ರಾಮನಗರ ತಾಲೂಕು ಕೈಲಾಂಚ ಹೋಬಲಿ ತೆಂಗಿನಕಲ್ಲು ಗ್ರಾಮದ ಚಂದ್ರಶೇಖರ್​ ಅವರ ಮಾವಿನ ತೋಟ. 
ಬೆಂಗಳೂರು ದಕ್ಷಿಣ

ಆನೆಹಾವಳಿ ಮಧ್ಯೆಯೇ ಚಂದ್ರಶೇಖರ್​ ಕೃಷಿ ಸಾಧನೆ

ರಾಮನಗರ: ತಾಲೂಕಿನ ತೆಂಗಿನಕಲ್ಲು ಭಾಗದಲ್ಲಿ ವರ್ಷದ ಎಲ್ಲ್ಲ ದಿನಗಳಲ್ಲೂ ಆನೆಗಳ ಉಪಟಳ ಸಾಮಾನ್ಯ. ರಾತ್ರಿಯಾದರೆ ಸಾಕು ಅರಣ್ಯದಿಂದ ಹೊರಬಂದು ರೈತರ ಜಮೀನಿಗೆ ಲಗ್ಗೆ ಇಟ್ಟು ಫಸಲು ಹಾಳು ಮಾಡುತ್ತವೆ. ಆದರೂ ಎದೆಗುಂದದ ತೆಂಗಿನಕಲ್ಲು ಗ್ರಾಮದ ರೈತ ಚಂದ್ರಶೇಖರ್​ ಸಮಗ್ರ ಕೃಷಿ ಅನುಸರಿಸಿ ತೋಟದಲ್ಲಿ ತೆಂಗು, ಮಾವು, ರೇಷ್ಮೆ, ರಾಗಿ ಮತ್ತಿತರ ಬೆಳೆ ಬೆಳೆಯುವ ಮೂಲಕ ಕೃಷಿಯಲ್ಲಿ ಖುಷಿ ಕಾಣುತ್ತಿದ್ದು, ಆರ್ಥಿಕ ಸದೃಢತೆ ಸಾಧಿಸುತ್ತಿದ್ದಾರೆ.
ಚಂದ್ರಶೇಖರ್​ ಅರಣ್ಯದಂಚಿನಲ್ಲಿಯೇ 5 ಎಕರೆ ಕೃಷಿ ಜಮೀನು ಹೊಂದಿದ್ದು, ತೆಂಗು, ಮಾವು ತೋಟವಿದೆ. ಕೃಷಿಯಲ್ಲಿ ಯಶಸ್ಸು ಕಾಣಬೇಕೆಂಬುದು ಇವರ ಹಂಬಲ. ಇದಕ್ಕೆ ಕುಟುಂಬ ಬೆನ್ನೆಲುಬಾಗಿ ನಿಂತಿದೆ. ಆಧುನಿಕ ಕೃಷಿ ಪದ್ಧತಿ ಮೂಲಕ ವಿವಿಧ ಬೆಳೆೆ ಬೆಳೆಯುತ್ತಿದ್ದು, ಕೃಷಿಯಲ್ಲಿ ಲಾಭ ಗಳಿಸುವ ಮೂಲಕ ಮಾದರಿ ರೈತ ಎಂದೇ ಗುರುತಿಸಿಕೊಂಡಿದ್ದಾರೆ. ತೆಂಗು, ಮಾವು ನೆಟ್ಟು ಸುಮ್ಮನಾಗದ ಇವರು ತೆಂಗು, ಮಾವು ತೋಟಗಳಲ್ಲೇ ರಾಗಿ, ಸಪೋಟ, ತರಕಾರಿ ಬೆಳೆ ಬೆಳೆದು ಉತ್ತಮ ಇಳುವರಿ ಸಹಿತ ಲಾಭ ಗಳಿಸುತ್ತಿದ್ದಾರೆ. ನೀರಾವರಿ ಉಪಯೋಗಕ್ಕಾಗಿ ಒಂದು ಬೋರ್​ವೆಲ್​ ಕೊರೆಸಿಕೊಂಡಿದ್ದು, ಅದರಿಂದಲೇ ಎಲ್ಲ ಬೆಳೆಗೆ ನೀರು ಹಾಯಿಸುತ್ತಿದ್ದಾರೆ.
ಹನಿ ನೀರಾವರಿ: ಬೋರ್​ವೆಲ್​ನಲ್ಲಿ ಸಮೃದ್ಧವಾಗಿ ನೀರಿದ್ದರೂ ಮಿತ ಬಳಕೆಗೆಒತ್ತು ಕೊಟ್ಟಿರುವ ಇವರು, ರೇಷ್ಮೆ ತೋಟ, ಮಾವು, ಜಾನುವಾರುಗಳಿಗೆ ಮೇವಿಗೆ, ತೆಂಗಿನಮರಗಳಿಗೆ ಮತ್ತಿತರ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಫಸಲು ಪಡೆಯುತ್ತಿದ್ದಾರೆ. ಹೈನುಗಾರಿಕೆ: ಉಪ ಕಸುಬಾಗಿ ಹೈನುಗಾರಿಕೆ ಅವಲಂಬಿಸಿರುವ ಇವರು, ನಾಲ್ಕು ಮಿಶ್ರತಳಿ ಹಸುಗಳನ್ನು ಸಾಕಿ ಹಾಲು ಉತ್ಪಾದಿಸುತ್ತಿದ್ದಾರೆ. ಜತೆಗೆ ತಮ್ಮ ಜಮೀನಿಗೆ ಕೊಟ್ಟಿಗೆ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಹಸು ಸಾಕಾಣಿಕೆಗೆ ಬೇಕಾಗುವ ರಸ ಮೇವನ್ನು ಸಹ ಇವರೇ ಉತ್ಪಾದಿಸುತ್ತಿರುವ ಕಾರಣ ಖರ್ಚು ಕಡಿಮೆಯಾಗುತ್ತಿದೆ.
