ಮಾಗಡಿ ತಾಲೂಕು ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್ ಬಳಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ. 
ಬೆಂಗಳೂರು ದಕ್ಷಿಣ

ವಾಹನ ಮೇಲೆ ಕಳಚಿ ಬಿದ್ದ ಸಿಮೆಂಟ್ ಅಚ್ಚು

ಪ್ರಮುಖ ಮುಖ್ಯಾಂಶಗಳು

  • ವಾಹನ ಮೇಲೆ ಕಳಚಿ ಬಿದ್ದ ಸಿಮೆಂಟ್ ಅಚ್ಚು
ಮಾಗಡಿ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಿಪ್ಪಸಂದ್ರ ಮತ್ತು ತಾಳೇಕೆರೆ ಹ್ಯಾಂಡ್ ಪೋಸ್ಟ್ ಕೈಮರ ಬಳಿ ನಡೆಯುತ್ತಿರುವ ರಸ್ತೆ ಮೇಲ್ಸೇತುವೆ (್ಲೈ ಓವರ್) ಕಾಮಗಾರಿ ಸಾರ್ವಜನಿಕರ ಪಾಲಿಗೆ ಯಮನಪಾಶವಾಗಿ ಪರಿಣಮಿಸಿದೆ.
ಇಂತಹ ಜನನಿಬಿಡ ಪ್ರದೇಶದಲ್ಲಿ ಕಾಮಗಾರಿ ನಡೆಸುವಾಗ ಪಾಲಿಸಬೇಕಾದ ಯಾವುದೇ ಪ್ರಾಥಮಿಕ ಸುರಕ್ಷತಾ ಕ್ರಮಗಳು ಇಲ್ಲಿ ಕಾಣಿಸುತ್ತಿಲ್ಲ. ಕನಿಷ್ಠ ಸುರಕ್ಷತಾ ನಿಯಮಗಳನ್ನು ಪಾಲಿಸದೆ, ಕಾಮಗಾರಿ ನಡೆಸುತ್ತಿರುವುದರಿಂದ ಸಾರ್ವಜನಿಕರು ಹಾಗೂ ವಾಹನ ಚಾಲಕರು ನಿತ್ಯ ಭಯದಲ್ಲೇ ಸಂಚರಿಸುವಂತಾಗಿದೆ.
ಕೂದಲೆಳೆಯಲ್ಲಿ ಪಾರು!: ತಾಲೂಕಿನ ತಿಪ್ಪಸಂದ್ರ ಕೈಮರದ ಬಳಿ ರಸ್ತೆ ಮೇಲ್ಸೇತುವೆಗೆ ಭಾರಿ ಗಾತ್ರದ ಸಿಮೆಂಟ್ ಅಚ್ಚುಗಳನ್ನು (ಗರ್ಡರ್) ಅಳವಡಿಸುತ್ತಿದ್ದ ವೇಳೆ ಮಂಗಳೂರಿನಿಂದ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ ಟೆಂಪೋಂದರ ಮೇಲೆ ಸೇತುವೆಯ ಮೇಲ್ಭಾಗದಿಂದ ಸಿಮೆಂಟ್ ಅಚ್ಚಿನ ತುಂಡು ದಿಢೀರನೆ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಕೂದಲೆಳೆಯಲ್ಲಿ ಪಾರಾಗಿದ್ದಾನೆ. ಸಿಮೆಂಟ್ ತುಂಡು ಬಿದ್ದ ಬೆನ್ನಲ್ಲೇ ಆಕ್ರೋಶಗೊಂಡ ಟೆಂಪೋ ಚಾಲಕ ಮತ್ತು ಸ್ಥಳೀಯರು, ಅಲ್ಲಿನ ಕಾಮಗಾರಿ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡರು. ಕೆಲಕಾಲ ಭಾರಿ ವಾಹನ ದಟ್ಟಣೆ ಉಂಟಾಗಿ, ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಸ್ಥಳೀಯ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಮೇಲ್ಭಾಗದಿಂದ ಕಲ್ಲು, ಸಿಮೆಂಟ್ ಬೀಳದಂತೆ ತಡೆಯುವ ಯಾವುದೇ ಸುರಕ್ಷತಾ ನೆಟ್‌ಗಳನ್ನು ಅಳವಡಿಸಿಲ್ಲ. ಕಾಮಗಾರಿ ನಡೆಯುವ ಸ್ಥಳ ಮತ್ತು ಸಾರ್ವಜನಿಕರು ಸಂಚರಿಸುವ ರಸ್ತೆಯ ನಡುವೆ ಸೂಕ್ತ ವಿಭಜಕಗಳಾಗಲಿ, ಎಚ್ಚರಿಕೆ ಫಲಕಗಳಾಗಲಿ ಅಳವಡಿಸಿಲ್ಲ. ಇಷ್ಟು ದೊಡ್ಡಮಟ್ಟದ ಕಾಮಗಾರಿ ನಡೆಯುತ್ತಿದ್ದರೂ ಸ್ಥಳದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ ಅಥವಾ ಸುರಕ್ಷತಾ ಇಂಜಿನಿಯರ್‌ಗಳಾಗಲಿ ಇರದೆ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಹೋರಾಟದ ಎಚ್ಚರಿಕೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ಕುಂಭಕರ್ಣ ನಿದ್ದೆಯಿಂದ ಎದ್ದೇಳಬೇಕಿದೆ. ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. ಇಂತಹ ಬೇಜವಾಬ್ದಾರಿತನ ಪದೇಪದೆ ಮರುಕಳಿಸುತ್ತಿದೆ. ಕೂಡಲೇ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಯೇ ಕಾಮಗಾರಿ ಮುಂದುವರಿಸಬೇಕು. ಇಲ್ಲದಿದ್ದರೆ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕು ರೈತಸಂಘದ ಅಧ್ಯಕ್ಷ ಗೋವಿಂದರಾಜು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರ ಪ್ರಶ್ನೆ:ಕೋಟ್ಯಂತರ ರೂ. ವೆಚ್ಚದ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಹೆದ್ದಾರಿ ಪ್ರಾಧಿಕಾರಕ್ಕೆ ಸಾರ್ವಜನಿಕರ ಜೀವ ಎಂದರೆ ಅಷ್ಟೊಂದು ಹಗುರವೇ? ತಾಂತ್ರಿಕವಾಗಿ ಅತ್ಯಾಧುನಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರದಿಂದ ಹಣ ಬಿಡುಗಡೆಯಾಗುದ್ದಿಲ್ಲವೆ? ಏನಾದರೂ ಅನಾಹುತ ಸಂಭವಿಸಿ ಪ್ರಾಣಹಾನಿಯಾದರೆ ಅದಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ರಸ್ತೆಯಿಂದ ಈಗಾಗಲೇ ನೂರಾರು ಮಂದಿ ಅಪಘಾತದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಬೃಹತ್ ಹೋರಾಟ ಮಾಡಿದ ಪರಿಣಾಮ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ. ಆದೆರೆ ಯಾವುದೇ ಮುನ್ನೆಚರಿಕೆ ಇಲ್ಲದೇ ಕಾಮಗಾರಿ ನಡೆಸುತ್ತಿರುವುದರಿಂದ ಪ್ರಾಣ ಭಯದಲ್ಲೇ ವಾಹನ ಚಲಾಯಿಸುವಂತಾಗಿದೆ.
- ಗೋವಿಂದರಾಜು,ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ
4 ಎಂಜಿಡಿ 3
ಮಾಗಡಿ ತಾಲೂಕು ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್ ಬಳಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ.