತರು

ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ವಿವಿಧ ಕಡೆಗಳಿಂದ ಬರುತ್ತಿದ್ದ ಮಲೈ
ಮಹದೇಶ್ವರ ಸ್ವಾಮಿ ಭಕ್ತರು ಜಾತ್ರೆಗೂ ಒಂದು ವಾರ ಮುನ್ನವೇ ಪಾದಯಾತ್ರೆಯನ್ನು ಕೈಗೊಳ್ಳುತ್ತಾರೆ. ಅದರಲ್ಲೂ ಪ್ರಮುಖವಾಗಿ ಕನಕಪುರ ತಾಲೂಕಿನ ಏಳಗಳ್ಳಿಯಿಂದ ಪಾದಯಾತ್ರೆ ಆರಂಭಿಸಿ ಸಂಗಮದ ಬೊಮ್ಮಸಂದ್ರ ಬಳಿ ಕಾವೇರಿ ನದಿಯನ್ನು ದಾಟಿ ಚಾಮರಾಜನಗರ ಜಿಲ್ಲೆಯನ್ನು ಗಡಿ ಪ್ರವೇಶ ಮಾಡಿ, ಅಲ್ಲಿಂದ ಶಾಗ್ಯ ಮಾರ್ಗವಾಗಿ ಕೌದಳ್ಳಿ ಮೂಲಕ ಮಲೈ ಮಹದೇಶ್ವರ ಬೆಟ್ಟವನ್ನು ತಲುಪುತ್ತಾರೆ. ಪಾದಯಾತ್ರೆ ಸಾಗುವ ದಾರಿಯುದ್ದಕ್ಕು ನೂರಾರು ಭಕ್ತರು ಅರವಂಟಿಗೆಗಳ ಮೂಲಕ ಪಾದಯಾತ್ರೆಯಲ್ಲಿ ಸಾಗುವ ಮಂದಿ ನೀರು ಮತ್ತು ಅನ್ನ ಆಹಾರವನ್ನು ಕೊಡುವ ವ್ಯವಸ್ಥೆಯನ್ನು ಮಾಡುತ್ತಾರೆ.

ಚಿರತೆ ಭಯ?

ಮಲೈ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದ ಭಕ್ತರೊಬ್ಬರನ್ನು ಚಿರತೆ ಸಾಯಿಸಿದ ಕಾರಣದಿಂದಾಗಿ ಪಾದಯಾತ್ರೆ ಮಾರ್ಗವನ್ನು ಅರಣ್ಯ ಇಲಾಖೆ ತಾತ್ಕಾಲಿಕ ಬಂದ್​ ಮಾಡಿತ್ತು. ಇದು ಜ.24ರವರೆಗೂ ಜಾರಿಯಲ್ಲಿ ಇರಲಿದೆ. ಇದರ ನಂತರವೂ ರಾತ್ರಿ ವೇಳೆಯಲ್ಲಿ ಕಾಲ್ನಡಿಗೆಯಲ್ಲಿ ಬರುವ ಯಾತ್ರಿಗಳು ಹಾಗೂ ಬೈಕ್​ನಲ್ಲಿ ಬರುವ ಭಕ್ತರಿಗೂ ಸಹ ನಿಷೇಷ ಹೇರುವ ಸಾಧ್ಯತೆ ಇದೆ. ಇದರ ಪರಿಣಾಮವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಿಂದ ಬರುವ ಪಾದಯಾತ್ರಿಗಳು ಸಹ ಅನುಭವಿಸಬೇಕಾದ ಅನಿವಾರ್ಯತೆ ಇದೆ. ಇದರ ಜತೆಗೆ ಮಲೈ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಸಹ ಭಕ್ತರಿಗೆ ರಾತ್ರಿ ವೇಳೆ ಪಾದಯಾತ್ರೆ ಕೈಗೊಳ್ಳದಂತೆ ಸಲಹೆ ನೀಡಿದೆ.