ಜೀವಾಮೃತ: ರಾಸಾಯನಿಕ ರಸಗೊಬ್ಬರದತ್ತ ಮುಖ ಮಾಡದ ಚಂದ್ರಶೇಖರ್​ ಸ್ವತ@ ಹಸುವಿನ ಸಗಣಿಯಲ್ಲಿ ಜೀವಾಮೃತ ತಯಾರು ಮಾಡಿ ಗಿಡಗಳಿಗೆ ನೀಡುತ್ತಾ ಸಾವಯವ ಕೃಷಿಯಲ್ಲಿ ಬೆಳೆೆ ಬೆಳೆಯುತ್ತಿದ್ದಾರೆ.
ಎರೆಹುಳು ಗೊಬ್ಬರ
ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರಕ್ಕೆ ಒತ್ತುಕೊಟ್ಟಿದ್ದು, ಎರೆಹುಳು ಗೊಬ್ಬರ ಮಾಡಲು ಜಮೀನಿನಲ್ಲಿ ತೊಟ್ಟಿ ನಿರ್ಮಾಣ ಮಾಡಿಕೊಂಡಿದ್ದೇವೆ, ಜಮೀನಿನಲ್ಲಿ ದೊರೆಯುವ ಒಣಗಿದ ತ್ಯಾಜ್ಯದ ಎಲೆಗಳು, ತೆಂಗಿನಗರಿ, ರೇಷ್ಮೆ ಸಾಕಾಣಿಕೆಯಿಂದ ಬಂದ ಸೊಪ್ಪಿನ ತ್ಯಾಜ್ಯ, ಹುಳು ಹಿಕ್ಕೆ ತೊಟ್ಟಿಗೆ ಹಾಕಿ ಗೊಬ್ಬರ ಮಾಡಿ ಅದರಲ್ಲಿ ಎರೆಹುಳು ಉತ್ಪಾದಿಸಿ, ಅದರಿಂದ ಬಂದ ಗೊಬ್ಬರವನ್ನು ರೇಷ್ಮೆ ಮತ್ತು ತೆಂಗು, ಮಾವಿನ ಗಿಡಗಳಿಗೆ ನೀಡುತ್ತಾ ಬಂದಿದ್ದೇವೆ. ಇದರಿಂದ ನಮಗೆ ರೋಗ ಕಡಿಮೆ, ಫಸಲು ಹೆಚ್ಚು ಪಡೆಯುತ್ತಿದ್ದೇವೆ ಎನ್ನುತ್ತಾರೆ ರೈತ ಚಂದ್ರಶೇಖರ್​.
ಕೈ ಹಿಡಿದ ರೇಷ್ಮೆ
ವರ್ಷದ 365 ದಿನವೂ ರೇಷ್ಮೆ ಬೆಳೆಯಲ್ಲಿ ತೊಡಗಿಕೊಂಡಿರುವ ಚಂದ್ರಶೇಖರ್​, ಎರಡು ಬ್ಯಾಚ್​ನಲ್ಲಿ ಒಂದು ಬಾರಿಗೆ 60, 80, 100 ಮೊಟ್ಟೆಯಂತೆ ರೇಷ್ಮೆ ಬೆಳೆಯುತ್ತಿದ್ದಾರೆ. ಒಂದೂವರೆ ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆ ಇದ್ದು, ಉಳಿದಂತೆ ಮಾವು& ತೆಂಗು 4 ಎಕರೆ ಪ್ರದೇಶದಲ್ಲಿದೆ. 20 ಗುಂಟೆಯಲ್ಲಿ ರಾಗಿ, ಮಾವು, ತೆಂಗಿನತೋಟದಲ್ಲಿ ಉಳಿದಂತೆ ಜೋಳ, ಜಾನುವಾರು ಮೇವನ್ನು ಬೆಳೆಯುತ್ತಿದ್ದಾರೆ. ಇನ್ನುಳಿದ ಖಾಲಿ ಜಾಗದಲ್ಲಿ ಹುರುಳಿ, ಮನೆ ಬಳಕೆಗೆ ಸೊಪ್ಪು, ತರಕಾರಿ ಬೆಳೆ ಬೆಳೆಯುತ್ತಿದ್ದಾರೆ.
ಮಾವು,ರಾಗಿ ಬೆಳೆ
ವಾಣಿಜ್ಯ ಬೆಳೆಯಾಗಿ ಮಾವು ಬೆಳೆಯುತ್ತಿರುವ ಇವರು ತಾವೇ ಮಾವನ್ನು ಮಾರುಕಟ್ಟೆಗೆ ಸಾಗಣೆ ಮಾಡಿ ವ್ಯಾಪಾರ ನಡೆಸುತ್ತಾರೆ. ಮಾವು ತೋಟಕ್ಕೆ ಔಷಧ ಸಿಂಪಡಣೆ, ನೀರು ಎಲ್ಲವನ್ನೂ ಇವರೇ ಮಾಡುತ್ತಿದ್ದಾರೆ. ಆ ಮೂಕಲಕ ಕೃಷಿ ಕೂಲಿ ಕಾರ್ಮಿಕರ ಕೊರತೆ ನೀಗಿಸಿಕೊಂಡಿದ್ದಾರೆ. ನಾಟಿ ಕೋಳಿ ಸಾಕಾಣಿಕೆಗೆ ಒತ್ತು ನೀಡಿದ್ದು, ತೋಟದಲ್ಲಿ ಪ್ರತ್ಯೇಕ ಕೋಳಿ ಸಾಕಣೆಗೆ ಮುಂದಡಿ ಇಟ್ಟಿದ್ದಾರೆ.
"

