ಪ್ರಮುಖ ಮುಖ್ಯಾಂಶಗಳು
ಕನಕಪುರ: ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ಏಳುಬೀಳುಗಳ ಸುಧೀರ್ಘ ಪಯಣದಲ್ಲಿ ಆದರ್ಶ ಗೃಹಣಿಯಾಗಿ, ತಮ್ಮ ಸರಳತೆ, ಸಂಸ್ಕಾರ ಮತ್ತು ಕುಟುಂಬ ಮೌಲ್ಯಗಳ ಸಾಕರ ಮೂರ್ತಿಯಾಗಿ ಚನ್ನಮ್ಮ ನಡೆದುಕೊಂಡಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ವೈಎಸ್‌ವಿ ದತ್ತ ತಿಳಿಸಿದರು.
ನಗರದ ಪುರಸಭಾ ಮೈದಾನದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ದಿವಂಗತ ಚನ್ನಮ್ಮನವರ ಸ್ಮರಣಾರ್ಥ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಪ್ಪಟ ಆದರ್ಶ ಗ್ರಾಮೀಣ ಸಂಸ್ಕೃತಿ, ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡ ಮಹಿಳೆಯಾಗಿದ್ದರು, ದೇವೇಗೌಡರು ರಾಜ್ಯದ ಹಾಗೂ ದೇಶದ ಉನ್ನತ ಸ್ಥಾನಗಳಲ್ಲಿದ್ದರೂ ಸಹ ಅವರ ಮನೆಗೆ ಬಂದವರಿಗೆ ಗೌರವ ನೀಡಿ ಆತಿಥ್ಯ ನೀಡುತ್ತಿದ್ದರು, ಬಡವ ಶ್ರೀಮಂತ ಎಂಬುವ ಭೇದ ಅವರಲ್ಲಿರಲಿಲ್ಲ, ಬೆಂಗಳೂರಿನ ಸರ್ಕಾರಿ ಬಂಗಲೆಯಲ್ಲಿದ್ದರೂ ಸಹ ಅಲ್ಲಿಯೂ ಸಹ ಹಸು ಸಾಗಾಣಿಕೆ ಮಾಡಿ ಹಾಲು ಕರೆಯುತ್ತಿದ್ದ ಮಹಾನ್ ಗ್ರಾಮೀಣ ಸೊಗಡಿನ ಮಹಿಳೆ ಎಂದು ವರ್ಣಿಸಿದರು. ಅವರು ಜೀವನದುದ್ದಕ್ಕೂ ಎಂದೂ ಸಹ ರಾಜಕೀಯ ಮೈಗಂಟಿಸಿಕೊಳ್ಳಲಿಲ್ಲ, ಇವರು ನಡೆದು ಬಂದ ದಾರಿಯನ್ನು ಇಂದಿನ ಸಮಾಜ ಮುಂದುವರಿಸುದ್ದೇ ಆದಲ್ಲಿ ಸ್ವಾಸ್ಥ ಸಮಾಜವನ್ನು ಕಾಣಬಹುದು ಎಂದು ಹೇಳಿದರು.
ಮಾಜಿ ಶಾಸಕ ಅಂದಾನಿ ಮಾತನಾಡಿ, ಜೆಡಿಎಸ್ ಹಿರಿಯ ಮುಖಂಡ ದತ್ತಾರವರ ಮಾರ್ಗದರ್ಶನದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸಾನಿಧ್ಯ ಪ್ರಾಪ್ತವಾಯಿತು, ಅವರ ಗರಡಿಯಲ್ಲಿ ನಾನು ರಾಜಕೀಯಪಟುವಾಗಿ ಬೆಳೆದು ಬಂದೆ, ದಿವಂಗತ ಚನ್ನಮ್ಮನವರು ತಮ್ಮ ಕುಟುಂಬಕ್ಕೆ ಮಾತ್ರ ತಾಯಿಯಾಗಿರಲಿಲ್ಲ, ಸಮಾಜದ ಎಲ್ಲಾ ವರ್ಗದವರನ್ನು ತಮ್ಮ ಕುಟುಂಬ ಸದಸ್ಯರನ್ನಾಗಿ ಕಂಡ ಶ್ರೇಷ್ಠ ಮಹಿಳೆ ಅವರ ಜೀವನ ಶೈಲಿಯನ್ನು ಇಂದಿನ ಸಮಾಜದ ಮಹಿಳೆಯರು ಅನುಸರಿಸಲು ಕರೆ ನೀಡಿದರು.
ಶಿವಾಲ್ದಗಿರಿ ಮಠದ ಅನ್ನದಾನೇಶ್ವರ ಸ್ವಾಮೀಜಿ, ಮರಳೆಗವಿ ಮಠದ ಶಿವರುದ್ರ ಸ್ವಾಮಿಜಿ, ಬೇಗಲ ಮಠದ ಚನ್ನಬಸವ ರಾಜ ಸ್ವಾಮೀಜಿ ಆಶೀರ್ವಚನ ನೀಡಿದರು.
ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷ ಜಯಮುತ್ತು, ರಾಮನಗರ ತಾಲೂಕು ಅಧ್ಯಕ್ಷ ಶಿವಲಿಂಗಯ್ಯ, ರಾಜ್ಯ ಜೆಡಿಎಸ್ ಯುವ ಉಪಾಧ್ಯಕ್ಷ ಚಿನ್ನಸ್ವಾಮಿ, ದಿಶಾ ಸಮಿತಿ ಸದಸ್ಯರುಗಳಾದ ರಾಜೇಶ್, ಶೋಭಾ, ಗ್ರಾಮೀಣ ಮಹಿಳಾ ಅಧ್ಯಕ್ಷ ಪವಿತ್ರ, ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಹಿರಿಯ ಜೆಡಿಎಸ್ ಮುಖಂಡ ಸಿದ್ದಮರಿಗೌಡ, ನಗರಸಭೆ ಮಾಜಿ ಸದಸ್ಯ ಸ್ಟುಡಿಯೋ ಚಂದ್ರು, ಯುವ ಮುಖಂಡರುಗಳಾದ ಅರಳಾಳು ರಾಜೇಂದ್ರ, ತಿಮ್ಮೇಗೌಡ, ಜೈರಾಮೇಗೌಡ, ಮಹಿಳಾ ಮುಖಂಡೆ ರಮ್ಯಾ, ಮರಳವಾಡಿ ಉಮಾಶಂಕರ್ ಸೇರಿದಂತೆ ನೂರಾರು ಕಾರ್ಯಕರ್ತರು ಸಮಾರಂಭದಲ್ಲಿ ಹಾಜರಿದ್ದರು.