ಸಮಯ ನಿಗಧಿ

ಮಲೈ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳುವ ಭಕ್ತರು ಜಿಲ್ಲೆಯ ಸಂಗಮದ ಬಳಿ ಇರುವ ಬೊಮ್ಮಸಂದ್ರದ ಬಳಿ ಕಾವೇರಿ ನದಿಯನ್ನು ದಾಟಬೇಕು. ಬಹುತೇಕ ಸುಮಾರು 90 ಕಿಮೀ ಪ್ರಯಾಣವನ್ನು ಕಾವೇರಿ ವನ್ಯ ಜೀವಿಧಾಮ ಮತ್ತು ಮಲೈಮಹದೇಶ್ವರ ವನ್ಯ ಜೀವಿಧಾಮದ ಮೂಕವೇ ಹಾದು ಹೋಗಬೇಕು. ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆಯಲ್ಲಿ ಅರಣ್ಯದಲ್ಲಿ ಭಕ್ತರ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಎರಡೂ ವನ್ಯ ಜೀವಿಧಾಮದಲ್ಲಿ ಆನೆಗಳ ಸಂಚಾರವೂ ಹೆಚ್ಚಿರುವ ಕಾರಣ ಅನಾಹುತ ನಡೆದರೆ ತಕ್ಷಣಕ್ಕೆ ಇದನ್ನು ನಿಯಂತ್ರಿಸುವುದು ಸಹ ಅರಣ್ಯ ಇಲಾಖೆಗೆ ಕಷ್ಟ ಎನ್ನಲಾಗುತ್ತಿದೆ. ಆದರೆ ಈ ಸಂಬಂಧ ಬೆಂಗಳೂರು ದಣ ಜಿಲ್ಲೆ ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಕೆ ಅಧಿಕಾರಿಗಳು ಸಭೆ ನಡೆಸಿ ನಿರ್ಧಾರ ಮಾಡಲಿದ್ದಾರೆ. ಇದರ ನಡುವೆ ಚಾಮರಾಜನಗರ ಜಿಲ್ಲಾಢಳಿತ ಬೆಳಿಗ್ಗೆ 7ರಿಂದ ಸಂಜೆ ನಾಲ್ಕವರೆಗೆ ಮಾತ್ರ ಪಾದಯಾತ್ರಿಗಳಿಗೆ ಬೆಟ್ಟ ಹತ್ತಲು ಅವಕಾಶ ನೀಡಿದೆ.

ರಾತ್ರಿ ವೇಳೆಯೇ ಯಾತ್ರೆ

ಸಾಮಾನ್ಯವಾಗಿ ಪಾದಯಾತ್ರೆ ಕೈಗೊಳ್ಳುವ ಭಕ್ತರು ಕಾವೇರಿ ನದಿಯನ್ನು ದಾಡಿದ ನಂತರ ರಾತ್ರಿ ವೇಳೆಯಲ್ಲಿಯೇ ಹೆಚ್ಚಿನ ಪ್ರಯಾಣವನ್ನು ನಡೆಸುತ್ತಾರೆ. ಬೇಸಿಗೆ ಸಣ್ಣಪ್ರಮಾಣದಲ್ಲಿ ಆರಂಭಗೊಂಡು ಬೆಳಗ್ಗಿನ ಸಮಯದಲ್ಲಿ ಬಿಸಿಲು ಹೆಚ್ಚಾಗುವ ಕಾರಣ ರಾತ್ರಿ ವೇಳೆಯಲ್ಲಿ ಪ್ರಯಾಣ ನಡೆಸುತ್ತಾರೆ. ಒಂದು ವೇಳೆ ಇಲಾಖೆಗಳು ರಾತ್ರಿ ವೇಳೆ ಅರಣ್ಯ ಸಂಚಾರ ನಿಷೇಧಿಸಿದರೆ ಸಾಕಷ್ಟು ಭಕ್ತರಿಗೆ ತೊಂದರೆ ಆಗುವುದು ಖಚಿತ.

ಏಳಗಳ್ಳಿಯಲ್ಲಿ ಫೆ.10ರಂದು ಅನ್ನದಾಸೋಹ ಹಮ್ಮಿಕೊಳ್ಳಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಪಾದಯಾತ್ರೆ ನಡೆಯಲಿದೆ.

— ಬಸವರಾಜು, ಏಳಗಳ್ಳಿ, ಗ್ರಾಮದ ಪ್ರಮುಖರು, ಏಳಗಳ್ಳಿ

ಮಲೈ ಮಹದೇಶ್ವರ ಬೆಟ್ಟದಲ್ಲಿ ನಡೆದ ಟನೆ ನಂತರ ನಮ್ಮಲ್ಲಿ ಪಾದಯಾತ್ರೆ ರಾತ್ರಿ ವೇಳೆ ನಿಷೇಧ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ. ಪಾದಯಾತ್ರಿಗಳ ಸಂಬಂಧ ಅಧಿಕಾರಿಗಳ ಸಭೆ ನಂತರ ಈ ಬಗ್ಗೆ ನಿರ್ಧಾರವಾಗುವ ಸಾಧ್ಯತೆ ಇದೆ.

— ಅನಿಲ್​ ಕುಮಾರ್​, ಆರ್​ಎಫ್,ಓ ಸಂಗಮ ವನ್ಯ ಜೀವಿ ವಲಯ