ರಾಸಾಯನಿಕ ಗೊಬ್ಬರ ಬಳಕೆ ಮಾಡಿ ಬೆಳೆ ಬೆಳೆಯುವ ಬದಲು ಸಾವಯವ ಗೊಬ್ಬರ ಭೂಮಿಗೆ ನೀಡುತ್ತಾ ಕೃಷಿಗೆ ಒತ್ತು ನೀಡಿದ್ದೇವೆ. ಇದರಿಂದ ನಮಗೆ ಖರ್ಚು ಕೂಡ ಕಡಿಮೆಯಾಗಿದೆ. ಕ್ರಿಮಿ ಕೀಟಗಳ ಬಾಧೆ ಇಲ್ಲದೆ ಉತ್ತಮ ಫಸಲು ಕೈ ಸೇರುತ್ತಿದೆ. ರೇಷ್ಮೆ ಕೈ ಹಿಡಿದಿದೆ. ಮತ್ತಷ್ಟು ಆಧುನಿಕತೆಯೊಂದಿಗೆ ತೋಟದ ಬೆಳೆ, ಹಣ್ಣಿನ ಗಿಡ ಬೆಳೆಯುವ ಹಂಬಲವಿದೆ.

"

ಚಂದ್ರಶೇಖರ್​ ಪ್ರಗತಿಪರ ಮಾದರಿ ಕೃಷಿಕ. ಹೊಸ ಬೆಳೆಯ ಬಗ್ಗೆ ಅನ್ವೇಷಣೆ ಮಾಡುತ್ತಿರುತ್ತಾರೆ. ಮಿಶ್ರ ಬೇಸಾಯ ಪದ್ಧತಿಯಲ್ಲಿ ಉತ್ತಮ ರಾಗಿ ಬೆಳೆಯುತ್ತಾರೆ. ಸಾವಯವ ಕೃಷಿಯತ್ತ ಒಲವು ಹೆಚ್ಚಿದ್ದು ಉತ್ತಮ ಕೃಷಿಯಲ್ಲಿ ತೊಡಗಿಸಿಕೊಂಡು ಲಾಭದತ್ತ ಸಾಗಿದ್ದಾರೆ. ಕೃಷಿ ಇಲಾಖೆ ಕಾಲಕಾಲಕ್ಕೆ ಬೆಳೆಗಳ ಬಗ್ಗೆ ಮಾಹಿತಿ ನೀಡಿ ಸರ್ಕಾರದ ಸವಲತ್ತುಗಳ ಮಾಹಿತಿ ನೀಡಿ ಕೃಷಿಗೆ ಉತ್ತೇಜನ ನೀಡುತ್ತಿದೆ.